ಎಚ್‌ಐವಿ ಸೋಂಕಿತರಿಗೆ ಸೌಲಭ್ಯ ಒದಗಿಸಿ

26Jaggu3
ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಮಟ್ಟದ ಎಚ್.ಐ.ವಿ.ಏಡ್ಸ್ ಸಮನ್ವಯ ಸಮಿತಿ ಸಭೆ ಹಮ್ಮಿಕೊಳ್ಳಲಾಗಿತ್ತು. ಡಿಸಿ ಡಾ.ಹಿರೇಮಠ, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಅನಿಲ ಕೊರಬು, ಡಿಸಿಪಿ ಚಂದ್ರಶೇಖರ್ ನೀಲಗಾರ, ಡಾ. ಎಸ್.ವಿ. ಮುನ್ಯಾಳ ಇತರರಿದ್ದರು.
Published on

ಬೆಳಗಾವಿ: ಎಚ್‌ಐವಿ ಪೀಡಿತರಿಗೆ ಸರ್ಕಾರಿ ಸೌಲಭ್ಯಗಳಾದ ರೇಷನ್ ಕಾರ್ಡ್, ವೈದ್ಯಕೀಯ ಸೌಲಭ್ಯ, ಶಾಲಾ ಪ್ರವೇಶ, ವಿದ್ಯಾರ್ಥಿ ವೇತನ, ಆಶ್ರಯ ಮನೆ ಸೇರಿ ಎಲ್ಲ ಬಗೆಯ ಸರ್ಕಾರಿ ಸೌಲಭ್ಯಗಳನ್ನು ಸಮರ್ಪಕವಾಗಿ, ಸಕಾಲಕ್ಕೆ ತಲುಪಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಎಚ್‌ಐವಿ ಏಡ್ಸ್ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿ, ಎಚ್‌ಐವಿ ಸೋಂಕಿತರಿಗೆ ಖಾಸಗಿ ಆಸ್ಪತ್ರೆಯವರು ಚಿಕಿತ್ಸೆ ನಿರಾಕರಿಸಿದರೆ ಲೈಸನ್ಸ್ ರದ್ದುಗೊಳಿಸುವುದಾಗಿ ಎಚ್ಚರಿಕೆ ನೀಡಿದರು.
ಸುತ್ತೋಲೆ ಒದಗಿಸಿ: ಪಾಲಿಕೆ ಆಯುಕ್ತ ಕೆ.ಎಚ್. ಜಗದೀಶ ಮಾತನಾಡಿ, ಸೋಂಕಿತರಿಗೆ ಏಕಗವಾಕ್ಷಿ ವ್ಯವಸ್ಥೆಯಡಿ ನೀಡಲಾಗುವ ಸಹಾಯ-ಸೌಲಭ್ಯಗಳಿಗೆ ಸಂಬಂಧಿಸಿದಂತೆ ಸರ್ಕಾರ ಕಾಲಕಾಲಕ್ಕೆ ಹೊರಡಿಸುವ ಸುತ್ತೋಲೆ ಮತ್ತು ಆದೇಶ ಪ್ರತಿಗಳನ್ನು ಎಲ್ಲರಿಗೂ ಒದಗಿಸಬೇಕು ಎಂದು ಸಲಹೆ ನೀಡಿದರು.

ಸಹಕಾರ ಅಗತ್ಯ: ಜಿಲ್ಲಾ ಎಚ್‌ಐವಿ ಏಡ್ಸ್ ನಿಯಂತ್ರಣಾಧಿಕಾರಿ ಅನಿಲ ಕೊರಬು ಮಾತನಾಡಿ, ಏಕಗವಾಕ್ಷಿ ಮೂಲಕ ಎಚ್‌ಐವಿ ಮತ್ತು ಟಿಬಿ ಬಾಧಿತರಿಗೆ ವೈದ್ಯಕೀಯ ಮತ್ತು ಸಾಮಾಜಿಕ ಸೌಲಭ್ಯ ಒದಗಿಸುವ ಉದ್ದೇಶವಿದೆ. ಅಪಾಯದ ಅಂಚಿನಲ್ಲಿರುವ ಲೈಂಗಿಕ ಕಾರ್ಯಕರ್ತೆಯರು, ತೃತೀಯ ಲಿಂಗಿಗಳು, ಸೋಂಕಿತರು, ಮಕ್ಕಳಿಗೆ ಅಗತ್ಯ ನೆರವು ಸೌಲಭ್ಯ ನೀಡಲು ಶ್ರಮಿಸಲಾಗುತ್ತಿದೆ. ಇದಕ್ಕಾಗಿ ವಿವಿಧ ಇಲಾಖೆಗಳ ನೆರವು ಮತ್ತು ಸಮನ್ವಯದ ಅಗತ್ಯತೆಯಿದೆ ಎಂದರು.

ಅಪರಾಧ ಮತ್ತು ಸಂಚಾರ ವಿಭಾಗದ ಉಪ ಪೊಲೀಸ್ ಆಯುಕ್ತ ಚಂದ್ರಶೇಖರ ನೀಲಗಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ವಿ. ಮುನ್ಯಾಳ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಬಾಲಕೃಷ್ಣ ತುಕ್ಕಾರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪ ನಿರ್ದೇಶಕ ಗುರುನಾಥ ಕಡಬೂರ, ಕಾರ್ಮಿಕ ಅಧಿಕಾರಿ ತರನ್ನುಂ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ತಾರತಮ್ಯ ಮಾಡಿದರೆ ಪ್ರಕರಣ ದಾಖಲಿಸಿ

ಶಾಲೆಗಳಲ್ಲಿ ಮಕ್ಕಳಿಗೆ ತಾರತಮ್ಯ ಆಗದಂತೆ ಎಚ್ಚರಿಕೆ ವಹಿಸಬೇಕು. ಎಲ್ಲಿಯೇ ತಾರತಮ್ಯ ಅಥವಾ ಕಿರುಕುಳ ಕಂಡುಬಂದರೆ ಪ್ರಕರಣ ದಾಖಲಿಸಬೇಕು. ಇಂತಹ ಪ್ರಕರಣದಲ್ಲಿ ಸೋಂಕಿತರ ಬಗ್ಗೆ ಸಹಾನುಭೂತಿಯಿಂದ ನಡೆದುಕೊಳ್ಳಬೇಕು. ಅಲ್ಲದೆ ಆರೋಗ್ಯ ಇಲಾಖೆ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್, ಕಾರ್ಮಿಕ ಇಲಾಖೆ ಸೇರಿದಂತೆ ಸಂಬಂಧಿಸಿದ ಎಲ್ಲ ಇಲಾಖೆಯವರು ತಮ್ಮ ವ್ಯಾಪ್ತಿಯಲ್ಲಿ ನೆರವು ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ಜಿ.ಹಿರೇಮಠ ಹಿರೇಮಠ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net