ಪ್ರಧಾನಿ ನರೇಂದ್ರ ಮೋದಿ ಅಸಹಿಷ್ಣುತೆ ಭಾಷಣ ಮಾಡುತ್ತಿದ್ದಾರೆ: ಎಚ್​.ಕೆ. ಪಾಟೀಲ

24GDG04
ಗದಗ ಪತ್ರಿಕಾ ಭವನದಲ್ಲಿ ಎಚ್​.ಕೆ. ಪಾಟೀಲ ಸುದ್ದಿಗೋಷ್ಟಿ ನಡೆಸಿದರು. ವಿ.ಬಿ. ಸೋಮನಕಟ್ಟಿ ಮಠ, ಜಿ.ಎಸ್​. ಪಾಟೀಲ ಇದ್ದರು.
Published on

ವಿಜಯವಾಣಿ ಸುದ್ದಿಜಾಲ ಗದಗ
ಕಳೆದ ಮೂರು ದಿನಗಳಿಂದ ಪ್ರಧಾನಿ ನರೇಂದ್ರ ಮೋದಿ ಅವರು ಸಾರ್ವಜನಿಕವಾಗಿ ಅಸಹಿಷ್ಣುತೆಯಿಂದ ಕೂಡಿದ ಭಾಷಣ ಮಾಡುತ್ತಿದ್ದಾರೆ. ಸಾರ್ವಜನಿಕರಿಗೆ ಪ್ರಚೋದನೆ ನೀಡುವ ಹಾಗೂ ದ್ವೇಷ ಬಿತ್ತುವ ಅಂಶಗಳನ್ನು ಮಾತನಾಡುವ ಮೂಲಕ ದೇಶದಲ್ಲಿ ಕೋಮುಭಾವನೆ ಹುಟ್ಟುಹಾಕುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕೇಂದ್ರ ಚುನಾವಣಾ ಆಯೋಗವು ಸ್ವಯಂ ದೂರು ದಾಖಲಿಸಿಕೊಳ್ಳಬೇಕು ಎಂದು ಎಚ್​.ಕೆ. ಪಾಟೀಲ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರನ್ನು ಚುನಾವಣಾ ಪ್ರಕ್ರಿಯೆಯಿಂದ ನಿಷೇಧಿಸಬೇಕು. ತಾಳಿ ಕಿತ್ತು ಮುಸಲ್ಮಾನರಿಗೆ ಕೊಡುತ್ತಾರೆ, ಹಿಂದುಗಳ ಆಸ್ತಿಯನ್ನು ಕಿತ್ತು ಮುಸಲ್ಮಾನರಿಗೆ ಹಂಚಿಕೆ ಮಾಡುತ್ತಾರೆ, ದಲಿತರ ಮೀಸಲಾತಿ ಕಿತ್ತು ಅಲ್ಪಸಂಖ್ಯಾತರಿಗೆ ನೀಡುತ್ತಾರೆ ಎಂಬ ಹೇಳಿಕೆ ನೀಡುವ ಮೂಲಕ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಭಾರತ ಮಾತೆಯ ಆಭರಣಗಳಾದ ರೈಲ್ವೆ, ರೈಲ್ವೆ ನಿಲ್ದಾಣ, ಕ್ರೀಡಾಂಗಣಗಳು, ರಸ್ತೆಗಳನ್ನು ದೋಚಿ ಶ್ರೀಮಂತರಿಗೆ ಗುತ್ತಿಗೆ ನೀಡುತ್ತಿದ್ದಾರೆ. ಮೊದಲನೇ ಹಂತದ ಚುನಾವಣೆ ನಡೆದ ರಾಜ್ಯಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೋಲುವ ಭಯ ಕಾಡುತ್ತಿದೆ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಬರಪೀಡಿತರಿಗೆ ಬರಪರಿಹಾರ ನೀಡಿ ಎಂದು ಕಳೆದ ಆರು ತಿಂಗಳ ಕಾಲ ಹೋರಾಟ ಮಾಡಿದರೂ ಪರಿಹಾರ ನೀಡಲಿಲ್ಲ. ಬರ ಪರಿಹಾರ ಪಡೆದುಕೊಳ್ಳಲು ಸುಪ್ರೀಂ ಕೋರ್ಟ್​ ಮೆಟ್ಟಿಲು ಹತ್ತಬೇಕಾಯಿತು. ಬರಪೀಡಿತ ರೈತರ ಕುಟುಂಬಗಳಿಗೆ 13 ಸಾವಿರ ಪರಿಹಾರ ನೀಡಲು ಸಾಧ್ಯವಿತ್ತು. ರಾಜ್ಯ ಸರ್ಕಾರಕ್ಕೆ ಅನಾನುಕೂಲತೆ ಸೃಷ್ಟಿಸಲು ಕೇಂದ್ರ ಸರಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು.
ರೋಣ ಶಾಸಕ ಜಿ.ಎಸ್​. ಪಾಟೀಲ ಮಾತನಾಡಿ, ಹಾವೇರಿ-ಗದಗ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​ ಅಭ್ಯಥಿರ್ ಆನಂದಸ್ವಾಮಿ ಗಡ್ಡದೇವರಮಠ ಅವರು ಗೆಲ್ಲಲು ಪೂರಕ ವಾತಾವರಣವಿದೆ, ಕಳೆದ ವಿಧಾನಸಭೆ ಚುನಾವಣೆಯಲ್ಲಿ 1 ಲಕ್ಷ ಮತಗಳ ಅಂತರದಲ್ಲಿ ಕಾಂಗ್ರೆಸ್​ ಪಕ್ಷ ಮುಂದಿದೆ. ಲೋಕಸಭೆ ಚುಣಾವಣೆಯಲ್ಲಿ 1 ಲಕ್ಷ ಅಂತರದಿಂದ ಕಾಂಗ್ರೆಸ್​ ಪಕ್ಷ ಗೆಲವು ಸಾಧಿಸಲಿದೆ.
ವಿ.ಬಿ. ಸೋಮನಕಟ್ಟಿಮಠ, ಅಶೋಕ ಮಂದಾಲಿ, ಬಿ.ಬಿ. ಅಸೂಟಿ, ಬಸವರಾಜ ಕಡೇಮನಿ, ಉಮರ್​ ಫಾರೂಖ್​ ಹುಬ್ಬಳ್ಳಿ ಸೇರಿ ಅನೇಕರು ಇದ್ದರು.

ಇಂದು ಗದುಗಿದೆ ಸಿಎಂ ಸಿದ್ದರಾಮಯ್ಯ:
ಏ. 25ರಂದು ಮಧ್ಯಾಹ್ನ 2.45ಕ್ಕೆ ಗಜೇಂದ್ರಗಡದಲ್ಲಿ ಜರುಗುವ ಚುನಾವನಾ ಪ್ರಚಾರದ ಬೃಹತ್​ ಸಮಾವೇಶಕ್ಕೆ ಸಿಎಂ ಸಿದ್ದರಾಮಯ್ಯ ಆಗಮಿಸಲಿದ್ದಾರೆ ಎಂದು ಸಚಿವ ಎಚ್​.ಕೆ. ಪಾಟೀಲ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net