'ಹಿಟ್ ಆ್ಯಂಡ್ ರನ್' ಅವೈಜ್ಞಾನಿಕ ಕಾನೂನು ಸರಿ ಇಲ್ಲ: ಮೈಸೂರು ಜಿಲ್ಲಾ ಲಾರಿ ಮಾಲೀಕರ ಒಕ್ಕೂಟದ ಅಧ್ಯಕ್ಷ ಬಿ.ಕೋದಂಡರಾಮು ಆಕ್ಷೇಪ

Published on

ಮೈಸೂರು: ಯಾವುದೇ ಅಪಘಾತ ಸಂಭವಿಸಿದಾಗ ಚಾಲಕ ಸ್ಥಳದಲ್ಲಿ ವಾಹನ ನಿಲ್ಲಿಸದೆ ಹೋದರೆ (ಹಿಟ್ ಆ್ಯಂಡ್ ರನ್) ಏಳರಿಂದ ಹತ್ತು ವರ್ಷ ಕಠಿಣ ಕಾರಾಗೃಹ ಶಿಕ್ಷೆ, ಹತ್ತು ಲಕ್ಷ ರೂ.ವರೆಗೆ ದಂಡ ಹಾಕಬೇಕು ಎನ್ನುವ ಕೇಂದ್ರ ಸರ್ಕಾರ ಕ್ರಮ ಸರಿಯಲ್ಲ ಎಂದು ಮೈಸೂರು ಜಿಲ್ಲಾ ಲಾರಿ ಮಾಲೀಕರ ಒಕ್ಕೂಟದ ಅಧ್ಯಕ್ಷ ಬಿ.ಕೋದಂಡರಾಮು ಆಕ್ಷೇಪ ವ್ಯಕ್ತಪಡಿಸಿದರು.
ಯಾರೂ ಉದ್ದೇಶಪೂರ್ವಕವಾಗಿ ಅಪಘಾತ ಮಾಡುವುದಿಲ್ಲ. ಚಾಲಕರು ಅಥವಾ ಎದುರಿಗೆ ಬರುವವರ ತಪ್ಪಿನಿಂದಲೂ ಅಪಘಾತ ಸಂಭವಿಸಿದ ವೇಳೆ ಜನತೆ ಆಕ್ರೋಶ ಭರಿತವಾಗುವುದು ಸಾಮಾನ್ಯ. ಇಂತಹ ಸಮಯದಲ್ಲಿ ಚಾಲಕ ಸ್ಥಳದಲ್ಲಿ ಸಿಕ್ಕರೆ ಅವರ ಮೇಲೆ ಹಲ್ಲೆ ನಡೆಸುವ ಸಂಭವವೂ ಇರುತ್ತದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಹೀಗಾಗಿ ಅಲ್ಲಿಂದ ಚಾಲಕರು ಅನಿವಾರ್ಯವಾಗಿ ದೂರವಾಗಿ ಠಾಣೆಗೆ ಹೋಗಬೇಕಾಗುತ್ತದೆ. ಇದನ್ನು ಹಿಟ್ ಆ್ಯಂಡ್ ರನ್ ಪ್ರಕರಣ ಎಂದು ಕರೆಯುವುದು ಸರಿಯಲ್ಲ. ಇದರ ಬದಲು ರಸ್ತೆಗಳ ಅವ್ಯವಸ್ಥೆ ಮೊದಲಾದವನ್ನು ಸರಿಪಡಿಸಲು ಕೇಂದ್ರ ಕ್ರಮ ಕೈಗೊಳ್ಳಲಿ. ಇಂತಹ ಕಾನೂನು ಮಂಡಿಸಲು ಮುಂದಾಗಿರುವ ಕೇಂದ್ರ ಸಚಿವ ಅಮಿತ್ ಷಾ ಹೇಳಿಕೆ ಲಾರಿ ಮಾಲೀಕರು, ಚಾಲಕರಿಗೆ ಆಘಾತವುಂಟು ಮಾಡುವಂತಿದೆ. ಹೀಗಾಗಿ ಪರಿಸ್ಥಿತಿ ಅರಿತು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಕೇಂದ್ರ ಸರ್ಕಾರ ಒಂದು ವೇಳೆ ಈ ರೀತಿಯ ಕಾನೂನು ಜಾರಿಗೊಳಿಸಿದರೆ ದೇಶಾದ್ಯಂತ ಸಾರಿಗೆ ಉದ್ಯಮಕ್ಕೇ ಹಿನ್ನಡೆಯಾಗಲಿದೆ. ಆದ್ದರಿಂದ ಇಂತಹ ಅವೈಜ್ಞಾನಿಕ ನಿರ್ಧಾರ ಕೈ ಬಿಡಬೇಕು. ಒಂದು ವೇಳೆ ಈ ಕುರಿತ ವಿಧೇಯಕವನ್ನು ಕೈಬಿಡದಿದ್ದಲ್ಲಿ ಲಾರಿ ಮಾಲೀಕರು ಸರಕು ಸಾಗಣೆ ಕೈಬಿಟ್ಟು, ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಲಾರಿ ಮಾಲೀಕರು, ಚಾಲಕರ ಸಂಘಗಳು, ಆಟೋ ಚಾಲಕರ ಸಂಘದ ಪದಾಧಿಕಾರಿಗಳಾದ ಶ್ರೀನಿವಾಸ ಮಿತ್ರ, ಎನ್.ರಾಜೇಂದ್ರ, ಅಬ್ದುಲ್ ಖಾದರ್ ಶಾಹೀದ್, ಕೆ.ಎಂ. ನಾಗಚಂದ್ರ, ಮೊಹಮ್ಮದ್ ಅಸ್ಗರ್ ಖಾನ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net