ಹೈಟೆಕ್ ರೇಷ್ಮೆ ಮಾರುಕಟ್ಟೆಗೆ ಸಂಪುಟ ಸಮ್ಮತಿ : ಸಚಿವ ನಾರಾಯಣಗೌಡ ಮಾಹಿತಿ : ₹75 ಕೋಟಿ ವೆಚ್ಚದಲ್ಲಿ ನಿರ್ಮಾಣ

Hightech Silk Market building
Published on

ರಾಮನಗರ: ಚನ್ನಪಟ್ಟಣ ಮತ್ತು ರಾಮನಗರ ನಡುವೆ ಅತ್ಯಾಧುನಿಕ ಹೈಟೆಕ್ ರೇಷ್ಮೆ ಮಾರುಕಟ್ಟೆ ನಿರ್ಮಾಣಕ್ಕೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿದೆ ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ. ನಾರಾಯಣಗೌಡ ತಿಳಿಸಿದ್ದಾರೆ.

ಚನ್ನಪಟ್ಟಣದ ಸರ್ಕಾರಿ ರೇಷ್ಮೆ ತರಬೇತಿ ಸಂಸ್ಥೆಯ 20 ಎಕರೆ ಜಾಗದಲ್ಲಿ 75 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ. ನಬಾರ್ಡ್‌ನಿಂದ ಆರ್ಥಿಕ ನೆರವು ದೊರೆತಿದ್ದು 75 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ ಎಂದರು.

ಮೂರು ತಿಂಗಳೊಳಗೆ ಭೂಮಿಪೂಜೆ: ರಾಮನಗರ ರೇಷ್ಮೆ ಮಾರುಕಟ್ಟೆಗೆ ಹಲವು ಜಿಲ್ಲೆಗಳಿಂದ ರೇಷ್ಮೆಗೂಡು ಬರುತ್ತದೆ. ಆದರೆ, ಮಾರುಕಟ್ಟೆ ಚಿಕ್ಕ ಜಾಗದಲ್ಲಿರುವ ಕಾರಣ ಚನ್ನಪಟ್ಟಣಕ್ಕೆ ಸ್ಥಳಾಂತರಿಸಲಾಗುತ್ತದೆ. ಇದರಿಂದ ರೇಷ್ಮೆ ಬೆಳೆಗಾರರಿಗೆ ಅನುಕೂಲವಾಗಲಿದೆ. ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಮೂರು ತಿಂಗಳೊಳಗೆ ಭೂಮಿಪೂಜೆ ನೆರವೇರಿಸಲಾಗುವುದು ಎಂದು ಡಾ.ನಾರಾಯಣಗೌಡ ತಿಳಿಸಿದರು.

ಹಲವರಿಗೆ ಉದ್ಯೋಗ: ರಾಮನಗರ ಮಾರುಕಟ್ಟೆಗೆ ಪ್ರತಿನಿತ್ಯ 40-50 ಟನ್ ರೇಷ್ಮೆಗೂಡು ಬರುತ್ತಿದ್ದು, ಹೈಟೆಕ್ ಮಾರುಕಟ್ಟೆ ನಿರ್ಮಾಣದ ಬಳಿಕ 100 ಟನ್‌ಗೂ ಅಧಿಕ ರೇಷ್ಮೆಗೂಡು ಬರುವ ನಿರೀಕ್ಷೆ ಇದೆ. ಏಷ್ಯಾದ ಅತೀ ದೊಡ್ಡ ರೇಷ್ಮೆ ಮಾರುಕಟ್ಟೆಯನ್ನು ಮತ್ತಷ್ಟು ಅಭಿವೃದ್ಧಿ ಮಾಡುವುದರಿಂದ ಹಲವರಿಗೆ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಸಚಿವರು ತಿಳಿಸಿದರು,

ರಾಮನಗರದಲ್ಲಿ ಹೈಟೆಕ್ ರೇಷ್ಮೆ ಮಾರುಕಟ್ಟೆ ನಿರ್ಮಾಣಕ್ಕೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರಕಿಸಿಕೊಡುವಲ್ಲಿ ಸಹಕರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಚಿವ ಸಂಪುಟದ ಸಹೋದ್ಯೋಗಿಗಳಿಗೆ ಧನ್ಯವಾದಗಳು. ಡಾ. ನಾರಾಯಣಗೌಡ ಸಚಿವರು, ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net