ಅಧಿಕಾರಿಗಳಿಗೆ ಎಚ್ಚರಿಕೆ ಪಾಠ, ಅಮಾನತು ಆದೇಶ: ಎಚ್​.ಕೆ. ಪಾಟೀಲ

30GDG02
ಅಧಿಕಾರಿಗಳಿಗೆ ಎಚ್ಚರಿಕೆ ಪಾಠ, ಅಮಾನತು ಆದೇಶ: ಎಚ್​.ಕೆ. ಪಾಟೀಲ
Published on

ವಿಜಯವಾಣಿ ಸುದ್ದಿಜಾಲ ಗದಗ/ ಮುಂಡರಗಿ

ಜಿಲ್ಲೆಯ ಮುಂಡರಗಿ ಪಟ್ಟಣದ ಅನ್ನದಾನೀಶ್ವರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಜರುಗಿದ ಜನತಾ ದರ್ಶನದಲ್ಲಿ ಸಚಿವ ಎಚ್​.ಕೆ. ಪಾಟೀಲ ಅವರು ಅಧಿಕಾರಿಗಳಿಗೆ ಎಚ್ಚರಿಕೆ ಪಾಠ, ಅಮಾನತು ಆದೇಶ ಸೇರಿದಂತೆ ಸೇವಾ ನಿರ್ಲಕ್ಷ್ಯ ತೋರಿದ ಅಧಿಕಾರಿಗಳಿಗೆ ಶಿಕ್ಷೆಯ ಸಂದೇಶವನ್ನು ರವಾನಿಸಿದರು.
ವಿವಿಧ ಸಮಸ್ಯೆಗಳನ್ನು ತೋಡಿಕೊಂಡ ಜನರ ಅಹವಾಲು ಸ್ವೀಕರಿಸಿದ ಸಂದರ್ಭದಲ್ಲಿ ಅಜಿರ್ ಸ್ವೀಕರಿಸುವ, ವಿಲೇವಾರಿ ಮತ್ತು ಪರಿಹಾರ ನಿಡುವಲ್ಲಿ ಅಧಿಕಾರಿಗಳ ನಿರ್ಲಕ್ಷ್ಯತೋರಿದ್ದನ್ನು ಗಮನಿಸಿದ ಎಚ್​.ಕೆ. ಪಾಟೀಲ ಅಧಿಕಾರಿಗಳ ಮೇಲೆ ಗರಂ ಆದರು ಮತ್ತು ಕಾಲಮಿತಿ ಒಳಗಾಗಿ ಪರಿಹಾರ ನೀಡಬೇಕೆಂದು ಸೂಚಿಸಿದರು.

ಶಾಲಾ ಮೇಲ್ಚಾವಣಿ ದುರಸ್ಥಿ:
ಮುಂಡರಗಿ ಪಟ್ಟಣದ ವಾರ್ಡ್​ ನಂ.16 ರಲ್ಲಿ ಇರುವ ಸರ್ಕಾರಿ ಶಾಲೆಗೆ ಮೇಲ್ಚಾವಣಿ ಕುರಿತು ಸಾರ್ವಜನಿಕ ಅಹವಾಲು ಸ್ವೀಕರಿಸಿ ಮಾತನಾಡಿದ ಎಚ್​.ಕೆ. ಪಾಟೀಲ, ಶಾಲೆಯೂ ಶಾಸಕರ ದತ್ತು ತೆಗೆದುಕೊಂಡ ಶಾಲೆ ಆಗಿದೆ. ಇನ್ನೆರೆಡು ತಿಂಗಳಲ್ಲಿ ಈ ಸಮಸ್ಯೆ ಬಗೆಹರಿಸಲಾವುದು. ಈ ಸಮಸ್ಯೆಯನ್ನು ತುರ್ತು ಎಂದು ಗಮನಿಸಿ ಡಿಡಿಪಿಐ ಬಗೆಹರಿಸಬೇಕೆಂದು ತಿಳಿಸಿದರು.

ನಿವೇಶನ ಮಂಜೂರು:
ಸೂರು ಇಲ್ಲದ ಹಿನ್ನೆಲೆ ತಾಲೂಕಿನ ಬಿದರಳ್ಳಿ ಗ್ರಾಮದ ಇಬ್ಬರು ರೈತರು ಮನವಿ ಮಾಡಿಕೊಂಡರು. ಈ ವೇಳೆ ಬಿದರಳ್ಳಿ ಗ್ರಾಮದ ಪಿಡಿಓ ಅವರನ್ನು ಸ್ಥಳಕ್ಕೆ ಕರೆಸುವಂತೆ ಸಚಿವರು ಇಓ ಅವರಿಗೆ ಸೂಚಿಸಿದರು. ಸಮಯ ಕಳೆದರೂ ಪಿಡಿಓ ಜನತಾ ದರ್ಶನಕ್ಕೆ ಆಗಿಮಿಸದೇ ಇರುವುದರಿಂದ ಅಧಿಕಾರಿಗಳ ಮೇಲೆ ಸಚಿವರು ಕೋಪಗೊಂಡರು. ಕೆಲ ಸಮಯ ನಂತರ ಪಿಡಿಓ ಆಗಮಿಸಿ ಸಮಜಾಯಿಷಿ ಉತ್ತರ ನೀಡಿದರು. ಈ ನಡುವೆ ಸಚಿವರು ಒಂದು ವಾರದೊಳಗೆ ಅಜಿರ್ದಾರರಿಗೆ ನಿವೇಶನ ಪತ್ರ ವಿತರಿಸುವಂತೆ ಸೂಚಿಸಿದರು. ವಿತರಣೇ ಮಾಡದೇ ಇದ್ದರೆ ದೂರು ಸಲ್ಲಿಸುವಂತೆ ರೈತರಿಗೆ ಸೂಚಿಸಿದರು.

ಅಧಿಕಾರಿ ಅಮನಾತು:
ರಾಮಚಂದ್ರಪ್ಪ ಗುಗ್ಗರಿ ಎಂಬುವವರು ತಮ್ಮ ಮಗಳ ಮದುವೆಯ ಸಹಾಯಧನ 60000 ರೂ. ವಿತರಿಸುವಂತೆ ಕಾಮಿರ್ಕ ಇಲಾಖೆಗೆ ಕಳೆದ ವರ್ಷವೇ ಅಜಿರ್ ಸಲ್ಲಿಸಿದ್ದರು. ಆದರೆ, ಒಂದು ವರ್ಷ ನಂತರ ಅಜಿರ್ಯನ್ನು ಬೆಂಗಳೂರಿಗೆ ವರ್ಗಾವಣೆ ಮಾಡಿದ್ದನ್ನು ಸಚಿವರು ಗಮನಿಸಿ, ಸೇವಾ ನಿರ್ಲಕ್ಷ$್ಯ ಎಸಗಿದ ಅಧಿಕಾರಿಯನ್ನು ಅಮಾನತ್ತಿನಲ್ಲಿ ಇಡಲು ಜಿಲ್ಲಾಧಿಕಾರಿಗೆ ಸೂಚಿಸಿದರು ಮತ್ತು ಸೌಲಭ್ಯ ಒದಗಿಸಿಕೊಡಲು ಕಾಮಿರ್ಕ ಇಲಾಖೆಗೆ ನಿರ್ದೇಶನ ನೀಡಿದರು.

ವಿದ್ಯುತ್​ ಪೂರೈಕೆ:
ಗುಮ್ಮಗೋಳ ಗ್ರಾಮದ ರೈತರು ಕೊಳವೆ ಬಾವಿಗೆ ವಿದ್ಯುತ್​ ಪೂರೈಕೆಗಾಗಿ ವಿದ್ಯುತ್​ ಕಂಬ ಅಳವಡಿಸುವಂತೆ ಮನವಿ ಮಾಡಿದರು. ವಿದ್ಯುತ್​ ಇಲಾಖೆ ಅಧಿಕಾರಿಗಳನ್ನು ಸಂಪಕಿರ್ಸಿ ಸಮಸ್ಯೆ ಬಗೆಹರಿಸಲು ಸಾಧ್ಯಾ ಸಾಧ್ಯತೆಗಳನ್ನು ಪರಿಶೀಲಿಸುವಂತೆ ಸೂಚಿಸಿದರು. ಇದೇ ಸಂದರ್ಭದಲ್ಲಿ ಕೊಳೆವೆ ಬಾವಿಗೆ ವಿದ್ಯುತ್​ ಪೂರೈಕೆಗೆ ಸೋಲಾರ್​ ಅಳವಡಿಸಿಕೊಳ್ಳಲು ಇಲಾಖಾ ಅಧಿಕಾರಿಗಳು ಸೂಚಿಸಿದರು. ಇದೇ ಸಂದರ್ಭದಲ್ಲಿ ಸೋಲಾರ್​ ಅಳವಡಿಸಿಕೊಂಡ ರೈತರು ಸೋಲಾರ್​ ಸಾಧಕ ಬಾಧಕಗಳನ್ನು ಜನತಾ ದರ್ಶನದಲ್ಲಿ ಮಾಹಿತಿ ನೀಡಿದರು. 15 ದಿನಗಳ ಒಳಗಾಗಿ ವಿದ್ಯುತ್​ ಪೂರೈಕೆ ಮಾಡುವ ಭರವಸೆಯನ್ನು ನೀಡಲಾಯಿತು.

ಸಂಜೆ 4ಕ್ಕೆ ಮಾಸಾಶನ ಮಂಜೂರಾತಿ:
ರ್ಚುಚಿಹಾಳ ಗ್ರಾಮದ ಮಂಜುನಾಥ ಶಾಂತಯ್ಯನಮಠ ಎಂಬ 16 ವರ್ಷದ ವಿಕಲಚೇತನ ಬಾಲಕನ ಮಾಸಾಶನ ಬಾರದ ಹಿನ್ನೆಲೆ ವಿಕಲಚೇತನ ಬಾಲಕನನ್ನು ವೇದಿಕೆ ಮೇಲೆ ಕರೆತಂದು ಮನವಿ ಮಾಡಿದರು. ಈ ದೃಶ್ಯ ನೆರೆದವರ ಮನ ಕಲಕುವಂತೆ ಮಾಡಿತು. ಪರಿಸ್ಥಿತಿ ಗಮನಿಸಿದ ಎಚ್​.ಕೆ. ಪಾಟೀಲ ಅವರು ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡು, ಸಂಜೆ 4 ಗಂಟೆ ಒಳಗಾಗಿ ಮಾಸಾಶನ ಮಂಜೂರಾತಿ ನಿಮ್ಮ ಕೈ ಸೇರಲಿದೆ ಎಂದು ಭರವಸೆ ನೀಡಿದರು.

ವೃದ್ಧೆಯ ಜಮೀನು ಕಬಳಿಕೆ:
ಅಂಬೇಡ್ಕರ್​ ಅಭಿವೃದ್ಧಿ ನಿಗಮದ ಭೂ ಒಡೆತನ ಯೋಜನೆಯಡಿ ಮುಂಡರಗಿಯ ದುರ್ಗವ್ವ ಬಾಗೇವಾಡಿ ಎಂಬ ವೃದ್ಧೆಯ ಮಂಜೂರಾದ 4 ಎಕರೆ ಜಮೀನು ಕಬಳಿಸಿದ ವಿಷಯ ಕುರಿತು ಜನತಾ ದರ್ಶನದಲ್ಲಿ ಗಂಭೀರ ಚರ್ಚೆ ಜರುಗಿತು. ಅಪರ ಜಿಲ್ಲಾಧಿಕಾರಿ ಅನುಮತಿ ಪಡೆಯದೇ ಕಾನೂನು ಬಾಹಿರವಾಗಿ ಪರಭಾರೆ ಮಾಡಿಕೊಂಡಿದ್ದಾರೆ ಎಂಬುದನ್ನು ಅಂಬೇಡ್ಕರ್​ ಅಭಿವೃದ್ಧಿ ನಿಗಮದ ಅಧಿಕಾರಿಗಳೇ ಕಾರ್ಯಕ್ರಮದಲ್ಲಿ ಒಪ್ಪಿಕೊಂಡರು. ಅಕ್ರಮ ಪರಭಾರೆ ಮಾಡಿದ ಪ್ರಭಾವಿಗಳನ್ನು ಕರೆಸಿ ರಾಜೀ ಮಾಡಿಕೊಡಬೇಕು. ಒಪ್ಪದೇ ಇದ್ದಲ್ಲಿ ಅವರ ವಿರುದ್ಧ ಮೊಕದ್ದಮ್ಮೆ ದಾಖಲಿಸಬೇಕು ಎಂದು ಸಚಿವರು ಜಿಲ್ಲಾಡಳಿತಕ್ಕೆ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net