ಜಿಲ್ಲೆಯಲ್ಲಿ ವಿಷ್ಣು ತಪಸ್ಸುಗೈದ ಗ್ರಾಮ ಇದು: ಆಯುಧಗಳಿಂದ ಸಾವು ಬಾರದಂತೆ ವರ ಪಡೆದಿದ್ದ ಕ್ಲೇಶ ರಾಕ್ಷಸನ ಸಂಹಾರ ಮಾಡಿದ ಇತಿಹಾಸ

History of Devarahalli village mandya
Published on

ಎಂ.ಕೆ.ಉಮೇಶ್ ನಾಗಮಂಗಲ
ಯಾವುದೇ ಆಯುಧಗಳಿಂದ ತನಗೆ ಸಾವು ಬಾರದಂತೆ ದೇವಾನುದೇವತೆಗಳಿಂದ ವರ ಪಡೆದಿದ್ದ ಕ್ಷೇಶ ರಾಕ್ಷಸನನ್ನು ಸಂಹರಿಸಲು ವಿಷ್ಣು ತಪಸ್ಸು ಮಾಡಿ, ಕೂದಲಿನ ಮೂಲಕ ಕ್ಲೇಶ ರಾಕ್ಷಸನನ್ನು ಕೊಂದ ಸ್ಥಳ ದೇವರಹಳ್ಳಿ ಎನ್ನಲಾಗುತ್ತದೆ. ಇದರ ಕುರುಹಾಗಿ ಇಲ್ಲಿ ತಪಸಿರಾಯಸ್ವಾಮಿ ದೇವಾಲಯವಿದೆ.
ತಾಲೂಕಿನ ದೇವಲಾಪುರ ಹೋಬಳಿಯ ದೇವರಹಳ್ಳಿ ವಿಷ್ಣು ತಪಸ್ಸು ಮಾಡಿದ ಸ್ಥಳವಾಗಿದ್ದು, ಈ ಜಾಗದಲ್ಲಿ ದೇವಾನುದೇವತೆಗಳು ನೆಲೆಸಿದ್ದರಿಂದ ದೇವರಹಳ್ಳಿ ಎಂದು ಕೂಡ ಕರೆಯಲಾಗುತ್ತದೆ ಎಂದು ಗ್ರಾಮದ ಹಿರಿಯರು ಹೇಳುತ್ತಾರೆ. ಈ ಗ್ರಾಮದಲ್ಲಿ ವಿಷ್ಣು ತಪಸ್ಸು ಮಾಡಿದ ಜಾಗವಿದ್ದು, ಇಲ್ಲಿ ಪುರಾತನ ತಪಸಿರಾಯಸ್ವಾಮಿ ದೇವಾಲಯವಿದೆ. ಶಾಸನಗಳ ಪ್ರಕಾರ ಈ ಗ್ರಾಮ ವಿಜಯನಗರ ಸಾಮ್ರಾಜ್ಯದ ಅಚ್ಯುತರಾಯನ ಆಳ್ವಿಕೆಗೆ ಒಳಪಟ್ಟಿದ್ದು, ಅವರಗೆರೆಯ ಗಿರಿಯಣ್ಣ ನಾಯಕನ ಅಧೀನದಲ್ಲಿತ್ತು. ಗಿರಿಯಣ್ಣನಾಯಕನು ತಪಸೀರಾಯ ದೇಗುಲದ ಭಂಡಾರಕನಾಗಿದ್ದನು. ಮಹಾನಾಯಕಾಚಾರ್ಯ ಮತ್ತು ಬಯಲಹುಲಿ ಎಂಬ ಬಿರುದುಗಳನ್ನು ಪಡೆದಿದ್ದನು ಎಂದು ಐತಿಹ್ಯ ವಿವರಿಸುತ್ತದೆ.
ಗ್ರಾಮದಲ್ಲಿರುವ ದೇವಾಲಯದ ಸುತ್ತ ಕೋಟೆಯಿರುವುದರ ಕುರುಹುಗಳಿವೆ. ದೇವಾಲಯದ ಮಹದ್ವಾರದಲ್ಲಿ ಒಂದು ಶಾಸನವಿದ್ದು, ಈ ದೇವಾಲಯದ ಐತಿಹ್ಯವನ್ನು ಅದರಲ್ಲಿ ತಿಳಿಯಬಹುದಾಗಿದೆ. ದೇವಾಲಯವು ವಿಜಯನಗರ ವಾಸ್ತುಶಿಲ್ಪದ ರಚನೆಯಲ್ಲಿದ್ದು, ವಿಜಯನಗರ ಅರಸರ ಕಾಲದಲ್ಲಿ ದೇವಾಲಯ ನಿರ್ಮಾಣವಾಗಿದೆ ಎಂಬುದು ಇತಿಹಾಸ ತಜ್ಞ ಕಲೀಂಉಲ್ಲಾ ಅವರ ವಿವರಣೆ. ದೇವರಹಳ್ಳಿಯ ತಪಸೀರಾಯಸ್ವಾಮಿ ದೇವಾಲಯದ ಪಕ್ಕದಲ್ಲಿ ಅಚ್ಯುತರಾಯನ ಅರಮನೆ ಇತ್ತು. ಗ್ರಾಮದ ಸುತ್ತಲಿನ 34 ಗ್ರಾಮಗಳು ಆತನ ಆಳ್ವಿಕೆಗೆ ಒಳಪಟ್ಟಿದ್ದವು ಎಂದು ಹೇಳಲಾಗುತ್ತದೆ.

ವಿಜಯನಗರ ಹಾಗೂ ಚೋಳರಾಜನ ಕಾಲದಲ್ಲಿ ಅರಮನೆ ನಿರ್ಮಿಸಿಕೊಂಡು ಆಳ್ವಿಕೆ ನಡೆಸಿರುವ ಈ ಗ್ರಾಮ ಪ್ರಸ್ತುತ ಕೇವಲ 40 ಮನೆಗಳಿರುವ ಕುಗ್ರಾಮವಾಗಿಯೇ ಉಳಿದಿದೆ. ಈ ಗ್ರಾಮದಲ್ಲಿ ಒಕ್ಕಲಿಗ, ವಿಶ್ವಕರ್ಮ, ಪರಿಶಿಷ್ಟ, ಕುಂಬಾರ, ಮಡಿವಾಳ ಹಾಗೂ ಬ್ರಾಹ್ಮಣ ಸಮುದಾಯದವರು ವಾಸಿಸುತ್ತಿದ್ದಾರೆ. ಎಲ್ಲ ವರ್ಗದವರು ಯಾವುದೇ ಗೊಂದಲಗಳಿಲ್ಲದೆ ನೆಮ್ಮದಿಯಿಂದ ಅನ್ಯೋನ್ಯವಾಗಿ ವಾಸಿಸುತ್ತಿದ್ದಾರೆ. ಇದಕ್ಕೆ ಈ ಗ್ರಾಮದ ಹಿನ್ನೆಲೆಯೇ ಕಾರಣ ಎನ್ನುತ್ತಾರೆ ಗ್ರಾಮಸ್ಥರು.
ಶಾಪವಿಮೋಚನೆಗಾಗಿ ದೇವಾಲಯ ನಿರ್ಮಾಣ: ಚೋಳರಾಜನು ತಾನು ಶಾಪಗ್ರಸ್ತನಾಗಿದ್ದರಿಂದ ಆ ಶಾಪವಿಮೋಚನೆಗಾಗಿ ಕೇಶವ ದೇವಾಲಯವನ್ನು ನಿರ್ಮಿಸಿದ್ದಾನೆ. ಈ ಕೇಶವ ದೇವಾಲಯವನ್ನೇ ಪ್ರಸ್ತುತ ತಪಸೀರಾಯಸ್ವಾಮಿ ದೇವಾಲಯವೆಂದು ಕರೆಯಲಾಗುತ್ತಿದೆ ಎನ್ನುವುದು ಗ್ರಾಮದ ಕೆಲವು ಹಿರಿಯರ ವಿವರಣೆ. ದೇವಾಲಯವನ್ನು ಚೋಳರಾಜನು ನಿರ್ಮಿಸಿದ್ದು, ಆದರೆ ದೇವಾಲಯದ ಹೊರಾಂಗಣವನ್ನು ವಿಜಯನಗರದ ಆಳ್ವಿಕೆಯ ಕಾಲದಲ್ಲಿ ನಿರ್ಮಿಸಲಾಗಿದೆ ಎನ್ನಲಾಗುತ್ತದೆ.
ಪ್ರತಿದಿನ ಪೂಜೆ: ತಪಸೀರಾಯಸ್ವಾಮಿ ದೇವಾಲಯದಲ್ಲಿ ಪ್ರತಿದಿನ ಪೂಜೆ ಸಲ್ಲಿಕೆಯಾಗುತ್ತದೆ. ಪ್ರತಿವರ್ಷ ಸಂಕ್ರಾಂತಿ ಹಬ್ಬದ ಹಿಂದಿನ ದಿನ ಏಳು ದಿನಗಳ ಕಾಲ ಜಾತ್ರೋತ್ಸವ ನಡೆಯುತ್ತದೆ. ಜಾತ್ರಾಮಹೋತ್ಸವದ ಜತೆಗೆ, ರಥೋತ್ಸವ ಕೂಡ ಜರುಗುತ್ತದೆ. ಪ್ರತಿ ತಿಂಗಳು ವಿಶೇಷ ದಿನಗಳಂದು ದೇವರ ಉತ್ಸವ ನಡೆಯುತ್ತದೆ.
ಸುರಂಗ ಮಾರ್ಗ: ಚೋಳರಾಜ ನಿರ್ಮಿಸಿರುವ ತಪಸೀರಾಯಸ್ವಾಮಿ ದೇವಾಲಯ ಮುಂಭಾಗದ ಬಲ ಭಾಗದಲ್ಲಿ ನೆಲಮಾಳಿಗೆಯಿದೆ. ನೆಲಮಾಳಿಗೆಯಲ್ಲಿ ಸುರಂಗ ಮಾರ್ಗವಿರುವುದು ಕೂಡ ಅಚ್ಚರಿಗಳಲ್ಲಿ ಒಂದು ಎನ್ನುತ್ತಾರೆ ಗ್ರಾಮಸ್ಥರು. ಈ ಸುರಂಗ ಮಾರ್ಗ ಸಂಪರ್ಕ ಎಲ್ಲಿಯವರೆಗೆ ಇದೆ ಎಂಬುದು ಇದುವರೆಗೂ ಯಾರಿಗೂ ತಿಳಿದಿಲ್ಲ. ನೆಲಮಾಳಿಗೆಯಲ್ಲಿರುವ ಸುರಂಗ ಮಾರ್ಗಕ್ಕೆ ಕಾವಲುಗಾರನಾಗಿ ಆಂಜನೇಯಸ್ವಾಮಿ ದೇವರನ್ನು ದ್ವಾರದಲ್ಲಿ ಪ್ರತಿಷ್ಠಾಪಿಸಲಾಗಿದೆ.

ಕಲ್ಲಿನ ಕಂಬ: ದೇವಾಲಯದಲ್ಲಿ ಒಟ್ಟು 232 ಕಂಬಗಳಿದ್ದು, ಈ ಪೈಕಿ ಒಂದು ಕಲ್ಲಿನ ಕಂಬ ಪವಾಡಕ್ಕೆ ಹೆಸರುವಾಸಿಯಾಗಿದೆ. ದೇವಾಲಯದ ಬಲ ಭಾಗದಲ್ಲಿ ಅಂದರೆ, ಸುರಂಗ ಮಾರ್ಗವಿರುವ ದ್ವಾರದ ಎದುರು ಇರುವ ಒಂದು ಕಂಬ ಸಂಕ್ರಾತಿಯ ನಂತರದ 6 ತಿಂಗಳು ಸಂಪೂರ್ಣವಾಗಿ ಸವಕಲಾಗುತ್ತದೆ (ಸವೆದು ಸಣ್ಣವಾಗುವುದು). ನಂತರ 6 ತಿಂಗಳು ಮತ್ತೆ ಯಥಾವತ್ತಾಗಿ ಮೊದಲಿನಂತಾಗುತ್ತದೆ. ಇದು ಈ ದೇವಾಲಯದಲ್ಲಿರುವ ಪವಾಡಕ್ಕೆ ಸಾಕ್ಷಿಯಾಗಿದೆ. ಇದಕ್ಕೆ ಗ್ರಾಮಸ್ಥರು ಮತ್ತೊಂದು ವಿವರಣೆ ನೀಡುತ್ತಾರೆ. ಅದೇನೆಂದರೆ, ತಿರುಪತಿಯ ದೇವಾಲಯದಲ್ಲಿರುವ ಕಂಬಗಳಿಗಿಂತ ಈ ದೇವಾಲಯದಲ್ಲಿ ಒಂದು ಕಂಬ ಹೆಚ್ಚು ಇರುವುದರಿಂದ ತಿರುಪತಿಯ ವೆಂಕಟೇಶ್ವರಸ್ವಾಮಿ ಶಾಪ ನೀಡಿದ್ದರಿಂದ ಒಂದು ಕಂಬ ಈ ರೀತಿಯಾಗಿ ಸವೆಯುತ್ತದೆ ಎನ್ನುವ ಮಾತುಗಳಿವೆ.

ಈ ದೇವಾಲಯ ಪವಾಡಗಳಿಗೆ ಹೆಸರುವಾಸಿಯಾಗಿದೆ. ಈ ಗ್ರಾಮ ದೇವಾನುದೇವತೆಗಳು ನೆಲೆಸಿರುವ ಸ್ಥಳವಾಗಿದ್ದು, ಇಂತಹ ನೆಲದಲ್ಲಿ ನಾವು ಹುಟ್ಟಿರುವುದು ಪೂರ್ವಜನ್ಮದ ಪುಣ್ಯ. ವಿಷ್ಣು ದೇವರು ತಪಸ್ಸು ಮಾಡಿರುವ ದೇವರಹಳ್ಳಿಗೆ ಯಾವುದೇ ಕಂಟಕಗಳು ಇದುವರೆಗೆ ಎದುರಾಗಿಲ್ಲ ಎನ್ನುತ್ತಾರೆ ಸ್ಥಳೀಯ ಜಗದೀಶ್.

1300 ವರ್ಷಗಳ ಇತಿಹಾಸ ಇಲ್ಲಿನ ದೇವಾಲಯಕ್ಕಿದ್ದು, ಈ ಗ್ರಾಮ ಇತಿಹಾಸ ಪ್ರಸಿದ್ಧಿಯಾಗಿದೆ. ಈ ದೇವಾಲಯವನ್ನು ಚೋಳರಾಜ ಹಾಗೂ ವಿಜಯನಗರದ ಅಚ್ಯುತರಾಯ ನಿರ್ಮಿಸಿರುವ ಇತಿಹಾಸವಿದೆ. ಕ್ಲೇಶ ರಾಕ್ಷಸನನ್ನು ಕೊಲ್ಲಲು ವಿಷ್ಣು ತಪ್ಪಸ್ಸು ಮಾಡಿದ ಜಾಗ ಇದಾಗಿದೆ. ಆದ್ದರಿಂದ ಇದನ್ನು ತಪಸಿರಾಯ ಎಂದು ಕರೆಯಲಾಗುತ್ತಿದೆ. ದೇವರುಗಳ ನೆಲೆಯಾಗಿದ್ದರಿಂದ ಈ ಗ್ರಾಮವನ್ನು ದೇವರಹಳ್ಳಿ ಎಂದು ಹೇಳಲಾಗುತ್ತದೆ ಎನ್ನುತ್ತಾರೆ ಪ್ರಧಾನ ಅರ್ಚಕ ಶ್ರೀನಿವಾಸಮೂರ್ತಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net