ಮುಗದದಲ್ಲಿ ಹೈಟೆಕ್ ಗ್ರಂಥಾಲಯ

web 2
Published on

ಮಂಜುನಾಥ ಅಂಗಡಿ ಧಾರವಾಡ
ಗ್ರಾಮೀಣ ಜನರು ಸಾಮಾನ್ಯ ಜ್ಞಾನ ಹೊಂದಬೇಕು, ಅವರಲ್ಲಿ ಓದುವ ಹವ್ಯಾಸ ಬೆಳೆಸಬೇಕು ಎಂಬ ಉದ್ದೇಶದಿಂದ ಸರ್ಕಾರ ಪ್ರತಿ ಗ್ರಾಮ ಪಂಚಾಯಿತಿಗೊಂದು ಗ್ರಂಥಾಲಯ ಸ್ಥಾಪಿಸಿದೆ. ಧಾರವಾಡ ಜಿಲ್ಲಾ ಪಂಚಾಯಿತಿಯಿಂದ ರಾಜ್ಯಕ್ಕೆ ಮಾದರಿಯಾಗುವಂಥ ಗ್ರಂಥಾಲಯವೊಂದನ್ನು ತಾಲೂಕಿನ ಮುಗದ ಗ್ರಾಮದಲ್ಲಿ ನಿರ್ಮಿಸಲಾಗುತ್ತಿದೆ. ಈ ಕಾಮಗಾರಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಮೆಚ್ಚುಗೆಗೆ ಪಾತ್ರವಾಗಿದ್ದು, ಹೆಚ್ಚುವರಿ ಅನುದಾನ ನೀಡುವ ಭರವಸೆ ನೀಡಿದ್ದಾರೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಲಘಟಗಿಯ ಹಿಂದಿನ ಶಾಸಕರು ಹೈಟೆಕ್ ಗ್ರಂಥಾಲಯ ಸ್ಥಾಪನೆಗೆ ತಮ್ಮ ಕ್ಷೇತ್ರದ ಮುಗದ ಗ್ರಾಮವನ್ನು ಗುರುತಿಸಿದ್ದರು. ಗ್ರಾಮದಲ್ಲಿ ಗ್ರಾ.ಪಂ. ಅಧೀನದ ವಿಶಾಲ ಜಾಗವನ್ನು ಗುರುತಿಸಿ ಕ್ರಿಯಾಯೋಜನೆ ರೂಪಿಸಲಾಗಿತ್ತು. ಪಂಚಾಯತ್ ಇಂಜಿನಿಯರಿಂಗ್ ಇಲಾಖೆಯಿಂದ ವಿಧಾನಸಭೆ ಚುನಾವಣೆಗೂ ಮೊದಲು ಸುಸಜ್ಜಿತ ಗ್ರಂಥಾಲಯ ಸ್ಥಾಪನೆಗೆ ಹಸಿರು ನಿಶಾನೆ ನೀಡಲಾಗಿತ್ತು.
ಜಿ+ 1 ಮಾದರಿಯ ಕಟ್ಟಡ ನಿರ್ಮಾಣ ಕಾಮಗಾರಿ ಇತ್ತೀಚೆಗೆ ಆರಂಭಗೊಂಡಿದೆ. ಜಿ.ಪಂ. ಹಾಗೂ ತಾ.ಪಂ.ನಿಂದ ತಲಾ 10 ಲಕ್ಷ ರೂ. ಹಾಗೂ ಇತರ ಅನುದಾನ ಸೇರಿ 60 ಲಕ್ಷ ರೂ. ವೆಚ್ಚದಲ್ಲಿ ಗ್ರಂಥಾಲಯ ನಿರ್ಮಾಣಗೊಳ್ಳಲಿದೆ. ತಮ್ಮ ಕ್ಷೇತ್ರ ವ್ಯಾಪ್ತಿಯ ಗ್ರಾಮದಲ್ಲಿ ಡಿಜಿಟಲ್ ಗ್ರಂಥಾಲಯ ನಿರ್ಮಾಣದ ವಿಷಯ ತಿಳಿದ ಸಚಿವ ಸಂತೋಷ ಲಾಡ್, ಹೆಚ್ಚುವರಿ ಅನುದಾನ ನೀಡುವ ಭರವಸೆ ನೀಡಿದ್ದಾರೆ. ನೆಲಮಹಡಿಯಲ್ಲಿ ಸ್ವಾಗತಕಾರರು, ಓದುವ ಕೊಠಡಿ, ನಿಯತಕಾಲಿಕೆ ವಿಭಾಗ, ಸೀ- ಪುರುಷರಿಗೆ ಶೌಚಗೃಹ ಇರಲಿವೆ. ಮೊದಲ ಮಹಡಿಯಲ್ಲಿ ಆಕರ ಗ್ರಂಥಗಳ ವಿಭಾಗ, ಇ- ಲೈಬ್ರರಿ, ಸ್ಟೋರ್ ರೂಂ, ಶೌಚಗೃಹಗಳು ಇರಲಿವೆ.
ಜಿಲ್ಲೆಯ ಗ್ರಾ.ಪಂ.ಗಳ ಅಧೀನದಲ್ಲಿ ಸದ್ಯ 117 ಗ್ರಂಥಾಲಯಗಳಿವೆ. ಜಿ.ಪಂ., ತಾ.ಪಂ.ಗಳಲ್ಲಿ ಇದ್ದ ಅನುದಾನವನ್ನು ವಿನಿಯೋಗಿಸಲು ಈ ಯೋಜನೆ ರೂಪಿಸಲಾಗಿದೆ. ಗ್ರಂಥಾಲಯ ಸ್ಥಾಪನೆಯಿಂದ ಮಕ್ಕಳು, ಮಹಿಳೆಯರು, ಹಿರಿಯರಲ್ಲಿ ದಿನಪತ್ರಿಕೆ, ನಿಯತಕಾಲಿಕೆ, ಕತೆ, ಕಾದಂಬರಿಗಳ ಓದುವ ಹವ್ಯಾಸ ಹೆಚ್ಚಲಿದೆ. ವಿಶೇಷವಾಗಿ ವಿದ್ಯಾರ್ಥಿಗಳು ಮತ್ತು ಪದವೀಧರರು ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಇದು ನೆರವಾಗಲಿದೆ. ಇನ್ನೊಂದು ವರ್ಷದಲ್ಲಿ ಹೈಟೆಕ್ ಗ್ರಂಥಾಲಯದ ನಿರ್ಮಾಣ ಕಾಮಗಾರಿ ಮುಗಿಯಲಿದ್ದು, ಇದು ರಾಜ್ಯಕ್ಕೆ ಮಾದರಿ ಯೋಜನೆಯಾಗುವ ನಿರೀಕ್ಷೆ ಮೂಡಿಸಿದೆ.

ಕಲಘಟಗಿ ಕ್ಷೇತ್ರ ವ್ಯಾಪ್ತಿಯ ಮುಗದ ಗ್ರಾಮದಲ್ಲಿ ಹೈಟೆಕ್ ಗ್ರಂಥಾಲಯ ನಿರ್ಮಾಣ ಕಾಮಗಾರಿಯ ಮಾಹಿತಿ ಬಂತು. 60 ಲಕ್ಷ ರೂ. ವೆಚ್ಚದಲ್ಲಿ ಗ್ರಾಮ ಪಂಚಾಯಿತಿಯ ಗ್ರಂಥಾಲಯ ನಿರ್ಮಾಣವಾಗುತ್ತಿರುವುದು ಹೆಮ್ಮೆಯ ಸಂಗತಿ. ಅದಕ್ಕೆ ಹೆಚ್ಚುವರಿ ಅನುದಾನ ನೀಡಲು ಸಿದ್ಧವಿದ್ದು, ಮಾದರಿಯಾಗುವಂಥ ಗ್ರಂಥಾಲಯ ನಿರ್ಮಾಣಕ್ಕೆ ಸೂಚಿಸಲಾಗಿದೆ.
- ಸಂತೋಷ ಲಾಡ್, ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net