

ವಿಜಯವಾಣಿ ಸುದ್ದಿಜಾಲ ಗದಗ
ರಾಜ್ಯದಲ್ಲಿ ಸರ್ಕಾರಿ ವ್ಯಾಜ್ಯಗಳ ನಿರ್ವಹಣೆಗೆ ಪ್ರತ್ಯೇಕ ಕಾನೂನು ಜಾರಿ ಮತ್ತು ಬಡವರ ವ್ಯಾಜ್ಯಗಳನ್ನು ತೀವ್ರಗತಿಯಲ್ಲಿ ವಿಲೆವಾರಿ ಮಾಡಲು "ಕೋಡ್ ಆಫ್ ಸಿವಿಲ್ ಪ್ರೊಸಿಸರ್'(ಸಿಪಿಸಿ) ನಿಯಮಕ್ಕೆ ತಿದ್ದುಪಡಿ ತರಲಾಗುವುದು ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಗದಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ್ಯಾಯಾದಾನ, ಪ್ರಕರಣಗಳನ್ನು ಕಡಿಮೆ ಗೊಳಿಸುವುದಕ್ಕೆ ಹಲವು ಕಾನೂನಾತ್ಮಕ ಬದಲಾವಣೆ ಮಾಡಲು ಸಾಧ್ಯವಿದೆ. ಸರ್ಕಾರಿ ವ್ಯಾಜ್ಯಗಳಲ್ಲಿ ಅಧಿಕ ಪ್ರಕರಣದಲ್ಲಿ ಸರ್ಕಾರಕ್ಕೆ ಸೋಲಾಗುತ್ತಿದೆ. ಹಾಗಾಗಿ ನ್ಯಾಯದಾನ ವ್ಯವಸ್ಥೆಯಲ್ಲಿ ಹಲವು ಬದಲಾವಣೆ ತರಲು ಉನ್ನತ ಮಟ್ಟದಲ್ಲಿ ಸಭೆ ನಡೆಸಲಾಗಿದೆ. ಬಡವರಿಗೆ ಬಹಳ ದಿನಗಳ ಕಾಲ ವ್ಯಾಜ್ಯ ನಡೆಸಲು ಸಾಧ್ಯವಿಲ್ಲ. ಅಂತಹ ವ್ಯಾಜ್ಯಗಳ ವಿಲೆವಾರಿಗೆ ಸಿಪಿಸಿ ಕಾನೂನು ತಿದ್ದುಪಡಿ ಮಾಡಲು ಚಿಂತನೆ ನಡೆಸಲಾಗಿದೆ ಎಂದರು.
ಅಧಿಕಾರಿಗಳಿಗೆ ಎಚ್ಚರಿಕೆ:
ರಾಜ್ಯದಲ್ಲಿ ಭೂಕಬಳಿಕೆ ಮತ್ತು ಭೂಒತ್ತುವರಿ ಎರಡೂ ಒಂದೇ ಎಂದು ಭಾವಿಸಿ ಒತ್ತುವರಿ ಪ್ರಕರಣಗಳನ್ನು ಭೂ ಕಬಳಿಕೆ ಎಂದು ಪ್ರಕರಣ ದಾಖಲಿಸಲಾಗುತ್ತಿದೆ. ಈ ಕಾರಣದಿಂದ ರೈತರು ಮತ್ತು ಸಾಮಾನ್ಯ ನಾಗರಿಕರನ್ನು ಬೆಂಗಳೂರು ಕೋರ್ಟ್ಗೆ ಅಲೆಯಬೇಕಾದ ಸ್ಥಿತಿ ಎದುರಾಗುತ್ತಿದ್ದು, ಅಧಿಕಾರಿಗಳ ಈ ಬಗ್ಗೆ ಗಮನ ಹರಿಸಿ ಕ್ರಮ ವಹಿಸಬೇಕು. ರೈತರಿಗೆ ವಿನಾಕಾರಣ ತೊಂದರೆ ನೀಡಿ ಕೊರ್ಟ್ಗೆ ಅಲೆಯುವಂತೆ ಮಾಡಿದ್ದೇ ಆದಲ್ಲಿ ಅಧಿಕಾರಿಗಳ ಮೇಲೆ ಕ್ರಮ ವಹಿಸಲಾಗುವುದು ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಎಚ್ಚರಿಕೆ ನೀಡಿದರು.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬೆಂಗಳೂರು ನಗರದಲ್ಲಿ ಭೂಕಬಳಿಕೆ ಆಗುತ್ತಿರುವ ಪ್ರಕರಣಗಳನ್ನು ತಡೆಯುವ ನಿಟ್ಟಿನಲ್ಲಿ ಭೂಕಬಳಿಗೆ ನಿಷೇದ ಕಾನೂನು ಜಾರಿ ತರಲಾಗಿತ್ತು. ಅಧಿಕಾರಿಗಳ, ರಾಜಕಾರಣಿಗಳು, ಶ್ರೀಮಂತರು ಭೂಕಬಳಿಕೆಯ ಪಾಲುದಾರರಾಗಿದ್ದರು. ಬೆಂಗಳೂರು ನಗರದಲ್ಲಿ ಲಕ್ಷಂತಾರ ಕೋಟಿ ಭೂಕಬಳಿಕೆ ಆಗಿದ್ದು ವರದಿಯಲ್ಲಿ ಬಹಿರಂಗ ಗೊಂಡಿದೆ. ಇಂತಹ ಪ್ರಕರಣಗಳ ವಿಚಾರಣೆಗಾಗಿಯೇ ಬೆಂಗಳೂರಿನಲ್ಲಿ ಪ್ರತ್ಯೇಕ ಪೀಠ ಸ್ಥಾಪಿಸಲಾಗಿದೆ. ಆದರೆ, ಚಿಕ್ಕ ಹಿಡುವಳಿದಾರ ಒತ್ತುವರಿಯನ್ನು ಭೂ ಕಬಳಿಕೆ ಯಂದೇ ಪರಿಗಣಿಸಿ ರೈತರಿಗೆ ತೊಂದರೆ ನೀಡಲಾಗುತ್ತಿದೆ ಎಂದರು.