

ಕುಶಾಲನಗರ : ಹದಿಹರೆಯದವರು ಎಚ್‌ಐವಿ ಸೋಂಕಿಗೆ ಹೆಚ್ಚು ಒಳಗಾಗುತ್ತಿದ್ದಾರೆ. ಅಸುರಕ್ಷಿತ ಜೀವನ ಶೈಲಿಯೇ ಇದಕ್ಕೆ ಮುಖ್ಯ ಕಾರಣ ಎಂದು ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದ ಆಪ್ತ ಸಮಾಲೋಚಕಿ ಮುತ್ತಮ್ಮ ಆತಂಕವ್ಯಕ್ತಪಡಿಸಿದರು.
ಕುಶಾಲನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಿಬ್ಬನ್ ಕ್ಲಬ್ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳ ವತಿಯಿಂದ ಗುರುವಾರ ಆಯೋಜಿಸಿದ್ದ ಏಡ್ಸ್ ಕುರಿತ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಜಾಗೃತರಾಗಿ ಸಮಾಜವನ್ನೂ ಜಾಗೃತಗೊಳಿಸುವ ಕೆಲಸ ಮಾಡಬೇಕೆಂದು ತಿಳಿಸಿದರು.
ಆಪ್ತ ಸಹಾಯಕಿ ಶ್ರೀಲತಾ ಮಾತನಾಡಿ, ಯುವ ಜನಾಂಗ ದುಡುಕಿ ಮುಂದುವರಿಯುತ್ತಿರುವುದರಿಂದ ಇಂತಹ ಕಾಯಿಲೆಗಳು ಹೆಚ್ಚಾಗುತ್ತಿವೆ. ಈ ಬಗ್ಗೆ ಪಾಲಕರು ಎಚ್ಚರಿಕೆ ವಹಿಸಬೇಕಾಗಿದೆ ಎಂದು ಸಲಹೆ ನೀಡಿದರು. ಕಾಲೇಜಿನ ಪ್ರಾಂಶುಪಾಲ ಬಿ.ಎಂ.ಪ್ರವೀಣ್‌ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ರೆಡ್ ರಿಬ್ಬನ್ ಕ್ಲಬ್ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮಾಧಿಕಾರಿ ಡಾ.ಎಸ್.ಸುನೀಲ್ ಕುಮಾರ್, ಮಧುಶ್ರೀ, ದೈಹಿಕ ಶಿಕ್ಷಣ ನಿರ್ದೇಶಕಿ ಜಯಂತಿ ಪಿ.ಪಿ. ಬೋಧಕ ವರ್ಗದವರಾದ ಡಾ.ಹರ್ಷ, ಬಿ.ಡಿ. ರಮೇಶ್‌ಚಂದ್ರ ಪಿ. ಶಾಲಿನಿ, ರೋಜಾ, ವಿದ್ಯಾರ್ಥಿಗಳು ಹಾಜರಿದ್ದರು.