ಸಂಗೀತ ಆಲಿಕೆ ತರಲಿದೆ ನೆಮ್ಮದಿ

HYR sangeetha 17 (2)
Published on

ಹಿರಿಯೂರು: ಸಂಗೀತ ಆಲಿಸುವುದು ಮತ್ತು ಹಾಡುವುದರಿಂದ ಮಾನಸಿಕ ನೆಮ್ಮದಿ ದೊರೆಯುತ್ತದೆ ಎಂದು ತಹಸೀಲ್ದಾರ್ ಜಿ.ಎಚ್.ಸತ್ಯನಾರಾಯಣ ಹೇಳಿದರು.

ಏಕನಾಥೇಶ್ವರಿ ಸಂಗೀತ ವಿದ್ಯಾಲಯ-ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಇಲ್ಲಿನ ಶ್ರೀ ತೇರುಮಲ್ಲೇಶ್ವರಸ್ವಾಮಿ ದೇವಾಲಯ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಪುರಂದರ ದಾಸರು, ತ್ಯಾಗರಾಜರು, ಕನಕದಾಸರ ಜಯಂತ್ಯುತ್ಸವ ಹಾಗೂ ಜಿಲ್ಲಾ ಮಟ್ಟದ ಸಂಗೀತೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಸಂಗೀತ ಕಲಿಕೆಯತ್ತ ಆಸಕ್ತಿ ವಹಿಸಬೇಕು. ಇದರಿಂದ ಜೀವನೋತ್ಸಾಹ, ಏಕಾಗ್ರತೆ ಹೆಚ್ಚುತ್ತದೆ ಎಂದು ಸಲಹೆ ನೀಡಿದರು.

ಕರ್ನಾಟಕ ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಎಸ್.ಜಿ.ರಂಗಸ್ವಾಮಿ ಸಕ್ಕರ ಮಾತನಾಡಿ, ಪುರಂದರ ದಾಸರು, ತ್ಯಾಗರಾಜರು, ಕನಕದಾಸರು ಸಂಗೀತದ ಮೂಲಕ ಜನರಲ್ಲಿ ಭಕ್ತಿ, ಸಾಮಾಜಿಕ ಸಮಾನತೆ, ಸಾಮರಸ್ಯದ ಬಗ್ಗೆ ಜಾಗೃತಿ ಮೂಡಿಸಿ ಸಮಾಜದಲ್ಲಿ ಶಾಂತಿ-ಸಹಬಾಳ್ವೆ ನೆಲೆಸಲು ಶ್ರಮಿಸಿದ ಮಹಾತ್ಮರು ಎಂದು ಹೇಳಿದರು.

ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಡಾ.ಭೀಮಸೇನ್ ಜೋಷಿ, ಡಾ.ಗಂಗೂಬಾಯಿ ಹಾನಗಲ್, ಮಲ್ಲಿಕಾರ್ಜುನ್ ಮನ್ಸೂರ್, ಪುಟ್ಟರಾಜ ಗವಾಯಿಗಳ ಕೊಡುಗೆ ಅನನ್ಯವಾಗಿದೆ ಎಂದು ಸ್ಮರಿಸಿದರು.

ಸಂಗೀತ ವಿದ್ವಾನ್ ಆರ್.ತಿಪ್ಪೇಸ್ವಾಮಿ ಮಾತನಾಡಿ, ಸಂಗೀತ ಕಲಿಕೆಯಿಂದ ಉತ್ತಮ ಸಂಸ್ಕಾರ, ಸಂಸ್ಕೃತಿ ಬೆಳೆಸಿಕೊಳ್ಳಬಹುದು ಎಂದರು.

ತಾಲೂಕು ಕಸಾಪ ಅಧ್ಯಕ್ಷ ಹರ್ತಿಕೋಟೆ ಮಹಾಸ್ವಾಮಿ ಮಾತನಾಡಿ, ಸಂಗೀತ, ಸಾಹಿತ್ಯ, ರಂಗಕಲೆ ಬದುಕಿನ ಅವಿಭಾಜ್ಯ ಅಂಗವಾಗಿವೆ ಎಂದು ತಿಳಿಸಿದರು.

ನಗರಸಭೆ ಸದಸ್ಯರಾದ ವಿಶಾಲಾಕ್ಷಮ್ಮ, ಜಿ.ಎನ್.ಕವಿತಾ, ಪತ್ರಕರ್ತ ಎಂ.ರವೀಂದ್ರನಾಥ್, ಸಾಹಿತಿ ಕಿರಣ್ ಮೀರಜ್ಕರ್, ಎಂ.ಬಿ.ಲಿಂಗಪ್ಪ, ಜೆ.ನಿಜಲಿಂಗಪ್ಪ, ಶಿವಮೂರ್ತಿ, ಸುದರ್ಶನ್, ಶಿರಾ ರಂಗಸ್ವಾಮಿ, ಎಂ.ಎಸ್.ರವಿ, ಸಂಗೀತ ವಿದುಷಿ ಜಗದಾಂಬ, ವೇದಪುಷ್ಪಾ, ಚಂದ್ರಕಲಾ ಇತರರಿದ್ದರು.

ದಾವಣಗೆರೆ ವಿವಿ ಎಂಎಸ್‌ಸಿ ಪದವಿಯಲ್ಲಿ ಚಿನ್ನದ ಪದಕ ಪಡೆದ ಎಂ.ಆರ್.ಅಮೃತಲಕ್ಷ್ಮಿ ಅವರನ್ನು ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net