

ಮಡಿಕೇರಿ: ೨೦೨೫-೨೬ನೇ ಸಾಲಿನ ಯುವಜನೋತ್ಸವ ಎಚ್.ಐ.ವಿ ಏಡ್ಸ್ ಅರಿವು ಆಂದೋಲನ-ಕಾರ್ಯಕ್ರಮದ ಅಂಗವಾಗಿ ಎಚ್‌ಐವಿ/ಏಡ್ಸ್ ಜಾಗೃತಿಗಾಗಿ ಮ್ಯಾರಾಥಾನ್ ಸ್ಪರ್ಧೆ ನಗರದ ಜನರಲ್ ತಿಮ್ಮಯ್ಯ ಮೈದಾನದಲ್ಲಿ ಶುಕ್ರವಾರ ನಡೆಯಿತು.
ಕೊಡಗು ಜಿಲ್ಲೆಯಲ್ಲಿ ಜಿಲ್ಲಾ ಮಟ್ಟದ ಎಚ್‌ಐವಿ/ ಏಡ್ಸ್ ಅರಿವು ಆಂದೋಲನ ೨೦೨೫-೨೬ರ ಕಾರ್ಯಕ್ರಮದ ಅಂಗವಾಗಿ ಶುಕ್ರವಾರ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ಕೊಡಗು ಶಾಖೆ ಇವರ ಸಹಯೋಗದೊಂದಿಗೆ ಮ್ಯಾರಾಥಾನ್ ಸ್ಪರ್ಧೆ(೫ಕಿ.ಮೀ) ನಡೆಯಿತು.
ಮ್ಯಾರಾಥಾನ್ ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧ ಕಾಲೇಜುಗಳ ಒಟ್ಟು ೭೩ ಕಾಲೇಜು ವಿದ್ಯಾರ್ಥಿ/ ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಹಿರಿಯ ಅಂತರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ್ತಿ ಜ್ಯೋತಿ ಸೋಮಯ್ಯ ತಾತಪಂಡ ಅವರು ಹಸಿರು ನಿಶಾನೆ ಮುಖಾಂತರ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ವಿ.ಟಿ.ವಿಸ್ಮಯಿ ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಸನತ್ ಕುಮಾರ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಆನಂದ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕೊಡಗು ಶಾಖೆಯ ರವೀಂದ್ರ ರೈ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಅರುಣ್ ಕುಮಾರ್ ಮತ್ತು ಅಂಥೋನಿ ಡಿಸೋಜ, ಮಹಾಬಲ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ತರಬೇತುದಾರರಾದ ಬಿಂದ್ಯಾ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಜಿಲ್ಲಾ ಮೇಲ್ವಿಚಾರಕರಾದ ಸುನೀತ ಮುತ್ತಣ್ಣ, ಉಷಾ, ಕಮಲ, ಮತ್ತು ಟೈನಿ ಹಾಗೂ ಡಿಂಪಲ್, ಚೈತನ್ಯ ಆರೈಕೆ ಮತ್ತು ಬೆಂಬಲ ಕೇಂದ್ರ ಮತ್ತು ಅರುಣ್ ಏ.ಆರ್.ಟಿ. ಕೇಂದ್ರದ ಆಪ್ತಸಮಾಲೋಚಕರು ಹಾಗೂ ವಿವಿಧ ಕಾಲೇಜಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.
ಮ್ಯಾರಾಥಾನ್ ಸ್ಪರ್ಧೆಯು ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಪ್ರಾರಂಭವಾಗಿ, ನಗರದ ಪ್ರಮುಖ ಬೀದಿಗಳಾದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಸರ್ಕಲ್, ಜನರಲ್ ತಿಮ್ಮಯ್ಯ ಸರ್ಕಲ್(ಜಿ.ಟಿ ಸರ್ಕಲ್) ಮುಖಾಂತರ ಹಾದು ಜನರಲ್ ತಿಮ್ಮಯ್ಯ ಕ್ರೀಡಾಂಗಣವನ್ನು ತಲುಪಿತು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ವಿಜೇತರಿಗೆ ಪ್ರಮಾಣ ಪತ್ರ ಮತ್ತು ಮೆಡಲ್‌ಗಳನ್ನು ವಿತರಿಸಲಾಯಿತು.
ವಿವಿಧ ಕಾಲೇಜುಗಳಿಂದ ಒಟ್ಟು ೭೩ ವಿದ್ಯಾರ್ಥಿಗಳು ಭಾಗವಹಿಸಿ, ಮ್ಯಾರಥಾನ್‌ನಲ್ಲಿ ಹುಡುಗರ ವಿಭಾಗದಲ್ಲಿ ನಾಪೋಕ್ಲು ಪ್ರಥಮ ದರ್ಜೆ ಕಾಲೇಜಿನ ಗೌತಮ್ ಎಂ.ಎಸ್.(ಪ್ರ), ಸೋಮವಾರಪೇಟೆ ಸರ್ಕಾರಿ ಬಿಟಿಸಿಜಿ ಕಾಲೇಜಿನ ಚೇತನ್(ದ್ವಿ) ಮತ್ತು ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಪಿ.ಸಿ.ಗೌತಮ್(ತೃ) ಸ್ಥಾನ ಪಡೆದು ವಿಜೇತರಾದರು.
ಮ್ಯಾರಥಾನ್ ಹುಡುಗಿಯರ ವಿಭಾಗದಲ್ಲಿ ಸೋಮವಾರಪೇಟೆ ಸಂತ ಜೋಸೆಫ್ ಕಾಲೇಜಿನ ಕೆ.ವೈ.ಐಶ್ವರ್ಯ(ಪ್ರ), ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಯು.ಎನ್.ಅರ್ಚನಾ(ದ್ವಿ) ಹಾಗೂ ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಎ.ಆರ್.ರಶ್ಮಿತಾ(ತೃತೀಯ) ಸ್ಥಾನ ಪಡೆದಿದ್ದಾರೆ.
ಜಿಲ್ಲಾ ಮಟ್ಟದಲ್ಲಿ ಪ್ರಥಮ ಬಹುಮಾನ ಪಡೆದ ವಿದ್ಯಾರ್ಥಿಗಳಾದ, ಎಸ್.ಗೌತಮ್ ಮತ್ತು ಐಶ್ವರ್ಯ ಇವರು ಬೆಂಗಳೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಮ್ಯಾರಥಾನ್ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಆಯೋಜಕರು ತಿಳಿಸಿದರು.