

ಗದಗ: ನಮ್ಮ ಸ್ವಾತಂತ್ರ್ಯ ಸೇನಾನಿಗಳ ತ್ಯಾಗ, ಬಲಿದಾನ, ಶ್ರಮ, ಸಮರ್ಪಣಭಾವ, ದೇಶಪ್ರೇಮದÀ ಫಲವಾಗಿ ಇಂದು ಸ್ವಾತಂತ್ರ್ಯ ಸುಖ ಅನುಭವಿಸುತ್ತಿದ್ದೇವೆ. ಸ್ವಾತಂತ್ರ್ಯ ಸುಖದ ಮುಂದೆ ಸ್ವರ್ಗಸುಖ ತೃಣ ಸಮಾನವೆಂದು ಭಾವಿಸಿ ಬದುಕಿದ ಎಲ್ಲ ಮಹಾನ್ ಚೇತನಗಳನ್ನು ಸ್ಮರಿಸುವದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ರಾಜ್ಯದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ.ಪಾಟೀಲ ನುಡಿದರು.
ನಗರದ ಕೆ.ಎಚ್.ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾಗಿದ್ದ ಸ್ವಾತಂತ್ರೋತ್ವದ ದಿನಾಚರಣೆ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ತೋರಿದ, ವಿನೂತನವಾದ ಸತ್ಯ, ಅಹಿಂಸೆ ಎಂಬ ಅಸ್ತ್ರಗಳನ್ನು ಹಿಡಿದು ಸತ್ಯಾಗ್ರಹ ಮಾರ್ಗ ತುಳಿದು ಬ್ರಿಟೀಷ ಆಡಳಿತದ ಗುಂಡಿಗೆ ಎದೆ ಒಡ್ಡಿ, ಲಾಠಿ ಎಟು ತಿಂದು, ಅವರ್ಣನೀಯ ಕಷ್ಟಗಳನ್ನು ಅನುಭವಿಸಿ, ದೇಶವನ್ನು ಗುಲಾಮಗಿರಿಯ ಸಂಕೋಲೆಯಿಂದ ಮುಕ್ತಗೊಳಿಸಿದರ ಫಲವಾಗಿ ಇಂದು ನಾವೆಲ್ಲರೂ ಸಡಗರದಿಂದ ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತಿದ್ದೇವೆ.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಗದಗ ಜಿಲ್ಲೆಯ ಪಾತ್ರ ಅವಿಸ್ಮರಣೀಯವಾದುದು. ನರಗುಂದದ ಬಾಬಾ ಸಾಹೇಬ, ಮುಂಡರಗಿಯ ಭೀಮರಾವ, ಡಂಬಳದ ಕೆಂಚನಗೌಡ್ರು, ಅನಂತರಾವ ಜಾಲಿಹಾಳ, ಡಾ.ವಾಸುದೇವರಾವ ಉಮಚಗಿ, ಬೆಟಗೇರಿಯ ತ್ರಿಮಲ್ಲೆ, ಮಳೇಕರ, ಜಯರಾಮಾಚಾರ್ಯ ಮಳಗಿ, ಡಂಬಳದ ಶ್ರೀನಿವಾಸರಾವ್ ಕಳ್ಳಿ, ತಿಪ್ಪಣ್ಣ ಶಾಸ್ತ್ರಿ, ಅಂದಾನಪ್ಪ ದೊಡ್ಡಮೇಟಿ, ಕೌತಾಳ ವೀರಪ್ಪ, ಕೆ.ಎಚ್.ಪಾಟೀಲರು ಸೇರಿ ಅಸಂಖ್ಯ ಸ್ವಾತಂತ್ರ್ಯ ಸೇನಾನಿಗಳು ದೇಶಕ್ಕಾಗಿ ಸರ್ವತ್ಯಾಗ ಮಾಡಿದ್ದು ನೆನೆದರೆ ಹೃದಯದಲ್ಲಿ ಹೆಮ್ಮೆಯ ಪ್ರವಾಹ ಹರಿಯುತ್ತದೆ. ದೇಶಭಕ್ತ ಮೈಲಾರ ಮಹಾದೇವಪ್ಪ ಅವರ ನೇತೃತ್ವದಲ್ಲಿ ಕೋಗನೂರು, ಶಿಗ್ಲಿ, ಹೆಬ್ಬಾಳ, ನಾಗರಮಡುವು, ವರವಿ, ಹೊಸೂರ, ಅಂಕಲಿ, ಮೊದಲಾದ ಗ್ರಾಮಗಳ ಸ್ವಾತಂತ್ರ್ಯ ಹೋರಾಟಗಾರರು ಚಳವಳಿಯಲ್ಲಿ ಧುಮಕಿ ಅಪಾರ ತ್ಯಾಗ ಮಾಡಿರುತ್ತಾರೆ. 1942 ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ಚಳವಳಿಯಲ್ಲಿ ಗದಗ ಜಿಲ್ಲೆ ಪೂರ್ಣವಾಗಿ ತೊಡಗಿಸಿಕೊಂಡಿತ್ತು. ಡಾ.ಬಿ.ಜಿ.ಹುಲಗಿ, ಶಂಕ್ರಪ್ಪ ಗುಡ್ಡದ, ಇಸ್ಮಾಯಿಲ್ ಸಾಹೇಬ ಕಲ್ಲೂರ ರಾಮಾಚಾರಿ, ವೆಂಕಟೇಶ ಮಾಗಡಿ, ಕೋಗನೂರು ನಿಂಗಪ್ಪ ಮೊದಲಾದವರು ಕಠಿಣ ಶಿಕ್ಷೆ ಅನುಭವಿಸಿದ್ದಾರೆ ಎಂದರು.
ನಮ್ಮ ರಾಜ್ಯ ಬಹು ಕಾಲದಿಂದಲೂ ಸಮಾನತೆಗಾಗಿ ಹೋರಾಟದ ಪ್ರದೇಶವಾಗಿದೆ. ಜಾತಿ-ಮತ-ಪಂಥ, ವರ್ಗ ವರ್ಣಗಳ ಬೇಧಭಾವ ಅಳಿಸಿ ಸಮಾನತೆಯ ಸಮಾಜ ಕಟ್ಟುವ ಕನಸು ಕಂಡ ನಮ್ಮ ಶರಣರು, ದಾಸರು, ಸಂತರು ಇಂದಿಗೂ ಸ್ಫೂರ್ತಿಯಾಗಿದ್ದಾರೆ. ರಾಜ್ಯವನ್ನು ಸರ್ವಜನಾಂಗದ ಶಾಂತಿಯ ತೋಟವನ್ನಾಗಿ ಮಾಡಿ, ನೆಮ್ಮದಿಯ ತಾಣವನ್ನಾಗಿ ಮಾಡಿ, ಪ್ರಗತಿಯ, ಸಮೃದ್ಧಿಯ, ನಿರಂತರ ಮುನ್ನಡೆಯುವ ಮಾದರಿಯ ರಾಜ್ಯವನ್ನಾಗಿ ಮಾಡಬೇಕೆಂಬುದು ನಮ್ಮ ಘನ ಸರ್ಕಾರದ ಕನಸಾಗಿದೆ ಎಂದು ಹೇಳಿದರು.
ಕ್ರಾಂತಿಕಾರಕ ಬದಲಾವಣೆ: ಪಂಚ ಗ್ಯಾರಂಟಿ ಅನುಷ್ಠಾನದಿಂದಾಗಿ ರಾಜ್ಯದ ಬಡತನ ರೇಖೆಗಿಂತ ಕೆಳಗಿರುವ ಸುಮಾರು 70 ರಿಂದ 80 ಲಕ್ಷ ಕುಟುಂಬಗಳು ಬಡತನ ರೇಖೆ ಮೇಲೆ ಬರಲಿವೆ. ಇದೊಂದು ಕ್ರಾಂತಿಕಾರಕ ಬದಲಾವಣೆಯಾಗಿದ್ದು, ನಾಡಿನ ಬಡವರ ಬದುಕಿನಲ್ಲಿ ಕ್ರಾಂತಿಕಾರಿ ಬದಲಾವಣೆ ತರುವ ಈ ಸೌಲಭ್ಯಗಳ ಸೃಷ್ಟಿಯಿಂದ ಬಡತನದ ರೇಖೆಗಿಂತ ಕೆಳಗಿನ ಬದುಕು ಬಾಳುತ್ತಿರುವವರಿಗೆ ಸಂತಸ ತಂದಿದೆ.
ಜಿಲ್ಲೆಯ ಅನ್ವೇಷಣೆ: ದೇಶದ ಪ್ರಥಮ ಪ್ರಧಾನಿ ಪಂಡಿತ ಜವಾಹರಲಾಲ ನೆಹರುರವರು ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ಜೈಲಿನಲ್ಲಿದ್ದಾಗ ಬರೆದ ಡಿಸ್ಕವರಿ ಆಫ್ ಇಂಡಿಯಾ ಪುಸ್ತಕವು ಜನಪ್ರಿಯತೆ ಪಡೆದಂತೆ ನಮ್ಮ ಸರ್ಕಾರ ಅಧಿಕಾರ ವಹಿಸಿಕೊಂಡ ತಕ್ಷಣ ಡಿಸ್ಕರವರಿ ಆಫ್ ಗದಗ ಡಿಸ್ಟ್ರಿಕ್ಟ ಮಾಡಲು ಗದಗ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಲು ಹಿರಿಯ ಅಧಿಕಾರಿ ಮನೋಜಕುಮಾರ ಅವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗಿತ್ತು. ಸಮಿತಿಯು ತುರ್ತಾಗಿ ಕೈಕೊಳ್ಳಬಹುದಾದ, ಮಧ್ಯಮ ಅವಧಿಯ ಹಾಗೂ ಧೀರ್ಘಾವಧಿಯ ಯೋಜನೆಗಳನ್ನು ಗುರುತಿಸಿದ್ದು, ಒಟ್ಟು 804.33 ಕೋಟಿ ರೂ ವೆಚ್ಚದ ಕಾಮಗಾರಿಗಳ ಪ್ರಸ್ತಾವನೆಯನ್ನು ಸಲ್ಲಿಸಿದೆ.
ಥರ್ಡ ಐ: ಆಧುನಿಕ ತಂತ್ರಜ್ಞಾನ ಬಳಸಿ, ಪೊಲೀಸ್ ಇಲಾಖೆ ಥರ್ಡ ಐ ಯೋಜನೆ ಅನುಷ್ಠಾನಗೊಳಿಸುತ್ತಿದೆ. ಸಂಚಾರ ನಿಯಂತ್ರಣ, ಅಪರಾಧ ತಡೆ, ಅಪರಾದ ಪತ್ತೆ ಹಚ್ಚುವಿಕೆಯಲ್ಲಿ ಈ ಥರ್ಡ ಐ ಬಹಳ ಪ್ರಯೋಜನಕಾರಿಯಾಗಲಿದೆ ಎಂದ ಸಚಿವರು ಸಾರ್ವಜನಿಕರೆಲ್ಲ ಸಂಚಾರಿ ನಿಯಮಗಳನ್ನು ಪಾಲಿಸಬೇಕೆಂದರು.
ಕ್ಯಾಥಲ್ಯಾಬ: ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಹೃದಯ ರೋಗಕ್ಕೆ ಸಂಬಂಧಿಸಿದಂತೆ ಚಿಕಿತ್ಸೆ ನೀಡಲು ರೂ.10 ಕೋಟಿ ವೆಚ್ಚದಲ್ಲಿ “ಕ್ಯಾಥಲ್ಯಾಬ” ಅರಂಭಿಸಲು ಸರಕಾರ ಈಗಾಗಲೇ ಅನುಮತಿ ನೀಡಿದೆ. ಇನ್ನು ಮುಂದೆ ಗದಗ ಭಾಗದ ಹೃದಯ ರೋಗಿಗಳು ದೂರದ ಬೆಂಗಳೂರಿಗೆ ಹೋಗಬೇಕಾಗಿಲ್ಲವೆಂಬುದು ನೆಮ್ಮದಿಯ ಸಂಗತಿಯಾಗಿದ್ದು ಇನ್ನು ಕೆಲವೇ ದಿನಗಳಲ್ಲಿ ಜೀಮ್ಸ್ ಪರಿಸರದಲ್ಲಿ 450 ಹಾಸಿಗೆಗಳ ಅತ್ಯಾಧುನಿಕ ಆಸ್ಪತ್ರೆ ಕಾರ್ಯಾರಂಭ ಮಾಡಲಿದೆ ಎಂದು ನುಡಿದರು.
ತಾರಾಲಯ: ಗದಗ ಜಿಲ್ಲೆಯಲ್ಲಿ ತಾರಾಲಯ ಇರುವುದು, ಮೃಗಾಲಯ ನಾಡಿನಲ್ಲಿ ಖ್ಯಾತಿಗಳಿಸಿರುವುದು ಮರೆಯಲಾಗದು. ತಾರಾಲಯ ನಮ್ಮ ಮಕ್ಕಳಲ್ಲಿ ಖಗೋಳ ಶಾಸ್ತ್ರ ತಿಳುವಳಿಕೆ ಕ್ಷಿತಿಜ ವಿಸ್ತರಿಸಲಿದೆ. ವೈಜ್ಞಾನಿಕ ಮನೋಭಾವ ಬೆಳಸಲಿದೆ. ಇದಕ್ಕಾಗಿ ಈಗಾಗಲೇ ರೂ.8 ಕೋಟಿ ವೆಚ್ಚ ಮಾಡಲಾಗಿದೆ. ಭಾರತರತ್ನ ಪಂಡಿತ ಭೀಮಸೇನ ಜೋಷಿ ರಂಗಮಂದಿರ ಅಂದಾಜು ರೂ.10 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಸೌಲಭ್ಯಗಳಿಂದ ಸಜ್ಜಾಗಿ, ನಮ್ಮ ಗದುಗಿನ ಸಾಂಸ್ಕøತಿಕ ಲೋಕವನ್ನು ಶ್ರೀಮಂತಗೊಳಿಸಿದೆ ಎಂದು ಅಭಿಪ್ರಾಯಪಟ್ಟರು.
ನಮ್ಮ ಆಡಳಿತ ಜನಪರವಾಗಬೇಕು. ಪೊಲೀಸ್ ವ್ಯವಸ್ಥೆ ಜನ ಸ್ನೇಹಿಯಾಗಬೇಕು. ಜನಕಲ್ಯಾಣಕ್ಕಾಗಿ ಆಡಳಿತ ಎಂಬ ಕೀರ್ತಿಗೆ ಗದಗ ಪಾತ್ರವಾಗಲು, ಸರಕಾರಿ ಸಿಬ್ಬಂದಿ ಸೇವಾ ಭಾವದಿಂದ ಕೆಲಸ ಮಾಡಬೇಕೆಂದು ಆಪೇಕ್ಷಿಸಿದ ಸಚಿವರು ನಮ್ಮ ಜಿಲ್ಲೆ, ನಾಡಿಗೆ ಬಹು ಅಮೂಲ್ಯ ಕಾಣಿಕೆ ನೀಡಿದೆ. ದೇಶದ ಸಂಗೀತಲೋಕ ಶ್ರೀಮಂತಗೊಳಿಸಿದ ಹೆಗ್ಗಳಿಕೆ ನಮ್ಮದು. ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದ ಸಹಕಾರಿ ಧುರೀಣರನ್ನು ನೀಡಿದ ಹೆಮ್ಮೆ ನಮ್ಮದು. ರಾಜಕೀಯ ಧುರೀಣರನ್ನು, ಸಾರಸ್ವತ ಲೋಕದ ದಿಗ್ಗಜರನ್ನು ಕ್ರೀಡಾಲೋಕದ ಧೀಮಂತರನ್ನು ನೀಡಿದೆ. ಈ ದಿವ್ಯ-ಭವ್ಯ ಪರಂಪರೆ ಮುಂದುವರೆಸಲು ನಮ್ಮ ಇತಿಹಾಸದಿಂದ ಪ್ರೇರಣೆ, ಸ್ಫೂರ್ತಿ ಪಡೆಯೋಣ ಎಂದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ ಸದಸ್ಯ ಎಸ್.ವಿ.ಸಂಕನೂರ, ನಗರಸಭೆ ಅಧ್ಯಕ್ಷೆ ಉಷಾ ದಾಸರ, ಉಪಾಧ್ಯಕ್ಷೆ ಸುನಂದಾ ಬಾಕಳೆ, ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ, ಉಪ ಅರಣ್ಯ ಸಂರಕ್ಷಣಾಧಿಕಾರಿ ದೀಪಿಕಾ ಬಾಜಪೇಯಿ, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ, ಉಪವಿಭಾಗಾಧಿಕಾರಿ ಡಾ.ವೆಂಕಟೇಶ ನಾಯ್ಕ, ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಸಿ.ಆರ್.ಮುಂಡರಗಿ, ತಹಶೀಲ್ದಾರ ಶ್ರೀನಿವಾಸಮೂರ್ತಿ ಕುಲಕರ್ಣಿ ಸೇರಿದಂತೆ ಗಣ್ಯರು, ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು, ಸಾರ್ವಜನಿಕರು, ವಿವಿಧ ಶಾಲಾ ಕಾಲೇಜು ವಿಧ್ಯಾರ್ಥಿಗಳು ಉಪಸ್ಥಿತರಿದ್ದರು. ಪಂ.ವೆಂಕಟೇಶ ಅಲ್ಕೋಡ ಹಾಗೂ ಸಂಗಡಿಗರು ನಾಡಗೀತೆ ಪ್ರಚುರಪಡಿಸಿದರು. ದತ್ತಪ್ರಸನ್ನ ಪಾಟೀಲ ಹಾಗೂ ಮಂಜರಿ ಹೊಂಬಾಳಿ ಕಾರ್ಯಕ್ರಮ ನಿರೂಪಿಸಿದರು.