

ಪಾಂಡವಪುರ: ಎಚ್‌ಐವಿ ಸೋಂಕು ಮಾರಕ ಕಾಯಿಲೆಯಾಗಿದ್ದು, ಸಾರ್ವಜನಿಕರು ಸೋಂಕಿನ ಬಗ್ಗೆ ಜಾಗೃತರಾಗಿರಬೇಕು ಎಂದು ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ಶ್ರೇಣಿ ನ್ಯಾಯಾಧೀಶ ಆರ್.ಮಹೇಶ್ ಸಲಹೆ ನೀಡಿದರು.
ತಾಲೂಕು ಕಾನೂನು ಸೇವಾ ಸಮಿತಿ, ವಕೀಲ ಸಂಘ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಪಟ್ಟಣದ ನ್ಯಾಯಾಲಯ ಆವರಣದಲ್ಲಿ ಸೋಮವಾರ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದರು.
ಏಡ್ಸ್ ಒಂದು ವೈರಸ್‌ನಿಂದ ಬರುವ ಕಾಯಿಲೆಯಾಗಿದೆ. 1978ರಲ್ಲಿ ಈ ವೈರಸ್ ಮೊದಲು ಪತ್ತೆಯಾಯಿತು. ಇದರಿಂದ ಸಾಕಷ್ಟು ಜನರು ಸೋಂಕಿಗೆ ಒಳಗಾದ ಹಿನ್ನೆಲೆಯಲ್ಲಿ ಈ ಬಗ್ಗೆ ಜನರಿಗೆ ಅರಿವು ಮೂಡಿಸುವ ಉದ್ದೇಶದಿಂದ ವಿಶ್ವಸಂಸ್ಥೆ 1988 ಡಿ.1ರಂದು ವಿಶ್ವ ಏಡ್ಸ್ ದಿನಾಚರಣೆ ಎಂದು ಘೋಷಿಸಿತು. ಅಲ್ಲಿಂದ ಜನರಿಗೆ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಅಸುರಕ್ಷತೆ ಲೈಂಗಿಕ ಕ್ರಿಯೆ, ಬಳಕೆ ಮಾಡಿದ ವೈದ್ಯಕೀಯ ಸರಕುಗಳ ಮರು ಬಳಕೆ, ಸೋಂಕಿತ ವ್ಯಕ್ತಿ ರಕ್ತದಾನ ಮಾಡುವುದರಿಂದ ಸೋಂಕು ಹರಡುತ್ತದೆ. ಸಾರ್ವಜನಿಕರು ಸೋಂಕಿತ ವ್ಯಕ್ತಿಗಳಿಗೆ ಧೈರ್ಯ ತುಂಬುವುದರ ಜತೆಗೆ ಸಹಾನುಭೂತಿ ತೋರಬೇಕಾಗಿದೆ. ಇಂತಹ ಜಾಗೃತಿ ಕಾರ್ಯಕ್ರಮಗಳ ಮೂಲಕ ಸೋಂಕು ಹರಡದಂತೆ ಜನರಿಗೆ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.
ಸಿವಿಲ್ ನ್ಯಾಯಾಧೀಶೆ ಬಿ.ಪಾರ್ವತಮ್ಮ ಮಾತನಾಡಿ, ಏಡ್ಸ್ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಜಾಗೃತಿ ಜಾಥಾ ನಡೆಸಲಾಗುತ್ತಿದೆ. ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರೆ ಸೋಂಕು ಕಡಿಮೆಯಾಗಬೇಕು. ಆದರೆ ಹೆಚ್ಚುತ್ತಿರುವುದು ವಿಷಾದಕರ ಸಂಗತಿ ಎಂದು ತಿಳಿಸಿದರು.
ಟಿಎಚ್‌ಒ ಡಾ.ಸಿ.ಎ.ಅರವಿಂದ್ ಮಾತನಾಡಿ, ಆರೋಗ್ಯ ಇಲಾಖೆ ಏಡ್ಸ್ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸುತ್ತಿದೆ. ಶಾಲಾ-ಕಾಲೇಜು, ಗ್ರಾಪಂಗಳಲ್ಲಿ ಕರಪತ್ರಗಳ ಹಂಚಿಕೆ, ಜಾಗೃತಿ ಕಾರ್ಯಕಮ ಮಾಡುತ್ತಿದೆ ಎಂದರು.
ಕಾರ್ಯಕ್ರಮದ ಬಳಿಕ ನ್ಯಾಯಾಲಯ ಆವರಣದಿಂದ ಆಸ್ಪತ್ರೆವರೆಗೆ ಜಾಗೃತಿ ಜಾಥಾ ನಡೆಯಿತು. ಸಮಾರಂಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಕೆ.ಕಾಳೇಗೌಡ, ನ್ಯಾಯಾಧೀಶರಾದ ಬಾಬು, ಕಿಶೋರ್ ಕುಮಾರ್, ಪದ್ಮಾ, ವಕೀಲರ ಸಂಘದ ಕಾರ್ಯದರ್ಶಿ ಕೆ.ಎನ್.ನಾಗರಾಜು, ಸಬ್ ಇನ್‌ಸ್ಪೆಕ್ಟರ್ ಉಮೇಶ್, ಹೆಲ್ತ್ ಇನ್ಸ್‌ಪೆಕ್ಟರ್ ಪುಟ್ಟಸ್ವಾಮಿ ಸೇರಿದಂತೆ ಹಲವರು ಇದ್ದರು.