

ಪರಶುರಾಮಪುರ: ಸಮೀಪದ ಪಿ.ಗೌರೀಪುರ, ಪಿ.ಓಬನಹಳ್ಳಿ, ಚಿಕ್ಕಚೆಲ್ಲೂರು, ಪಿಲ್ಲಹಳ್ಳಿ, ಪಿಲ್ಲಹಳ್ಳಿಗೇಟ್, ನಾಗಪ್ಪನಹಳ್ಳಿ, ಎನ್‌ಪಿ ಗೇಟ್, ಸೀಗಲಹಳ್ಳಿ, ಮಲಯನೂರು, ನಿಜವಳ್ಳಿ ಹಾಗೂ ಕೊಲ್ಲಾರಹಟ್ಟಿಗಳಲ್ಲಿ ಮಂಗಳವಾರ ಸಡಗರ-ಸಂಭ್ರಮದಿಂದ ಮಾರಮ್ಮನ ಹಬ್ಬ ಆಚರಿಸಲಾಯಿತು.
ಗ್ರಾಮಗಳ ಜನರು ತಮ್ಮೂರಿನ ಮಾರಿಗುಡಿಗಳನ್ನು ವಿವಿಧ ಹೂವು, ತೆಂಗಿನ ಗರಿ ಕಟ್ಟಿ ವಿದ್ಯುತ್ ದೀಪಗಳಿಂದ ಅಲಂಕಾರಗೊಳಿಸಿದ್ದರು. ದೇವಿಯ ಮೂರ್ತಿಯನ್ನು ಒಡವೆ, ವಸ್ತ್ರಗಳಿಂದ ಸಿಂಗರಿಸಲಾಗಿತ್ತು.
ಹಂಚಿಕಡ್ಡಿ, ಕಣಗಿಲೆ ಹೂ, ವೀಳ್ಯೆದೆಲೆ, ಹೊಂಬಾಳೆ, ತಂಬಿಟ್ಟು, ತೆಂಗಿನಕಾಯಿ, ಬಾಳೆಹಣ್ಣುಗಳಿಂದ ತಂಬಿಟ್ಟಿನಾರತಿ ತಯಾರಿಸಿದ ಮಹಿಳೆಯರು ದೇವರಿಗೆ ಎಡೆ ಅನ್ನ ತಯಾರಿಸಿ, ಬೇವಿನಸೊಪ್ಪು ಕೈಯಲ್ಲಿ ಹಿಡಿದು ದೇವಿಯ ಗುಡಿಗಳತ್ತ ತೆರಳಿದ್ದು ಎಲ್ಲೆಡೆ ಕಂಡುಬಂದಿತು.
ದೇವಿಗೆ ನೂರೊಂದು ಎಡೆ ಹಾಕಿ, ಹಣ್ಣು, ಕಾಯಿ, ಕರ್ಪೂರಗಳನ್ನಿಟ್ಟು ಹಿಟ್ಟಿನಾರತಿ ಮಾಡಿ ಮಹಿಳೆಯರು, ಮಕ್ಕಳು ತಲೆಯ ಮೇಲೆ ಹೊತ್ತು ದೇವಿಯ ಗುಡಿಯನ್ನು ಪ್ರದಕ್ಷಿಣೆ ಹಾಕಿದರು
ಹಬ್ಬದ ಅಂಗವಾಗಿ ತಮ್ಮ ಮನೆಗೆ ಬಂದ ಅತಿಥಿಗಳು, ಗೆಳೆಯರು, ಸಂಬಂಧಿಕರಿಗೆ ವಿಶೇಷ ಅಡುಗೆ ತಯಾರಿಸಿ ಉಣಬಡಿಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಹನ್ನೆರಡು ಕೈವಾಡದವರು, ಗೌಡ, ಗೊಂಚಿಗಾರ, ಯಜಮಾನ, ಪೂಜಾರರು, ಮಹಿಳಾ ಸಂಘದವರು, ರೈತರು, ಮಾರಮ್ಮನ ಭಕ್ತರು ಇದ್ದರು.