

ರಾವಂದೂರು : ರೈತರು ತೆಗೆದುಕೊಂಡ ಸಾಲವನ್ನು ನಿಗದಿತ ಸಮಯಕ್ಕೆ ಪಾವತಿಸಿದಾಗ ಮಾತ್ರ ಸಹಕಾರ ಸಂಘ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಅಧ್ಯಕ್ಷ ಎಚ್.ಎನ್.ಕುಮಾರ್ ತಿಳಿಸಿದ್ದಾರೆ.
ಪಿರಿಯಾಪಟ್ಟಣ ತಾಲೂಕು ರಾವಂದೂರು ಹೋಬಳಿ ಹಿಟ್ನೆ ಹೆಬ್ಬಾಗಿಲು ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದ ಅವರು, ರೈತರಿಗಾಗಿ ಸರ್ಕಾರವು ಹಲವಾರು ಯೋಜನೆಗಳನ್ನು ರೂಪಿಸಲಾಗಿದ್ದು ಇದನ್ನು ಸದುಪಯೋಗಪಡಿಸಿಕೊಂಡು ರೈತರು ಆರ್ಥಿಕವಾಗಿ ಉತ್ತಮ ಬದುಕು ನಡೆಸಬೇಕು ಎಂದು ತಿಳಿಸಿದರು.
ನಿರ್ದೇಶಕ ಹಾಗೂ ಕೆಪಿಸಿಸಿ ಸದಸ್ಯ ಅನಿಲ್ ಕುಮಾರ್ ಮಾತನಾಡಿ, ಸಹಕಾರ ಸಂಘ ಮತ್ತು ರೈತರು ಒಂದೇ ನಾಣ್ಯದ ಮುಖಗಳಿದ್ದಂತೆ. ರೈತರು ತಾವು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಕ್ಕಾಗ ಮಾತ್ರ ಸಂಘ ಅಭಿವೃದ್ಧಿ ಹೊಂದುತ್ತದೆ. ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ ಇಲ್ಲದೆ ಇದ್ದಾಗ ರೈತರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿ ತಾವು ತೆಗೆದುಕೊಂಡ ಸಾಲವನ್ನು ನಿಗದಿತ ಸಮಯಕ್ಕೆ ತಲುಪಿಸಲು ಕಷ್ಟವಾಗುತ್ತದೆ. ಇಂಥಹ ಪರಿಸ್ಥಿತಿಯಲ್ಲೂ ಸಹ ರೈತರು ತೆಗೆದುಕೊಂಡ ಸಾಲವನ್ನು ನಿಗದಿತ ಸಮಯಕ್ಕೆ ಸಹಕಾರ ಸಂಘಕ್ಕೆ ಕಟ್ಟಿದ್ದು ನಮ್ಮ ಸಂಘವು ಜಿಲ್ಲೆಯಲ್ಲಿ ಮಾದರಿ ಸಂಘವಾಗಲು ಸಹಕಾರ ನೀಡಿದ್ದಾರೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಹಕಾರ ಸಂಘ ಅಭಿವೃದ್ಧಿ ಹಿತ ದೃಷ್ಟಿಯಿಂದ ಹೆಚ್ಚು ಠೇವಣಿ ಇಟ್ಟ ರೈತ ಪುಟ್ಟರಾಜ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಪಿ.ಜಯರಾಮ್ ಮಾತನಾಡಿ, ನಮ್ಮ ಸಂಘದಿಂದ ಪ್ರಸ್ತುತ ಸಾಲಿನಲ್ಲಿ 11 ಕೋಟಿ ರೂ.ಗೂ ಹೆಚ್ಚು ಸಾಲ ನೀಡಲಾಗಿದ್ದು, ಈ ಬಾರಿ 3 ಲಕ್ಷ ರೂ.ಗಳಿಗೂ ಹೆಚ್ಚು ನಿವ್ವಳ ಲಾಭ ಬಂದಿದೆ ಎಂದು ತಿಳಿಸಿದರು.
ಉಪಾಧ್ಯಕ್ಷ ಮಹೇಶನಾಯಕ, ಕೆ.ಕೆ.ಹರೀಶ್, ಎಚ್.ಎಂ. ವಿನೋದ್ ಕುಮಾರ್ , ಎಚ್.ಪಿ.ಮಹದೇವ್, ಈರೇಗೌಡ , ಚಂದ್ರ , ಪಾರ್ವತಿ , ಕಾವೇರಮ್ಮ , ಮಹಾದೇವ್, ಎಂಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಮಾದೇವಯ್ಯ ಹಾಗೂ ಸುರೇಶ್, ಎಚ್.ಕೆ.ನಟರಾಜ್, ಸಂತೋಷ್, ಶ್ರೀನಿವಾಸ್ ಸೇರಿದಂತೆ ಮತ್ತಿತರರು ಹಾಜರಿದ್ದರು.