

ವಿಜಯವಾಣಿ ಸುದ್ದಿಜಾಲ ಗದಗ
ಜಿಲ್ಲೆಯಲ್ಲಿ ಸೆ. 30 ರಂದು ಜನತಾ ದರ್ಶನ ಜರುಗಿದ ಸಂದರ್ಭದಲ್ಲಿ ಸ್ವೀಕೃತಿ ಆಗಿದ್ದ 922 ಅರ್ಜಿಗಳ ಪೈಕಿ ಶೇ.95ರಷ್ಟು ಅರ್ಜಿಗಳ ವಿಲೇವಾರಿಗೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಸಮರ್ಪಕ ದಾಖಲೆಗಳನ್ನು ಸಲ್ಲಿಸದ ಕೆಲ ಅರ್ಜಿದಾರರ ದಾಖಲೆಗಳನ್ನು ಖುದ್ದಾಗಿ ಸರ್ಕಾರಿ ಅಧಿಕಾರಿಗಳೇ ದಾಖಲೆ ಸಂಗ್ರಹಿಸಿ ಅರ್ಜಿಗಳ ವಿಲೇವಾರಿಯನ್ನು ಮಾಡಲು, ಪ್ರಕರಣ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಸೂಚಿಸಲಾಗಿದೆ. 10 ದಿನ ಒಳಗಾಗಿ ಈ ಪ್ರಕ್ರಿಯೆ ಮುಗಿಯಲಿದೆ ಎಂದರು.
ಕೆಲ ಕ್ಲಿಷ್ಟ ಅರ್ಜಿಗಳು ವಿಲೇವಾರಿ ಮಾಡದಂತಹ ಸಮಸ್ಯೆಗಳನ್ನು ಒಳಗೊಂಡಿರುತ್ತವೆ. ಅಂತಹ ಅರ್ಜಿದಾರರ ಸಭೆ ಕರೆಯಲಾಗುವುದು. ಅಧಿಕಾರಿಗಳು ಮತ್ತು ಅರ್ಜಿದಾರರ ನಡುವೆ ಸಭೆ ನಡೆಸಿ ಪ್ರಕರಣ ವಿಲೇವಾರಿ ಮಾಡಲಾಗುವುದು ಎಂದರು.
ಜನತಾ ದರ್ಶನದಲ್ಲಿ ಸ್ವೀಕೃತಿ ಆಗಿದ್ದ ಕೃಷಿ ಇಲಾಖೆಯ 20 ಲ್ಲಿ 17 ಅರ್ಜಿ ವಿಲೇವಾರಿ ಮಾಡಲಾಗಿದೆ. ಪಶುಸಂಗೋಪನೆಯಲ್ಲಿ ಎಲ್ಲ 39 ಅರ್ಜಿಗಳು, ವಾಣಿಜೋದ್ಯ ಇಲಾಖೆಯ 9 ಅರ್ಜಿಗಳಲ್ಲಿ 7, ಸಾಮಾಜ ಕಲ್ಯಾಣ ಇಲಾಖೆಯ ಎಲ್ಲ 14 ಅರ್ಜಿಗಳ, ಮಹಿಳಾ ಮತ್ತು ಮಕ್ಕಳ ಇಲಾಖೆಯ 24 ಅರ್ಜಿಗಳಲ್ಲಿ 20 ಅರ್ಜಿ, ವಿದ್ಯುತ್ ವಿಭಾಗದ ಎಲ್ಲ 7 ಅರ್ಜಿ, ಆಹಾರ ಇಲಾಖೆಯ ಎಲ್ಲ 18 ಅರ್ಜಿ ವಿಲೇವಾರಿ, ಆರೋಗ್ಯ ಇಲಾಖೆಯ 12, ಗೃಹ ಇಲ್ಲಾಖೆಯ 13, ಉನ್ನತ ಶಿಕ್ಷಣ ಇಲಾಖೆಯ 5, ವಸತಿ ಇಲಾಖೆಯ 275 ಅಜಿರ್ಯಲ್ಲಿ 180 ಅಜಿರ್ಗಳ ಮೇಲೆ ಕ್ರಮ ವಹಿಸಲಾಗಿದೆ. ಅಲ್ಪಸಂಖ್ಯಾತ ಇಲಾಖೆಯ 39 ಅರ್ಜಿ, ಕಂದಾಯ ಇಲಾಖೆಯ 217 ರಲ್ಲಿ 211 ಅರ್ಜಿ ವಿಲೇವಾರಿ ಮಾಡಲಾಗಿದೆ. ಬಿಪಿಎಲ್ ಕಾರ್ಡದಾರರಿಗೆ ಡಿಬಿಟಿ ಮೂಲಕ ಹಣ ಸಂದಾಯ ಆಗದ ಕುರಿತು 28 ಅರ್ಜಿ ಬಂದಿದ್ದವು. ಅದರಲ್ಲಿ 23 ವಿಲೇವಾರಿ ಮಾಡಲಾಗಿದೆ. ಒಟ್ಟಾರೆ 153 ಅರ್ಜಿಗಳು ಬಾಕಿ ಉಳಿದುಕೊಂಡಿದೆ ಎಂದರು.
ವಿದ್ಯುತ್ ಶಕ್ತಿ ಕೇಂದ್ರ
ತಾಜ್ಯದಿಂದ ಶಕ್ತಿ ಉತ್ಪಾದನೆ ಯೋಜನೆ ಜಿಲ್ಲೆಯಲ್ಲಿ ಜಾರಿ ಆಗಲಿದೆ. ಡಿಪಿಆರ್ ಸಿದ್ದಗೊಂಡಿದೆ. ಡಿಎಂಇ ಇಲಾಖೆ ಕನ್ಸಲ್ಟಿಂಗ್ ಸವಿರ್ಸ್ ಏಜನ್ಸಿ ಅಂತಿಮಗೊಳಿಸುವ ಪ್ರಕ್ರಿಯೆ ಮಾತ್ರ ಎಂದು ತಿಳಿಸಿದರು.
ಸ್ಮಾರಕ ದತ್ತು
ಸ್ಮಾರಕ ದರ್ಶನ, ಸ್ಮಾರಕ ದತ್ತು ಸ್ವೀಕಾರ ಹಿನ್ನೆಲೆ ಬೀದರ್, ಗುಲರ್ಬಗಾ, ಯಾದಗಿರಿ, ಬಾಗಲಕೋಟೆ, ಬಿಜಾಪುರ ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದೇನೆ. ಅತ್ಯಂತ ಅದ್ಭುತ ಸ್ಮಾರಕಗಳನ್ನು ನಾವು ದುಸ್ಥಿತಿಯಲ್ಲಿ ಇಟ್ಟುಕೊಂಡಿದ್ದೇವೆ. ರಾಜ್ಯ ಸರ್ಕಾರದಿಂದ 850 ಸ್ಮಾರಕ ಗಳಿಗೆ ಮಾತ್ರ ಅಧಿಸೂಚನೆ ಹೊರಡಿಸಲಾಗಿದೆ. ಡಿಸೆಂಬರ್ ಅಂತ್ಯದೊಳಗೆ 200 ಸ್ಮಾರಕಗಳಿಗೆ ಅಧಿಸೂಚನೆ ಹೊರಡಿಸಲಾಗುವುದು. ಸ್ಮಾರಕ ದತ್ತು ಸ್ವೀಕಾರ ಕಾರ್ಯಕ್ರಮದಲ್ಲಿ ಕೈಗಾರಿಕೆಗಳು ತಮ್ಮ ಸಿಎಸ್ಆರ್ ಅನುದಾನದ ನೀಡಲು ಮುಂದೆ ಬರುತ್ತಿವೆ ಎಂದು ಸಚಿವರು ತಿಳಿಸಿದರು.
ಲಕ್ಕುಂಡಿ ಯುನೆಸ್ಕೋ ಪಟ್ಟಿಗೆ?
ಲಕ್ಕುಂಡಿ ಸ್ಮಾರಕಗಳನ್ನು ಯುನೆಸ್ಕೋ ತಾತ್ಕಾಲಿಕ ಪಟ್ಟಿಗೆ ಸೇರಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಯುನೆಸ್ಕೋ ಕೇಳುವ ದಾಖಲೆಗಳನ್ನು ಸರಿಯಾದ ಸಮಯದಲ್ಲಿ ಸೂಕ್ತ ದಾಖಲೆ ಒದಗಿಸಲು ಒದಗಿಸಲು ಖಾಸಗಿ ಏಜೆನ್ಸಿ ನಿಗದಿಪಡಿಸಬೇಕಾಗಿದೆ ಎಂದರು ಸಚಿವರು ಹೇಳಿದರು.