

ಮೈಸೂರು:
ರಾಜಕೀಯ ಹಿನ್ನೆಲೆಯಿಂದ ಚರಿತ್ರೆಯನ್ನು ನೋಡದೆ ವಿಶಾಲ ದೃಷ್ಟಿಕೋನದಿಂದ ಅಧಿಕೃತ ದಾಖಲೆಗಳ ಆಧಾರದ ಮೇಲೆ ರಚನೆ ಮಾಡಬೇಕು ಎಂದು ಬೆಂಗಳೂರಿನ ಡಿ.ಎಸ್.ಅಚ್ಯುತರಾವ್ ದತ್ತಿ ಸಂಚಾಲಕ ಡಿ.ಎ.ಪ್ರಸನ್ನ ಅಭಿಪ್ರಾಯಪಟ್ಟರು.
ಮಹಾರಾಜ ಕಾಲೇಜಿನ ಇತಿಹಾಸ ವಿಭಾಗದಿಂದ ಮಹಾರಾಜ ಕಾಲೇಜು ಜೂನಿಯರ್ ಬಿಎ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಡಿ.ಎಸ್.ಅಚ್ಯುತರಾವ್ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದಾಗ ರಾಜಪ್ರಭುತ್ವ ಮತ್ತು ಆಗ ತಾನೇ ಅಸ್ತಿತ್ವಕ್ಕೆ ಬಂದ ರಾಜಕೀಯ ಪಕ್ಷಗಳ ನಡುವೆ ಒಂದು ಬಗೆಯ ಸಂಘರ್ಷ ಆರಂಭವಾಯಿತು. ಅಂದಿನ ಜನತೆ ಉತ್ತಮ ಕೆಲಸ ಕಾರ್ಯಗಳನ್ನು ಮಾಡಿದ ರಾಜರ ಮೇಲೆ ಗೌರವ, ನಂಬಿಕೆ ಇಟ್ಟಿಕೊಂಡಿದ್ದರು. ಇಂತಹ ಸಂದರ್ಭದಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದ ರಾಜಕೀಯ ಪಕ್ಷಗಳು ಬೇಗ ಪ್ರವರ್ಧಮಾನಕ್ಕೆ ಬರುವ ಉದ್ದೇಶದಿಂದ ರಾಜರು ಮಾಡಿದ ಕೆಲಸ ಕಾರ್ಯಗಳನ್ನು ಮುಂದುವರಿಸಲಿಲ್ಲ ಎಂದು ವಿಶ್ಲೇಷಿಸಿದರು.
ಮರೆತುಹೋದ ಚರಿತ್ರೆಯ ಸಂಗತಿಗಳನ್ನು ಜನರಿಗೆ ತಿಳಿಸುವ ಕೆಲಸ ಕಾರ್ಯವನ್ನು ಚರಿತ್ರಾಕಾರರು ಮಾಡಬೇಕು. ರಾಜಕೀಯ ಹಿನ್ನೆಲೆಯಿಂದ ಮಾತ್ರ ಇತಿಹಾಸವನ್ನು ಗ್ರಹಿಸದೆ ಸಾಮಾಜಿಕ, ಸಾಂಸ್ಕೃತಿಕ ಹಿನ್ನೆಲೆಯನ್ನು ಒಳಗೊಂಡು ಬಹು ಆಯಾಮದಲ್ಲಿ ಚರಿತ್ರೆ ಅನ್ನು ಕಟ್ಟಬೇಕು ಎಂದು ತಿಳಿಸಿದರು.
ಇತಿಹಾಸ ಮತ್ತು ಭೂಗೋಳಶಾಸ್ತ್ರ ವಿಷಯದ ಮೇಲೆ ಇತ್ತೀಚಿನ ವಿದ್ಯಾರ್ಥಿಗಳಿಗೆ ಉದಾಸೀನ ಭಾವನೆ ಇದ್ದು, ವಿಜ್ಞಾನ ವಿಷಯಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಆದ್ದರಿಂದ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಇತಿಹಾಸದ ಮೇಲಿನ ಆಸಕ್ತಿ ಬೆಳೆಸುವ ಕೆಲಸ ಕಾರ್ಯಗಳು ನಡೆಯಬೇಕು ಎಂದರು.
ಪಾಂಡಿಚೇರಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಪ್ರೊ.ಕೆ.ರಾಜನ್ ಮಾತನಾಡಿ, ಚರಿತ್ರೆಯನ್ನು ಕಟ್ಟಲು ಅಧಿಕೃತವಾದ ಪ್ರಾಥಮಿಕ ಸಂಪನ್ಮೂಲಗಳು ಅತ್ಯಂತ ಮಹತ್ವದ್ದಾಗಿರುತ್ತವೆ ಎಂದು ಸಲಹೆ ನೀಡಿದರು.
ಸಾಹಿತ್ಯ, ಶಾಸನಗಳು, ನಾಣ್ಯಗಳು, ದೇವಾಲಯಗಳು, ವಿದೇಶಿ ದಾಖಲೆ ಇತ್ಯಾದಿಗಳು ಚರಿತ್ರೆಯ ಮೂಲ ಆಕರಗಳಾಗಿರುತ್ತವೆ. ಪ್ರಾಥಮಿಕ ದಾಖಲೆಯಾಗಿ ದೊರೆತ ಎಲ್ಲ ಸಂಪನ್ಮೂಲಗಳು, ಅಂಕಿ-ಅಂಶಗಳು ಮತ್ತು ಎಲ್ಲ ರೀತಿಯ ಮಾಹಿತಿಯನ್ನು ವೈಜ್ಞಾನಿಕ ಪರಿಶೀಲಿಸಿ ಚರಿತ್ರೆ ರಚನೆಗೆ ಬಳಸಿಕೊಳ್ಳಬೇಕು ಎಂದು ಹೇಳಿದರು.
ಮಹಾರಾಜ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಚ್.ಸಿ.ದೇವರಾಜೇಗೌಡ ಮಾತನಾಡಿ, ವಿಜ್ಞಾನ, ವ್ಯವಹಾರ ಅಧ್ಯಯನ ಸೇರಿದಂತೆ ಯಾವ ವಿಷಯವೂ ಚರಿತ್ರೆಯಿಂದ ಹೊರತಾಗಿಲ್ಲ. ಎಲ್ಲ ವಿಷಯಗಳ ಹಿಂದೆ ಒಂದು ಇತಿಹಾಸ ಇದ್ದೇ ಇರುತ್ತದೆ. ಇತಿಹಾಸವಿಲ್ಲದ ಯಾವುದೇ ವಿಷಯವನ್ನು ಕಾಣಲು ಸಾಧ್ಯವಿಲ್ಲ ಎಂದರು.
ಮಹಾರಾಜ ಕಾಲೇಜಿನ ಆಡಳಿತಾಧಿಕಾರಿ ಪ್ರೊ.ತಿಮ್ಮಯ್ಯ, ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ.ರಾಚಯ್ಯ, ಪ್ರಾಧ್ಯಾಪಕ ಪ್ರೊ.ಆರ್.ಡಿ.ಪವಮಾನ ಇತರರು ಇದ್ದರು.