

ಮೈಸೂರು: ಸರ್ಕಾರ ಹಾಗೂ ಸರ್ಕಾರೇತರ ಸಂಘ ಸಂಸ್ಥೆಗಳು ಸಾಕಷ್ಟು ಜಾಗೃತಿ ಮೂಡಿಸಿದರೂ ಎಚ್‌ಐವಿ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ ಎಂದು ‘ವಿಜಯವಾಣಿ’ ಮೈಸೂರು ಆವೃತ್ತಿಯ ಸ್ಥಾನಿಕ ಸಂಪಾದಕ ಎಂ.ಆರ್. ಸತ್ಯನಾರಾಯಣ ಕಳವಳ ವ್ಯಕ್ತಪಡಿಸಿದರು.
ಕುವೆಂಪುನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಾಷ್ಟ್ರೀಯ ಸೇವಾ ಯೋಜನೆ, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ ವತಿಯಿಂದ ಕಾಲೇಜು ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಎಚ್‌ಐವಿ-ಎಡ್ಸ್ ಅರಿವು ಕಾರ್ಯಕ್ರಮ ಹಾಗೂ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.
ಎಚ್‌ಐವಿ ಸೋಂಕು ಯಾವ ರೀತಿ ಹರಡುತ್ತದೆ ಎಂಬ ಅರಿವು ಎಲ್ಲರಿಗೂ ಇದೆ. ಈ ಅರಿವು ಇದ್ದರೂ ಕೆಲವರು ತಪ್ಪುಗಳನ್ನು ಮಾಡು ತ್ತಾರೆ. ಎಚ್‌ಐವಿ ಸೋಂಕು ಗುಣಪಡಿಸಲು ಔಷಧ ಇಲ್ಲದ ಹಿನ್ನೆಲೆಯಲ್ಲಿ ಸೋಂಕು ಬಾರದಂತೆ ನೋಡಿಕೊಳ್ಳುವುದು ಎಲ್ಲರ ಮುಂದಿರುವ ಆಯ್ಕೆಯಾಗಿದೆ ಎಂದು ಹೇಳಿದರು.
ಯುವ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿಯ ಕಡೆಗೆ ಆಕರ್ಷಿತರಾಗುತ್ತಿದ್ದಾರೆ. ಪಾಶ್ಚಿಮಾತ್ಯರ ಉತ್ತಮ ಸಂಸ್ಕೃತಿಯನ್ನು ನಾವು ಸ್ವೀಕಾರ ಮಾಡೋಣ. ಆದರೆ, ಪಾಶ್ಚಿಮಾತ್ಯರ ಸ್ವೇಚ್ಛಾಚಾರದ ಬದುಕು ನಮಗೆ ಬೇಡ. ಸ್ವೇಚ್ಛಾಚಾರದ ಬದುಕಿನಿಂದಲೇ ಯುವ ಸಮುದಾಯ ಎಚ್‌ಐವಿ ಸೋಂಕಿಗೆ ಹೆಚ್ಚಿನ ಪ್ರಮಾಣದಲ್ಲಿ ಗುರಿಯಾಗುತ್ತಿದ್ದಾರೆ ಎಂದು ಹೇಳಿದರು.
ಪ್ರವಾಸೋದ್ಯಮ ಹೆಸರಿನಲ್ಲಿ ಲೈಂಗಿಕ ಚಟುವಟಿಕೆಗಳನ್ನು ಉತ್ತೇಜಿಸುವ ಕಾರ್ಯಗಳು ಕೆಲವು ಕಡೆಗಳಲ್ಲಿ ನಡೆಯುತ್ತಿದ್ದು, ಸರ್ಕಾರ ಇಂತಹ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು. ಲೈಂಗಿಕ ಕಾರ್ಯಕರ್ತೆಯರ ಮೂಲಕ ಹೆಚ್ಚಾಗಿ ಸೋಂಕು ಹರಡುತ್ತಿದೆ. ಹೀಗಾಗಿ ಲೈಂಗಿಕ ಕಾರ್ಯಕರ್ತೆಯರಿಗೆ ಉತ್ತಮ ಬದುಕು ರೂಪಿಸಿಕೊಡಲು ಸರ್ಕಾರ ಕ್ರಮ ವಹಿಸಬೇಕು. ರಾಜ್ಯದಲ್ಲಿ ಮೂರು ವರ್ಷಗಳ ಹಿಂದೆ 2 ಲಕ್ಷ ಲೈಂಗಿಕ ಕಾರ್ಯಕರ್ತೆಯರು ಇದ್ದರು. ಈ ಸಂಖ್ಯೆ ಇದೀಗ ಮತ್ತಷ್ಟು ಹೆಚ್ಚಾಗಿದೆ. ಅವರಿಗೆ ನೀಡಬೇಕಾಗಿದ್ದ ಗೌರವ ಧನವನ್ನೇ ಸರ್ಕಾರ ನೀಡುತ್ತಿಲ್ಲ. ಒಟ್ಟು 10 ಕೋಟಿ ರೂ.ಗೌರವ ಧನವನ್ನು ನೀಡಲು ಸರ್ಕಾರ ಬಾಕಿ ಉಳಿಸಿಕೊಳ್ಳುತ್ತಿದೆ. ಲೈಂಗಿಕ ಕಾರ್ಯಕರ್ತೆಯರು ಈ ವೃತ್ತಿಯಿಂದ ಹೊರ ಬರಲು ಅವರಿಗೆ ಪುನರ್ವಸತಿ ಕಲ್ಪಿಸಬೇಕಾಗಿದ್ದು, ಈ ನಿಟ್ಟಿನಲ್ಲೂ ಸರ್ಕಾರ ಗಮನ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ರಕ್ತದಾನ ಮಾಡುವುದು ಪುಣ್ಯದ ಕೆಲಸವಾಗಿದ್ದು, ಪ್ರತಿಯೊಬ್ಬರು ರಕ್ತದಾನ ಮಾಡಬೇಕು. ರಕ್ತ ನೀಡಿದರೆ ದುರ್ಬಲರಾಗುತ್ತಾರೆ ಎಂಬ ತಪ್ಪು ಕಲ್ಪನೆ ಕೆಲವರಲ್ಲಿ ಇದ್ದು, ಈ ಅಪನಂಬಿಕೆಯನ್ನು ಹೋಗಲಾಡಿಸಬೇಕು ಎಂದರು.
ವೇದಿಕೆಯಲ್ಲಿ ಜೆಎಸ್‌ಎಸ್ ಆಸ್ಪತ್ರೆಯ ಆಪ್ತ ಸಮಾಲೋಚಕಿ ನಂದಿನಿ, ಕೆ.ಆರ್. ಆಸ್ಪತ್ರೆಯ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ಕುಸುಮಾ, ಕಾಲೇಜು ಪ್ರಾಂಶುಪಾಲರಾದ ಡಾ.ಎನ್. ರಾಗಿಣಿ, ಹಿರಿಯ ಪ್ರಾಧ್ಯಾಪಕ ನಾಗೇಶ್, ಐಕ್ಯೂಎಸಿ ಸಂಚಾಲಕ ಪ್ರೊ. ಎಚ್.ಎಲ್. ವಿಷಕಂಠ, ರಾಷ್ಟ್ರೀಯ ಸೇವಾ ಯೋಜನೆ ಸಂಚಾಲಕರಾದ ಪ್ರೊ.ಆರ್.ಎನ್. ಚಂದ್ರಶೇಖರ್, ಡಾ.ಆರ್. ಗುರುಸ್ವಾಮಿ ಹಾಗೂ ಇತರರು ಇದ್ದರು.