ಹುಬ್ಬಳ್ಳಿ: ಇಲ್ಲಿಯ ಗೋಕುಲ ರಸ್ತೆ ವಿಮಾನ ನಿಲ್ದಾಣ ಎದುರಿನ ಮಿಸ್ಕಿನ್ ಲಾನ್ಸನಲ್ಲಿ ಹುಬ್ಬಳ್ಳಿ ಕೆನ್ನೆಲ್ ಅಸೋಸಿಯೇಶನ್ ವತಿಯಿಂದ ಅ. 12ರಂದು ಬೆಳಗ್ಗೆ 9ರಿಂದ ಸಂಜೆವರೆಗೆ ಎಲ್ಲ ತಳಿಗಳ ಮುಕ್ತ ಶ್ವಾನ ಪ್ರದರ್ಶನವನ್ನು ಏರ್ಪಡಿಸಲಾಗಿದೆ ಎಂದು ಸಂಸ್ಥೆಯ ಸ್ಥಾಪಕ ಹಾಗೂ ಕಾರ್ಯದರ್ಶಿ ಬಾನುಚಂದ್ರ ಹೊಸಮನಿ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ದ್ವೀತಿಯ ರಾಷ್ಟ್ರ ಮಟ್ಟದ ಪ್ರದರ್ಶನವಾಗಿದ್ದು, ಕರ್ನಾಟಕ, ಆಂಧ್ರ ಪ್ರದೇಶ, ತಮಿಳನಾಡು, ಕೇರಳ, ಗೋವಾ ಮುಂತಾದ ರಾಜ್ಯಗಳಿಂದ 400ಕ್ಕೂ ಹೆಚ್ಚು ವಿವಿಧ ಜಾತಿಯ ಶ್ವಾನಗಳು ಪ್ರದರ್ಶನಕ್ಕೆ ಬರುವ ನಿರೀಕ್ಷೆ ಇದೆ ಎಂದರು.
ಭಾರತೀಯ ಶ್ವಾನ ತಳಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಪ್ರದರ್ಶನ ನಡೆಸಲಾಗುತ್ತಿದೆ. ನಿರ್ಣಾಯಕರಾಗಿ ಶರತ್ ಶರ್ಮಾ, ಯಶೋಧರಾ ಅವರು ಭಾಗವಹಿಸುವರು ಎಂದರು.
ಅಂದು ಸಂಜೆ 5.30ಕ್ಕೆ ಪ್ರದರ್ಶನ ಹಾಗೂ ವಿವಿಧ ಸ್ಪರ್ಧೆಯಲ್ಲಿ ವಿಜೇತ ಶ್ವಾನಗಳ ಮಾಲೀಕರಿಗೆ ಪ್ರಶಸ್ತಿ ವಿತರಣೆ ಮಾಡಲಾಗುವುದು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶಾಸಕ ಮಹೇಶ ಟೆಂಗಿನಕಾಯಿ ಪಾಲ್ಗೊಳ್ಳುವರು ಎಂದರು.
ಸಂಘಟನೆಯ ವಿನಾಯಕ ಪಾಟೀಲ, ಕಿಶೋರ ನಾಡಗೇರ, ಆಶಿಕ್ ಭಸ್ಮೆ ಗೋಷ್ಠಿಯಲ್ಲಿದ್ದರು.