ಏಡ್ಸ್ ಹತೋಟಿಗೆ ಎಲ್ಲರ ಸಹಕಾರ ಅಗತ್ಯ

IMG-20230819-WA0310
Published on

ಔರಾದ್: ಎಚ್‌ಐವಿ ರೋಗಿಗಳಿಗೂ ಸಮಾಜದಲ್ಲಿ ಸಾಮಾನ್ಯ ಜನರಂತೆ ಬದುಕುವ ಹಕ್ಕಿದೆ. ಏಡ್ಸ್ ಸೊನ್ನೆಗೆ ತರಲು ಜನರು ಮತ್ತು ಎಲ್ಲ ಇಲಾಖೆಯವರು ಕೈಜೋಡಿಸಬೇಕು ಎಂದು ದಂತ ವೈದ್ಯಾಧಿಕಾರಿ ಡಾ.ರೇಣುಕಾ ನಾಗರಾಳಕರ ಹೇಳಿದರು.
ಸಂತಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿ ಹಾಗೂ ಲಾಲ್ ಬಹಾದ್ದೂರ್ ಶಿಕ್ಷಣ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಸಂಪರ್ಕ ಕಾರ್ಯಕರ್ತ ಯೋಜನೆ ಅಡಿ ಶನಿವಾರ ಏರ್ಪಡಿಸಿದ್ದ ವಕಾಲತ್ತು ವಹಿಸುವಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅನೈತಿಕ ದೈಹಿಕ ಸಂಬಂಧದಿಂದ ಏಡ್ಸ್ ಸೋಂಕು ಹರಡಬಹುದು. ಮುಂಜಾಗ್ರತಾ ಕ್ರಮಗಳಿಂದ ಇದನ್ನು ತಡೆಗಟ್ಟಬಹುದು. ಏಡ್ಸ್ ಲಕ್ಷಣ, ನಿಯಂತ್ರಣಕ್ಕೆ ಬೇಕಾದ ಕ್ರಮಗಳ ಕುರಿತು ಜಾಗೃತಿ ಮೂಡಿಸಬೇಕು. ಆರಂಭಿಕ ಹಂತದಲ್ಲೇ ಜಾಗೃತರಾದರೆ ತಡೆಯಬಹುದು ಎಂದು ಹೇಳಿದರು.
ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಜಿಲ್ಲಾ ಮೇಲ್ವಿಚಾರಕ ಸೂರ್ಯಕಾಂತ ಮಾತನಾಡಿ, ಸಂಪರ್ಕ ಕಾರ್ಯಕರ್ತ ಯೋಜನೆಯು ಬೀದರ್ ಜಿ¯್ಲೆಯಲ್ಲಿ ೧೦೦ ಅಪಾಯದ ಅಂಚಿನ ಗ್ರಾಮಗಳಲ್ಲಿ ಹಮ್ಮಿಕೊಳ್ಳಲಾಗಿದೆ. ದಮನಿತ ಮಹಿಳೆಯರು, ಲಿಂಗತ್ವ ಅಲ್ಪಸಂಖ್ಯಾತರರು, ವಲಸೆ ಕಾರ್ಮಿಕರು, ಲಾರಿ ಚಾಲಕರು, ಎಚ್‌ಐವಿಯೊಂದಿಗೆ ಬದುಕುತ್ತಿರುವವರ ಆರೋಗ್ಯ ಕಾಳಜಿ ವಹಿಸುವ ಯೋಜನೆ ಇದಾಗಿದೆ ಎಂದರು.
ಲಾಲ್ ಬಹಾದ್ದೂರ್ ಶಿಕ್ಷಣ ಸಂಸ್ಥೆಯ ವಿಶ್ವನಾಥ ಸ್ವಾಮಿ ಮಾತನಾಡಿ, ಎಚ್‌ಐವಿ ಏಡ್ಸ್ ಬಗ್ಗೆ ಜನರಲ್ಲಿರುವ ಆತಂಕ ದೂರಮಾಡಬೇಕು. ಏಡ್ಸ್ ಪೀಡಿತರೊಂದಿಗೆ ಮುಕ್ತವಾಗಿ ಬದುಕಬೇಕು ಎಂದರು.
ಗ್ರಾಪಂ ಸದಸ್ಯ ಬಸವರಾಜ ಸ್ವಾಮಿ, ಸಿದ್ರಾಮ ಬ್ಯಾಳೆ, ಆಪ್ತ ಸಮಾಲೋಚಕಿ ಸುನಿತಾ, ಪಾಶಾ ಜ್ಯೋತಿ, ಆನಂದ, ಅಶೋಕ ಪಂಚಾಳ, ಅನೀಲ ರೆಡ್ಡಿ, ಕಾರ್ತಿಕ ಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net