ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದ ಹರಡಲಿದೆ ಎಚ್‌ಐವಿ

mysore
Published on

ಮೈಸೂರು: ಎಚ್‌ಐವಿ ಬಗ್ಗೆ ಸಮಾಜದಲ್ಲಿ ಬೇರೆ ರೀತಿಯ ಭಾವನೆಗಳಿವೆ. ಆದರೆ ಇದು ಒಂದು ಸೋಂಕಾಗಿದ್ದು, ಇದರ ಬಗ್ಗೆ ಅರಿವು ಮೂಡಿಸುವುದು ಅನಿವಾರ್ಯವಾಗಿದೆ ಎಂದು ಕೆ.ಆರ್.ಆಸ್ಪತ್ರೆಯ ಎಆರ್‌ಟಿ ಕೇಂದ್ರದ ಸಮಾಲೋಚಕ ಮಧುಸೂಧನ್ ಹೇಳಿದರು.


ಎಸ್.ಬಿ.ಆರ್.ಆರ್. ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಎಚ್‌ಐವಿ, ಏಡ್ಸ್ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.


ಎಚ್‌ಐವಿಯು 40 ರಿಂದ 45 ವರ್ಷಗಳಿಂದೀಚೆಗೆ ಕಂಡು ಬಂದಿದ್ದು, ಇದು ಚೆನ್ನೈನಲ್ಲಿ ಪ್ರಥಮ ಬಾರಿಗೆ 1986ರಲ್ಲಿ ಕಂಡು ಬಂದಿತ್ತು. ಈ ರೋಗವು ಮಹಿಳೆಯರಿಗಿಂತ ಪುರುಷರಲ್ಲಿ ಹೆಚ್ಚು ಕಂಡು ಬಂದಿದ್ದು, ಪ್ರಸ್ತುತ ರಾಜ್ಯದಲ್ಲಿ 2.50 ಲಕ್ಷ ಜನರು ಈ ಸೋಂಕಿನಿಂದ ಬಳಲುತ್ತಿದ್ದಾರೆ ಎಂದರು.


ಎಚ್‌ಐವಿ ಒಂದು ರೋಗಾಣು. ಇದು ಮಾನವನ ದೇಹವನ್ನು ಸೇರಿದ ಆರು ವರ್ಷಗಳ ನಂತರ ಇರುವಿಕೆಯ ಲಕ್ಷಣ ತೋರಿಸುತ್ತದೆ. ಬಿಟ್ಟು ಬಿಟ್ಟು ಬರುವ ಜ್ವರ, ಅತಿಸಾರ ಭೇದಿ ಹಾಗೂ ದೇಹದ ತೂಕ ಕಡಿಮೆಯಾಗುವುದು ಇದರ ಪ್ರಥಮ ಲಕ್ಷಣವಾಗಿದೆ. ಈ ಕಾಯಿಲೆಯನ್ನು ರಕ್ತ ಪರೀಕ್ಷೆ ಮೂಲಕ ಪತ್ತೆ ಹಚ್ಚಬಹುದಾಗಿದೆ ಎಂದು ತಿಳಿಸಿದರು.


ಎಚ್.ಐ.ವಿ. ರೋಗ ತಾಯಿಯಿಂದ ಮಗುವಿಗೆ, ಅಸುರಕ್ಷಿತ ಲೈಂಗಿಕ ಕ್ರಿಯೆ ಹಾಗೂ ರಕ್ತ ವಿನಿಮಯಗಳಿಂದಾಗಿ ಹರಡುತ್ತದೆ. 10 ವರ್ಷಗಳಿಂದೀಚೆಗೆ ತಾಯಿಯಿಂದ ಮಗುವಿಗೆ ಬರುವ ಎಚ್.ಐ.ವಿ. ಸೋಂಕಿನ ಪ್ರಮಾಣ ಕಡಿಮೆಯಾಗಿದ್ದು, ಶೇ.83ರಷ್ಟು ಎಚ್‌ಐವಿ ರೋಗವು ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದ ಹರಡುತ್ತಿದೆ. ಸುಮಾರು 15ರಿಂದ 29 ವರ್ಷದ ವಯಸ್ಕರು ಈ ಕಾಯಿಲೆಗೆ ಒಳಪಡುವ ಸಂಖ್ಯೆ ಹೆಚ್ಚಾಗುತ್ತಿದ್ದು, ಇದಕ್ಕೆ ಕಾರಣ ಇಂದಿನ ಯುವಕರಲ್ಲಿರುವ ಸ್ವೇಚ್ಛಾಚಾರ ಎಂದರು.


ಈ ಸೋಂಕಿನಿಂದ ಪಾರಾಗಲು ನಿರಂತರ ಚಿಕಿತ್ಸೆಗೆ ಒಳಗಾಗಬೇಕು. ಇದಕ್ಕೆ ಶಾಶ್ವತ ಲಸಿಕೆ ಇನ್ನೂ ಕಂಡುಹಿಡಿದಿಲ್ಲ. ಇದು ಒಂದೇ ರೂಪದಲ್ಲಿರದೇ ಹಲವು ರೂಪಗಳಲ್ಲಿ ಕಂಡುಬರುತ್ತಿರುವುದು ಇದಕ್ಕೆ ಕಾರಣ. ಆದ್ದರಿಂದ ಇಂದಿನ ಯುವಕರು ಇದರ ಬಗ್ಗೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವುದರ ಮೂಲಕ ಈ ಸೋಂಕಿನಿಂದ ದೂರ ಉಳಿಯಬೇಕು ಎಂದರು.


ಪ್ರಾಂಶುಪಾಲರಾದ ಡಾ.ಬಿ.ಆರ್. ಜಯಕುಮಾರಿ ಮಾತನಾಡಿ, ಮಾನವ ಸಮಾಜ ಜೀವಿ. ಅವನು ಸರಿಯಾದ ಮಾರ್ಗದಲ್ಲಿ ಜೀವಿಸಬೇಕು. ಹಿಂದಿನ ಕಾಲದಲ್ಲಿ ಹಿರಿಯರು ಮಕ್ಕಳಿಗೆ ಇತಿ-ಮಿತಿ ಏರುತ್ತಿದ್ದರು. ಆದರೆ ಅದು ನಿಜವಾಗಿಯೂ ಇತಿ-ಮಿತಿಗಳಲ್ಲ, ಜೀವನವನ್ನು ಉತ್ತಮ ದಾರಿಯಲ್ಲಿ ನಡೆಸಲು ನೀಡುವ ಮಾರ್ಗದರ್ಶನವಾಗಿತ್ತು. ಇಂದಿನ ಯುವಕರು ಸುಂದರವಾದ ಜೀವನವನ್ನು ಸೃಷ್ಟಿಸಿಕೊಳ್ಳಬೇಕು ಎಂದರು.


ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಶೈಕ್ಷಣಿಕ ಸಲಹೆಗಾರ ಡಾ.ಎಸ್.ಆರ್. ರಮೇಶ್, ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿಗಳಾದ ಡಾ. ಜಿ.ದೊಡ್ಡರಸಯ್ಯ, ಡಾ.ಸಿ.ಎಸ್.ಸಿದ್ದರಾಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net