

ಚನ್ನರಾಯಪಟ್ಟಣ: ಏಡ್ಸ್ ಮಾರಕ ಕಾಯಿಲೆಯಾಗಿದ್ದು, ಇದು ಹರಡದಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿದಾಗ ಮಾತ್ರ ಈ ರೋಗದಿಂದ ದೂರವಿರಲು ಸಾಧ್ಯ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.
ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಶನಿವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ಪ್ರತಿಬಂಧಕ ಘಟಕ, ಐಸಿಟಿಸಿ ಕೇಂದ್ರ, ತಾಲೂಕು ಆರೋಗ್ಯ ಅಧಿಕಾರಿ ಕಚೇರಿ, ತಾಲೂಕು ಸಾರ್ವಜನಿಕ ಆಸ್ಪತ್ರೆ ಹಾಗೂ ವೈದ್ಯ ಇನ್ಸಿಟ್ಯೂಟ್ ಆಫ್ ನಸಿರ್ಂಗ್ ಮತ್ತು ಪ್ಯಾರಾಮೆಡಿಕಲ್ ಸೈನ್ಸ್ ಕಾಲೇಜು, ಲಯನ್ಸ್ ಕ್ಲಬ್ ಚನ್ನರಾಯಪಟ್ಟಣ ಸಹಯೋಗದಲ್ಲಿ ಆಯೋಜಿಸಿದ್ದ ಜನಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಾರ್ವಜನಿಕರಲ್ಲಿ ಎಚ್‌ಐವಿ ಕುರಿತು ಹೆಚ್ಚು ಅರಿವು ಮೂಡಿಸುವ ಕಾರ್ಯಕ್ರಮ ಆಗಬೇಕು. ಆಗ ಮಾತ್ರ ಅದನ್ನು ನಿಯಂತ್ರಿಸಲು ಸಾಧ್ಯ. ಏಡ್ಸ್ ನಿಯಂತ್ರಿಸದಿದ್ದರೆ ಸಂಕಷ್ಟ ಎದುರಾಗುತ್ತದೆ. ಎಚ್‌ಐವಿ ಸೋಂಕು ಪೀಡಿತರ ಬಗ್ಗೆ ಸಮಾಜದಲ್ಲಿ ಕೀಳು ಭಾವನೆಯಿದೆ. ಅಲ್ಲದೆ, ಅವರನ್ನು ಸಮಾಜದ ಮುಖ್ಯ ವಾಹಿನಿಯಿಂದ ದೂರವಿಡುವ ಪ್ರಯತ್ನ ನಡೆಯುತ್ತಿದೆ. ಎಚ್‌ಐವಿ ಸೋಂಕಿತರನ್ನು ಯಾವುದೇ ಭೇದ ಭಾವವಿಲ್ಲದೆ ಗೌರವಯುತವಾಗಿ ಸಮಾನತೆಯಿಂದ ನೋಡಿಕೊಳ್ಳಬೇಕು. ಎಚ್‌ಐವಿ ಪೀಡಿತರಿಗೂ ಬದುಕುವ ಹಕ್ಕಿದೆ. ಅವರು ಸಮಾಜದಲ್ಲಿ ಎಲ್ಲರಂತೆ ಬದುಕಲು ಅನುವು ಮಾಡಿಕೊಡಬೇಕು ಎಂದರು.
ಯೌವ್ವನದಲ್ಲಿ ಮಾಡುವ ತಪ್ಪಿನಿಂದ ಅನೇಕ ಸಮಸ್ಯೆಗಳು ಎದುರಾಗುತ್ತವೆ. ವಿದ್ಯಾರ್ಥಿಗಳು ಆ ತಪ್ಪುಗಳಿಗೆ ಅವಕಾಶ ನೀಡಬಾರದು. ಸಂಯಮ ಹಾಗೂ ನೈತಿಕ ಮೌಲ್ಯ ಅರಿತು ಸಾಗಿದರೆ ಸಮಸ್ಯೆ ಎದುರಾಗುವುದಿಲ್ಲ. ಯಾರು ಯಾರನ್ನೂ ದೂಷಿಸುವಂತಿಲ್ಲ. ನೆಮ್ಮದಿಯ ಬದುಕಿಗೆ ಇರುವ ಹಕ್ಕುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಜತೆಗೆ ನಮ್ಮ ಕರ್ತವ್ಯ ಅರಿಯಬೇಕು ಎಂದು ತಿಳಿಸಿದರು.
ಸಾರ್ವಜನಿಕ ಆಸ್ಪತ್ರೆಯ ಆಪ್ತ ಸಮಾಲೋಚಕ ಕೆಂಚೇಗೌಡ ಮಾತನಾಡಿ, ಅಸುರಕ್ಷಿತ ಲೈಂಗಿಕತೆ, ಎಚ್‌ಐವಿ ಸೋಂಕು ತಗುಲಿರುವ ವ್ಯಕ್ತಿಗಳಿಂದ ರಕ್ತ ಪಡೆಯುವುದು, ಮಾದಕ ವಸ್ತುಗಳ ಸೇವನೆಯಿಂದ ಏಡ್ಸ್ ಬರುತ್ತದೆ. ಆದ ಕಾರಣ ದೃಢೀಕೃತ ಕೇಂದ್ರಗಳಿಂದ ಮಾತ್ರ ರಕ್ತ ಪಡೆಯಬೇಕು. ರಕ್ತದಾನ ಮಾಡುವಾಗಲೂ ಎಚ್ಚರ ವಹಿಸಬೇಕು. ಸೋಂಕು ಹರಡುವ ವಿಧಾನಗಳ ಬಗ್ಗೆ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.
ಏಡ್ಸ್ ರೋಗದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ನಸಿರ್ಂಗ್ ವಿದ್ಯಾರ್ಥಿನಿಯರು ಏಡ್ಸ್ ರೋಗ ಲಕ್ಷಣ, ಅದರ ಪರಿಣಾಮ, ತಡೆಗಟ್ಟುವಿಕೆ, ಸೋಂಕಿತರ ರಕ್ಷಣೆ, ಅವರೊಂದಿಗೆ ಸಾಮರಸ್ಯದ ಜೀವನ ಬೋಧಿಸುವ ಫಲಕಗಳನ್ನು ಹಿಡಿದು ಸಾರ್ವಜನಿಕರ ಗಮನ ಸೆಳೆದರು. ಮಹಾಮಾರಿ ಏಡ್ಸ್ ರೋಗದ ತಡೆಗೆ ಎಲ್ಲರೂ ಮುಂದಾಗಿ ಎಂಬ ಒಕ್ಕೊರಲ ಸಂದೇಶ ಸಾರಿದರು.
ಕಾರ್ಯಕ್ರಮದಲ್ಲಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ವಿ.ಮಹೇಶ್, ದಂತ ವೈದ್ಯ ಜಮೀರ್, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಅನಿತಾ, ಕ್ಷ ಕಿರಣ ತಂತ್ರಜ್ಞ ಗುರುಮೂರ್ತಿ, ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮೆಡಿಕಲ್ ವೆಂಕಟೇಶ್, ಲಯನ್ಸ್ ಮಂಜುನಾಥ್, ವೈದ್ಯ ಇನ್ಸ್ಟಿಟ್ಯೂಟ್ ಆಫ್ ಪ್ಯಾರಾಮೆಡಿಕಲ್ ಸೈನ್ಸ್ ಆ್ಯಂಡ್ ನಸಿರ್ಂಗ್ ಶಾಲೆಯ ಪ್ರಾಂಶುಪಾಲ ಬಿ.ಎಲ್.ಅರುಣ್ ಕುಮಾರ್ ಇದ್ದರು.