

ತುಮಕೂರು: ಜನರಲ್ಲಿ ಎಚ್‌ಐವಿ ಬಗ್ಗೆ ಅರಿವು ಮೂಡಿಸುವುದು ಮತ್ತು ಜನರನ್ನು ಒಗ್ಗೂಡಿಸಿ ಸೋಂಕು ತಡೆಯುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಸನತ್‌ಕುಮಾರ್ ಅಭಿಪ್ರಾಯಪಟ್ಟರು.
ವಿಶ್ವ ಏಡ್ಸ್ ದಿನದ ಅಂಗವಾಗಿ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾಡಳಿತ, ಐಎಂಎ ಮತ್ತು ಸರ್ಕಾರಿ ರಾಜ್ಯ ವೈದ್ಯಾಧಿಕಾರಿಗಳ ಸಂಘ ಮತ್ತು ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ವತಿಯಿಂದ ಸೋಮವಾರ ಜಿಲ್ಲಾಸ್ಪತ್ರೆ ಆವರಣದಲ್ಲಿ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ಎಚ್‌ಐವಿ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ 17 ಐಸಿಟಿಸಿ ಕೇಂದ್ರಗಳಿವೆ, 3 ಎಆರ್‌ಟಿ ಕೇಂದ್ರಗಳು ಹಾಗೂ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪರೀಕ್ಷೆ ಮಾಡಲಾಗುತ್ತದೆ, 12 ಐಸಿಟಿಸಿ ಕೇಂದ್ರಗಳಲ್ಲಿ ಎಆರ್‌ಟಿ ಕೇಂದ್ರ ಸ್ಥಾಪಿಸಿ ಬಾಧಿತರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಕಳೆದ 4 ವರ್ಷದ ಅಂಕಿ ಆಂಶಗಳ ಪ್ರಕಾರ ವರ್ಷದಿಂದ ವರ್ಷಕ್ಕೆ ಪರೀಕ್ಷೆಗೆ ಒಳಪಟ್ಟವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ ಎಂಬ ಮಾಹಿತಿ ನೀಡಿದರು. ಕಳೆದ ವರ್ಷ 1,10,809 ಜನರು ಪರೀಕ್ಷೆಗೆ ಒಳಪಟ್ಟಿದ್ದು 13,002 ಬಾಧಿತರು ನೋಂದಾಯಿಸಿಕೊಂಡಿದ್ದಾರೆ, ಇವರಲ್ಲಿ 11,006 ಬಾಧಿತರಿಗೆ ಚಿಕಿತ್ಸೆ ಪ್ರಾರಂಭಿಸಲಾಗಿದೆ, 4,008 ಬಾಧಿತರ ವಿವಿಧ ಸೋಂಕಿನಿಂದ ಮರಣ ಹೊಂದಿದ್ದು, 6974 ಬಾಧಿತರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವಿವರಿಸಿದರು.
985ರಲ್ಲಿ ಎಚ್‌ಐವಿ ಕಾಯ್ದೆ ಜಾರಿಗೆ ತರಲಾಗಿದೆ, ಈ ಮೂಲಕ ಜನರಿಗೆ ಸೋಂಕಿನ ಬಗ್ಗೆ ಅರಿವು ಮೂಡಿಸುವುದು ಮತ್ತು ನಿಯಂತ್ರಿಸುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ್, ಕಾನೂನಿನಡಿಯಲ್ಲಿ ಬಾಧಿತರಿಗೆ ಉಚಿತವಾಗಿ ಕಾನೂನಿನ ನೆರವು ನೀಡಲು ಕಾನೂನು ಸೇವೆಗಳ ಪ್ರಾಧಿಕಾರ ಬದ್ಧವಾಗಿದೆ ಎಂದರು.
ಡಿಎಚ್‌ಒ ಡಾ.ನಾಗೇಂದ್ರಪ್ಪ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ವೀರಭದ್ರಯ್ಯ, ಭಾರತೀಯ ವೈದ್ಯಕೀಯ ಸಂಘದ ಡಾ.ಶ್ರೀನಾಥ್, ಸರ್ಕಾರಿ ವೈದ್ಯರ ಸಂಘದ ಡಾ.ರಾಜಶೇಖರಯ್ಯ, ಡಾ.ಮೋಹನ್ ದಾಸ್, ಯೋಜನಾ ನಿರ್ವಾಹಕ ಮಾರ್ಸ್-ಕೆ ಸಂಸ್ಥೆಯ ಚಂದ್ರಪ್ಪ ಇತರರಿದ್ದರು.