

ಜಯಪುರ: ಹೇರೂರು ಗ್ರಾಮ ಪಂಚಾಯಿತಿ ಶಾಂತಿಪುರದಲ್ಲಿ ಶನಿವಾರ ರಾತ್ರಿ ರಸ್ತೆ ಬದಿ ನಿಂತಿದ್ದವರಿಗೆ ಕಾರು ಡಿಕ್ಕಿ ಹೊಡೆದಿದ್ದು, ಓರ್ವನ ಸ್ಥಿತಿ ಗಂಭೀರವಾಗಿದ್ದು, ಇನ್ನಿಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಕಾರು ಚಾಲಕ ಪರಾರಿಯಾಗಿದ್ದಾನೆ.
ಉಡುಪಿಯ ರಾಘವೇಂದ್ರ, ಸಂದೇಶ ಹಾಗೂ ದೂಬ್ಳದ ರಕ್ಷಿತಾ ಗಾಯಗೊಂಡವರು. ಶಾಂತಿಪುರದ ಎಲೆಮಡಿಲಿನ ಜಯಪುರ-ಬಾಳೆಹೊನ್ನೂರು ರಸ್ತೆಯಲ್ಲಿ ಅಪಘಾತ ನಡೆದಿದೆ. ಶನಿವಾರ ರಾತ್ರಿ ಸಂಬಂಧಿಕರ ಮನೆಯಲ್ಲಿ ನಡೆದ ಪೂಜೆಯಲ್ಲಿ ಪಾಲ್ಗೊಂಡು ರಾತ್ರಿ 12.45ರ ಹೊತ್ತಿಗೆ ಮನೆಗೆ ತೆರಳುತ್ತಿದ್ದ ಮೂವರಿಗೆ ಅಪರಿಚಿತ ಕಾರು ಡಿಕ್ಕಿಹೊಡೆದಿದೆ. ಚಾಲಕ ಕಾರನ್ನು ನಿಲ್ಲಿಸದೆ ಪರಾರಿಯಾಗಿದ್ದಾನೆ. ಗಾಯಾಳುಗಳನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತಲೆಗೆ ಗಾಯವಾಗಿರುವ ರಾಘವೇಂದ್ರರ ಸ್ಥಿತಿ ಗಂಭೀರವಾಗಿದೆ. ಜಯಪುರ ಪಿಎಸ್‌ಐ ಅಂಬರೀಶ್ ಸ್ಥಳಕ್ಕೆ ಭೇಟಿ ನೀಡಿ, ಸಿಸಿ ಕ್ಯಾಮರಾಗಳ ಪರಿಶೀಲನೆ ನಡೆಸಿದ್ದಾರೆ