

ವಿಜಯವಾಣಿ ಸುದ್ದಿಜಾಲ ಗದಗ
ಶಾಲೆಗಳ ಮೂಲಭೂತ ಸೌಕರ್ಯ ಒದಗಿಸಲು ಸರ್ಕಾರ ಸಿದ್ಧವಿದೆ. ಶಾಲೆಗಳ ಪಲಿತಾಂಶ ಸುಧಾರಣೆ ನಮ್ಮೆಲ್ಲರ ಗುರಿಯಾಗಿರಲಿ ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.
ತಾಲೂಕಿನ ಹಿರೇಹಂದಿಗೋಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ರವಿವಾರ ನೂತನ ಪ್ರೌಢ ಹಾಗೂ ಪ್ರಾಥಮಿಕ ಶಾಲಾ ಕೊಠಡಿಗಳ ಉದ್ಘಾಟನೆ, ಅಂಗನವಾಡಿ ಕಟ್ಟಡ ಭೂಮಿ ಪೂಜೆ ಹಾಗೂ ಶರಣಬಸವೇಶ್ವರ ಕಲ್ಯಾಣ ಮಂಟಪ ಉದ್ಘಾಟನಾ ಸಮಾರಂಭ ನೆರವೇರಿಸಿ ಮಾತನಾಡಿದರು.
ದಿಲ್ಲಿಯಲ್ಲಿರುವ ಸರ್ಕಾರಿ ಶಾಲೆಗಳ ವ್ಯವಸ್ಥೆ ಹಾಗೂ ಪಲಿತಾಂಶ ಸುಧಾರಣೆ ಕುರಿತಂತೆ ಅಧ್ಯಯನಕ್ಕಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಕಳುಹಿಸಿಕೊಡಲಾಗಿತ್ತು. ಅವರು ಅಧ್ಯಯನ ನಡೆಸಿ ಬಂದು ಸದ್ಯ ಗದಗ ಜಿಲ್ಲೆಯಲ್ಲಿ ಉಪನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ದಿಲ್ಲಿಯಲ್ಲಿರುವಂತೆ ಶಾಲೆಗಳು ಸುಧಾರಣೆ ಆಗಲು ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ನಾವು ಒದಗಿಸಲು ಸಿದ್ಧವಾಗಿದ್ದೇವೆ. ಶಿಕ್ಷಕ ಸಮೂಹ ಪಲಿತಾಂಶ ಸುದಾರಣೆಗೆ ಕ್ರಮ ವಹಿಸಬೇಕು ಎಂದರು.
ಈ ಹಿಂದೆ ಶ್ರೇಣಿಕೃತ ವರ್ಗ ವ್ಯವಸ್ಥೆಯಲ್ಲಿ ಮೇಲಿದ್ದವರು ಎಲ್ಲ ರಂಗದಲ್ಲಿಯೂ ಮೇಲೆ ಇರುತ್ತಿದ್ದರು. ಅದರಂತೆ ಶೈಕ್ಷಣಿಕ ವ್ಯವಸ್ಥೆಯಲ್ಲಿಯೂ ಮೇಲ್ವರ್ಗದಲ್ಲಿಯೇ ಇರುತ್ತಿದ್ದರು. ಈಗ ಆ ವ್ಯವಸ್ಥೆ ಬದಲಾಗಿದ್ದು ಕಟ್ಟ ಕಡೆಯ ಸಮುದಾಯದ ವ್ಯಕ್ತಿಯು ಉತ್ತಮ ಶಿಕ್ಷಣ ಪಡೆದು ಉನ್ನತ ಹುದ್ದೆ ಅಲಂಕಾರಿಸಬಹುದು. ಶಿಕ್ಷಣ ಸಮಾಜದ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಅದಕ್ಕಾಗಿ ಮಕ್ಕಳಿಗೆ ಸರಿಯಾಗಿ ಸೌಲಭ್ಯ ಒದಗಿಸೋಣ ಎಂದರು.
ಕಾರ್ಯಕ್ರಮದಲ್ಲಿ ಸಹಕಾರ ರತ್ನ ಪುರಸತ ಧಾರವಾಡ ಕೆಎಂಎಫ್ ನಿರ್ದೇಶಕ ಎಚ್. ಜಿ. ಹಿರೇಗೌಡ್ರು ಅವರನ್ನು ಸನ್ಮಾನಿಸಲಾಯಿತು. ಡಿ. ಆರ್. ಪಾಟೀಲ, ಬಿ. ಬಿ. ಅಸೂಟಿ, ಅಶೋಕ ಮಂದಾಲಿ, ರವಿ ಮೂಲಿಮನಿ, ಎಂ. ಐ. ಪಾಟೀಲ ಇತರರು ಇದ್ದರು.