

ಚಿಕ್ಕಮಗಳೂರು: ಹೆಚ್‍ಐವಿ ಏಡ್ಸ್ ನಿಂದ ಬಳಲುತ್ತಿರುವವರಿಗೆ ಸೂಕ್ತ ಚಿಕಿತ್ಸೆ, ಸ್ಫೂರ್ತಿ ನೀಡಿದಲ್ಲಿ ಅವರು ಸಮಾಜದಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳಬಲ್ಲರು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಸವರಾಜ ಚೇಂಗಟಿ ಹೇಳಿದರು.
ತಾಪಂ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ರಾಜ್ಯ ಏಡ್ಸ್ ನಿಯಂತ್ರಣ ಸಂಸ್ಥೆ, ಜಿಲ್ಲಾ ಕ್ಷಯ ರೋಗ ನಿಯಂತ್ರಣ ಕೇಂದ್ರ ಹಾಗೂ ವಿವಿಧ ಇಲಾಖೆಗಳ ಆಶ್ರಯದಲ್ಲಿ ನಡೆದ ವಿಶ್ವ ಏಡ್ಸ್ ದಿನ ಹಾಗೂ ಕ್ಷಯ ರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನ ಉದ್ಘಾಟಿಸಿ ಮಾತನಾಡಿದರು.
ಏಡ್ಸ್ ನಲ್ಲಿ ಭಾರತಕ್ಕೆ 16ನೇ ಸ್ಥಾನ
ಏಡ್ಸ್ ಪೀಡಿತ ರಾಷ್ಟ್ರಗಳಲ್ಲಿ ಭಾರತ 16ನೇ ಸ್ಥಾನ ಹೊಂದಿದ್ದು, ಏಡ್ಸ್ ಮುಕ್ತ ರಾಷ್ಟ್ರವನ್ನಾಗಿ ಮಾಡಲು ಮೊದಲು ನಮ್ಮಲ್ಲಿ ಜಾಗೃತಿ ಮೂಡಬೇಕು. ನಾವು ಎಚ್ಚರಿಕೆಯಿಂದಿದ್ದರೆ ಆರೋಗ್ಯವಂತ ದೇಶ ನಿರ್ಮಾಣ ಮಾಡಬಹುದು.ನಾವು ಜೀವನದಲ್ಲಿ ಒಂದು ಕ್ಷಣ ಅಜಾಗರೂಕರಾದರೆ ಆರೋಗ್ಯ ಮತ್ತು ಗಳಿಸಿದ ಹಣ ಹಾಗೂ ಜೀವನ ಕಳೆದುಕೊಳ್ಳುತ್ತೇವೆ. ಎಲ್ಲರೂ ಜಾಗರೂಕರಾಗಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.
ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಂಡರೆ ಡೆಂಘೆ, ಮಲೇರಿಯಾ ಹರಡಲು ಸಾಧ್ಯವಿಲ್ಲ. ಮನಸ್ಸು ಸ್ವಚ್ಛವಾಗಿಟ್ಟುಕೊಂಡರೆ ಏಡ್ಸ್ ಬರಲು ಸಾಧ್ಯವಿಲ್ಲ ಎಂಬ ಅಂಶವನ್ನು ಮನದಟ್ಟು ಮಾಡಿಕೊಳ್ಳಬೇಕು ಎಂದು ಹೇಳಿದರು.
ಹಿಂದಿನ ಜೀವನ ಶೈಲಿ ಇಲ್ಲ
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ವಿ.ಟಿ.ಥಾಮಸ್ ಮಾತನಾಡಿ, ಹಿಂದಿನ ಆಹಾರ ಪದ್ಧತಿ ಹಾಗೂ ಜೀವನ ಶೈಲಿಯನ್ನು ಇಂದು ನಾವು ಕಾಣಲು ಸಾಧ್ಯವಿಲ್ಲ. ಬದಲಾಗಿ ಇಂದು ಔಷಧಿಗಳಿಗೆ, ಅನಾರೋಗ್ಯಕ್ಕೆ ತುತ್ತಾಗುತ್ತಿದ್ದೇವೆ. ಇದಕ್ಕೆ ನಮ್ಮ ನಿರ್ಲಕ್ಷವೇ ಕಾರಣ ಎಂದು ಹೇಳಿದರು.
ಬಡವ-ಶ್ರೀಮಂತ, ಮೇಲು-ಕೀಳು, ಸಂಸ್ಕøತಿ, ಜಾತಿ-ಧರ್ಮ ಎಂಬ ಕಳಂಕ ಮತ್ತು ತಾರತಮ್ಯವಿಲ್ಲದೇ ಹೆಚ್‍ಐವಿಯನ್ನು ನಿಯಂತ್ರಿಸಲು ಪ್ರತಿಯೊಬ್ಬರೂ ಜಾಗೃತಿ ಹಾಗೂ ಸುರಕ್ಷಿತ ನಡಾವಳಿಗಳನ್ನು ಹೊಂದಬೇಕು ಎಂದರು.
ಹೆಚ್‍ಐವಿ ಸೋಂಕಿತರಿಗೆ ಸಾಂತ್ವನ ಬೇಕು
ಆರ್‍ಸಿಎಚ್ ಅಧಿಕಾರಿ ಡಾ.ಭರತ್ ಕುಮಾರ್ ಮಾತನಾಡಿ, ಹೆಚ್‍ಐವಿ ಸೋಂಕಿತರಿಗೆ ವ್ಯಕ್ತಿ ಮತ್ತು ಸಮುದಾಯಗಳು ಧೈರ್ಯ, ಮಾನಸಿಕ ಸ್ಥೈರ್ಯ, ಬೆಂಬಲ ಹಾಗೂ ಸಾಂತ್ವ್ವನ ಹೇಳುವ ಕೆಲಸ ಮಾಡಬೇಕು. ನಾವು ಜಾಗೃತರಾಗಿ, ಆರೋಗ್ಯ, ಶಿಕ್ಷಣ, ಉದ್ಯೋಗಕ್ಕೆ ಆದ್ಯತೆ ಕೊಟ್ಟು ದೇಶದಲ್ಲಿ ಉತ್ತಮ ಬದಲಾವಣೆ ತರಬೇಕು ಎಂದು ಹೇಳಿದರು.
ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಟಿ.ಪಿ.ಬಾಲಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಆಯುಷ್ ಅಧಿಕಾರಿ ಡಾ.ಗೀತಾ, ತಾಲೂಕು ವೈದ್ಯಾಧಿಕಾರಿ ಡಾ.ಸೀಮಾ, ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಹರೀಶ್‍ಬಾಬು, ಜಿಲ್ಲಾ ಉಪ ಆರೋಗ್ಯಾಧಿಕಾರಿ ಡಾ.ಜಲಜಾಕ್ಷಿ, ಉಪನ್ಯಾಸಕ ರಾಜು ನರಸಯ್ಯ, ಲಲಿತಾ, ಸುಜಾತ ಮತ್ತಿತರರು ಕಾರ್ಯಕ್ರಮದಲ್ಲಿದ್ದರು.