

ಮಂಡ್ಯ: ಅಸುರಕ್ಷಿತ ಲೈಂಗಿಕ ಕ್ರಿಯೆ ಬಿಟ್ಟು ಹಾಗೂ ಏಕ ಪತ್ನಿ ವ್ರತಸ್ತ ಪಾಲಿಸಿದಾಗ ಎಚ್‌ಐವಿ ರೋಗ ಬಾರದಂತೆ ನೋಡಿಕೊಳ್ಳಬಹುದು ಎಂದು ಮಿಮ್ಸ್ ಸ್ಥಾನೀಯ ವೈದ್ಯಾಧಿಕಾರಿ ಡಾ.ವೆಂಕಟೇಶ್ ಸಲಹೆ ನೀಡಿದರು.
ನಗರದ ಮಿಮ್ಸ್ ಹೆರಿಗೆ ವಾರ್ಡ್ ಆವರಣದಲ್ಲಿರುವ ಮಮತೆಯ ಮಡಿಲು ನಿತ್ಯ ಅನ್ನದಾಸೋಹ ಕೇಂದ್ರದಲ್ಲಿ ಏಡ್ಸ್ ಪ್ರಿವೆನ್ಷನ್ ಸೊಸೈಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ಪ್ರತಿಬಂಧಕ ಘಟಕ, ಸಂತೆಕಸಲಗೆರೆ ಶಿವಗಂಗಾ ಸಾಂಸ್ಕೃತಿಕ ಯುವಕ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಎಚ್‌ಐವಿ ಕುರಿತ ಜನಜಾಗೃತಿ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದರು. ಎಚ್‌ಐವಿ ಕಾಯಿಲೆಗೆ ಔಷಧವಿದೆ. ಆದ್ದರಿಂದ ಭಯಪಡಬಾರದು. ಈ ಕಾಯಿಲೆ ಇರುವವರು ಸಾಮಾನ್ಯ ಜನರ ಜತೆ ಹೊಂದಾಣಿಕೆ ಮಾಡಿಕೊಂಡು ಇರಬಹುದು ಎಂದರು.
ಪರಿಸರ ಸಂಸ್ಥೆಯ ಅಧ್ಯಕ್ಷ ಮಂಗಲ ಎಂ.ಯೋಗೇಶ್ ಮಾತನಾಡಿ, ಸಾಮಾಜಿಕ ಪಿಡುಗುಗಳ ನಿರ್ಮೂಲನೆಗೆ ಕಲಾವಿದರ ಮೂಲಕ ಕೋಲಾಟ, ಗೀಗಿಪದ, ಜಾನಪದ ಕಲೆಗಳ ಮೂಲಕ ಜನಸಾಮಾನ್ಯರಿಗೆ ಜನಜಾಗೃತಿ ಮೂಡಿಸಲಾಗುತ್ತಿದೆ. ಬದಲಾದ ರಾಜಕೀಯ ಶೈಕ್ಷಣಿಕ ವಿದ್ಯಮಾನಗಳಲ್ಲಿ ಕಲಾ ಪ್ರಕಾರದ ಮೂಲಕ ಎಚ್‌ಐವಿ ಕಾಯಿಲೆಗಳನ್ನು ತಡೆಗಟ್ಟುವುದರ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ. ದುಶ್ಚಟಗಳಿಗೆ ಬಲಿಯಾಗಿ ಸಾಯುತ್ತಿರುವ ಯುವಕರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಆದ್ದರಿಂದ ಯುವಕರು ಜಾಗೃತಿ ವಹಿಸುವ ಅವಶ್ಯಕತೆ ಇದೆ ಎಂದರು.
ಶಿವಗಂಗಾ ಸಾಂಸ್ಕೃತಿಕ ಕಲಾ ಸಂಘದ ಅಧ್ಯಕ್ಷ ಸಂತೆಕಸಲಗೆರೆ ಬಸವರಾಜು ಮಾತನಾಡಿ, ಏಡ್ಸ್ ಪ್ರಿವೆನ್ಷನ್ ಸೊಸೈಟಿ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಜಿಲ್ಲೆಯ 30 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಲಾತಂಡಗಳ ಮೂಲಕ ಮಾಹಿತಿ ನೀಡಲಾಗುತ್ತಿದೆ. ರೋಗದ ಬಗ್ಗೆ ನಾಚಿಕೆ ಬೇಡ, ಆದರೆ ಎಚ್ಚರಿಕೆ ಹೊಂದಿದ್ದರೆ ರೋಗದಿಂದ ದೂರವಿರಬಹುದು ಎಂದರು.
ಶುಶ್ರೂಷಕರಾದ ಬಸಮ್ಮಣ್ಣಿ, ತುಳಸಿ ಇತರರಿದ್ದರು. ನಂತರ ಸಂತೆ ಕಸಲಗೆರೆ ಶಿವಗಂಗಾ ಸಾಂಸ್ಕೃತಿಕ ಕಲಾವಿದರು ಜಾಗೃತಿ ಗೀತೆಗಳನ್ನು ಹಾಡಿದರು.