ಹಸಿರು ಹೊದ್ದ ಪುಟ್ಟಹಳ್ಳಿ ಈ ಚಿನ್ನೇನಹಳ್ಳಿ: ಹಿಂದೆ ಅಕ್ಕಸಾಲಿಗರ ಚಿನ್ನ ಕಳುವಾಗಿದ್ದ ಊರು

Chinnenahalli village mandya
Published on

ಕಿಕ್ಕೇರಿ: ತೆಂಗು, ಅಡಕೆಯ ಹಸಿರು ಹೊದ್ದಿರುವ ಚಿನ್ನೇನಹಳ್ಳಿ ಪುಟ್ಟ ಗ್ರಾಮವಾದರೂ ಸುಂದರ ತಾಣವಾಗಿದೆ.
ಗ್ರಾಮಕ್ಕೆ ನಾಲ್ಕೈದು ಮಾರ್ಗಗಳಿಂದ ಬರಬಹುದಾಗಿದ್ದು, ಇಡೀ ಗ್ರಾಮವನ್ನು ಬೆಸೆಯಲು ಇರುವ ವೃತ್ತ ಕೊಲ್ಲಿ ರೀತಿ ಇದೆ.
ಗ್ರಾಮದ ಹಿನ್ನೆಲೆ: ಗ್ರಾಮಕ್ಕೆ ಪುರಾತನ ಇತಿಹಾಸ, ಶಾಸನಗಳಿಲ್ಲವಾದರೂ ಕೃಷಿಕ ಗ್ರಾಮಕ್ಕೆ ಹೆಸರನ್ನು ಪೂರ್ವಿಕರು ಕಟ್ಟಿಕೊಂಡಿದ್ದಾರೆ. ಗ್ರಾಮದಲ್ಲಿ ಬಲು ಹಿಂದೆ ಚಿನ್ನದ ಆಭರಣ ತಯಾರಿಸುವ ಅಕ್ಕಸಾಲಿಗರ ವರ್ಗವಿತ್ತು. ಹಳ್ಳದಲ್ಲಿ ಮನೆ ನಿರ್ಮಿಸಿಕೊಂಡಿದ್ದ ಅಕ್ಕಸಾಲಿಗರು ಕುಲುಮೆಯಲ್ಲಿ ಚಿನ್ನದ ಆಭರಣ ತಯಾರಿಸಲು ಮಗ್ನರಾಗಿದ್ದರು. ಈ ವೇಳೆ ಆಗಂತುಕ ವ್ಯಕ್ತಿ ಗ್ರಾಮ ಪ್ರವೇಶಿಸಿ ಚಿನ್ನವನ್ನು ಕಳವು ಮಾಡಿಕೊಂಡು ಹೋಗಿದ್ದಾನೆ. ಹಳ್ಳದಲ್ಲಿ ದೂರ ದೂರದಲ್ಲಿ ಮನೆಗಳಿದ್ದ ಕಾರಣ ಗ್ರಾಮದ ಜನತೆ ಹುಡುಕಾಟ ನಡೆಸಿದರೂ ಸುಳಿವು ಸಿಗಲಿಲ್ಲ. ದೂರು ನೀಡಲು ಈ ಸ್ಥಳಕ್ಕೆ ಹೆಸರೇ ಇಲ್ಲವಾಗಿತ್ತು. ಆಗ ಗ್ರಾಮದ ಹಿರಿಕರು ಒಂದೆಡೆ ಸೇರಿ ‘ಚಿನ್ನದ ಹಳ್ಳಿ’ ಎಂದು ಹೆಸರಿಡಲು ತೀರ್ಮಾನಿಸಿದರು ಎನ್ನುವುದು ಹಿರಿಯರ ನುಡಿ.
ಗ್ರಾಮ ಎತ್ತರದ ಪ್ರದೇಶದಲ್ಲಿ ಇದ್ದರೂ ಬಹುತೇಕ ಹಳ್ಳದಲ್ಲಿ ಮನೆಗಳಿದ್ದವು. ಕಳ್ಳರ ಭಯದಿಂದ ಗ್ರಾಮಸ್ಥರು ಹಳ್ಳಕೊಳ್ಳಗಳಲ್ಲಿ ಮನಬಂದಂತೆ ನಿರ್ಮಿಸಿಕೊಂಡಿದ್ದ ಮನೆಗಳನ್ನು ಒಂದೆಡೆ ಕಟ್ಟಿಕೊಳ್ಳಲು ತೀರ್ಮಾನಿಸಿದರು. ಒತ್ತೊತ್ತಿಗೆ ಇರುವಂತೆ ಹತ್ತಿರಕ್ಕೆ ಮನೆ ನಿರ್ಮಿಸಿಕೊಂಡು ಗ್ರಾಮವನ್ನು ಗುರ್ತಿಸುವಂತೆ ಚಿನ್ನೇನಹಳ್ಳಿ ಗ್ರಾಮವಾಗಿಸಿಕೊಂಡರು. ಇಲ್ಲಿನ ಜನರ ಮನಸ್ಸು ಚಿನ್ನದಂತಿದ್ದು, ಅನ್ಯೋನ್ಯವಾಗಿದ್ದ ಕಾರಣಕ್ಕೆ ಗ್ರಾಮ ನಿಜವಾಗಿಯೂ ಚಿನ್ನದ ಗ್ರಾಮವಾಯಿತು ಎನ್ನುತ್ತಾರೆ ಹಿರಿಯರು.
ಹಾಸನ ಜಿಲ್ಲೆ ನುಗ್ಗೇಹಳ್ಳಿ ಬಳಿಯ ಚಿನ್ನೇನಹಳ್ಳಿ ಗ್ರಾಮದಿಂದ ಈ ಪ್ರದೇಶಕ್ಕೆ ಲಕ್ಷ್ಮೀದೇವಿ ಒಕ್ಕಲಿನವರು ಬಂದು ನೆಲೆಸಿದ್ದಾರೆ. ಲಕ್ಷ್ಮೀದೇವಿ(ಹೊನ್ನಾಳಮ್ಮ) ಎಂದರೆ ಹೊನ್ನು, ಚಿನ್ನ ಎಂದು ಕರೆಯಲಾಗುವುದರಿಂದ ಈ ಪ್ರದೇಶಕ್ಕೆ ದೇವಿಯ ಒಕ್ಕಲಿನವರು ಬಂದು ತಳವೂರಿದ ಸಲುವಾಗಿ ಚಿನ್ನೇನಹಳ್ಳಿ ಎಂದು ಕರೆಯಲಾಗುತ್ತದೆ ಎಂದು ಹಲವು ಹಿರಿಯರು ಹೇಳುತ್ತಾರೆ.

ಹೊಯ್ಸಳರ ಕಾಲದಲ್ಲಿ ಉಚ್ಚ್ರಾಯ ಸ್ಥಿತಿಯಲ್ಲಿದ್ದ ಗೋವಿಂದನಹಳ್ಳಿ, ಮಾದಾಪುರ ಗ್ರಾಮಗಳಿಗೆ ಈ ಮಾರ್ಗವಾಗಿ ಸಾಮಂತ ದೊರೆಗಳು ಪ್ರಯಾಣ ಬೆಳೆಸುತ್ತಿದ್ದರು. ಎಲ್ಲ ಗ್ರಾಮಗಳನ್ನು ಸಂದಿಸುವ ಗ್ರಾಮ ಇದಾಗಿತ್ತು. ಈಶ್ವರ ದೇಗುಲ ದರ್ಶನ ಪಡೆದು ಮಾದಾಪುರ ಗ್ರಾಮ ಪ್ರವೇಶಿಸಲು ಈ ಗ್ರಾಮ ಪೂರ್ವಿಕರಿಗೆ ಮಾರ್ಗಸೂಚಿಯಾಗಿತ್ತು.
ಹೇಮಾವತಿ ನದಿಯ ತುಸು ದೂರದಲ್ಲಿ ಗ್ರಾಮವಿದ್ದು, ಸುತ್ತಲೂ ಹೇಮಾವತಿ ನಾಲೆ ನೀರು ಹರಿಯುತ್ತಿದೆ. ಗ್ರಾಮದ ಸುತ್ತ ಹೇಮೆಯ ನೀರು ಹರಿದರೂ ಇಲ್ಲಿನ ಜನತೆ ಶುದ್ಧ ಕುಡಿಯುವ ನೀರು ಪಡೆಯಲು ಅಂದಿನ ಕಾಲದಲ್ಲಿಯೇ ಸುಂದರವಾದ ಕೊಳವನ್ನು(ಕಲ್ಯಾಣಿ) ಗ್ರಾಮದ ವಾಯವ್ಯ ದಿಕ್ಕಿನಲ್ಲಿ ನಿರ್ಮಿಸಿಕೊಂಡಿದ್ದರು. ಎಂದೂ ಬತ್ತದ ಕೊಳ ಶುಭ್ರವಾಗಿರುವಂತೆ ಸದಾ ಸುಣ್ಣದಿಂದ ಕೊಳವನ್ನು ಶೃಂಗರಿಸಿಕೊಂಡಿದ್ದರು. ಅಪ್ಪಿತಪ್ಪಿಯೂ ಕೊಳ ಮಲಿನವಾಗದಂತೆ ಎಚ್ಚರಿಕೆ ವಹಿಸಿದ್ದರು. ಕೊಳ ಮಲಿನ ಮಾಡಿದವರಿಗೆ ದಂಡ ಹಾಕುವ ಪದ್ಧತಿ ಇತ್ತು. ಜನತೆ ಭಯದಿಂದ ಕೊಳದ ಶುಭ್ರತೆ ಕಾಪಾಡಿಕೊಳ್ಳುತ್ತಿದ್ದರು. ಆದರೆ ಇಂದು ತದ್ವಿರುದ್ಧವಾಗಿ ನಿರ್ವಹಣೆ ಇಲ್ಲದೆ, ಒತ್ತುವರಿ ಕಾಟದಿಂದ ಕೊಳ ಕಿರಿದಾಗಿದೆ. ಕೊಳದ ಸುತ್ತ ಗಿಡಗಂಟಿ ಬೆಳೆದು ಉಪಯೋಗಕ್ಕೆ ಬಾರದ ಸ್ಥಿತಿ ತಲುಪಿದೆ.
ಗ್ರಾಮದಲ್ಲಿ 500 ಜನಸಂಖ್ಯೆ ಇದ್ದು, ಕೃಷಿಕರೇ ಪ್ರಧಾನವಾಗಿರುವ ಈ ಗ್ರಾಮದಲ್ಲಿ ಕೃಷಿ ಜತೆಗೆ ಹೈನುಗಾರಿಕೆ ಪ್ರತಿ ಮನೆಯ ಕಸುಬಾಗಿದೆ. ತ್ರಿಕೋನಾಕೃತಿಯಲ್ಲಿ ಬೆಳೆದಿರುವ ಗ್ರಾಮಕ್ಕೆ ದಕ್ಷಿಣಕ್ಕೆ ಕೋಟಹಳ್ಳಿ, ಉತ್ತರಕ್ಕೆ ಯತಿ, ಋಷಿಮುನಿಗಳ ತಾಣದ ಅಗ್ರಹಾರವಾಗಿದ್ದ ಮಾದಾಪುರ, ಪೂರ್ವಕ್ಕೆ ಪಂಚಲಿಂಗೇಶ್ವರಗಳ ತಾಣವಾದ ಗೋವಿಂದನಹಳ್ಳಿ ಗ್ರಾಮ ಬೆಸೆಯಲಿದೆ.
ರೈತಾಪಿ ಜನತೆಯ ದೈನಂದಿನ ಬದುಕು ಕಟ್ಟಿಕೊಳ್ಳಲು ಹಾಲು ಉತ್ಪಾದಕರ ಸಹಕಾರ ಸಂಘವಿದೆ. ಸಂಘದ ಸ್ವಂತ ಕಟ್ಟಡ ಅರ್ಧಕ್ಕೆ ನಿಂತಿದ್ದು ತ್ವರಿತವಾಗಿ ಪೂರ್ಣವಾದಲ್ಲಿ ರೈತರಿಗೆ ಅನುಕೂಲವಾಗಲಿದೆ.
ಗ್ರಾಮದಲ್ಲಿ ಸಣ್ಣಪುಟ್ಟ ಕಾರ್ಯ ಮಾಡಲು ಸೂಕ್ತ ಸ್ಥಳವಿಲ್ಲದೆ ಪರದಾಟವಿದೆ. ದೂರದ ಹೋಬಳಿ ಕೇಂದ್ರ ಕಿಕ್ಕೇರಿಗೆ ತೆರಳಿ ಲಕ್ಷಾಂತರ ರೂ. ತೆತ್ತು ಶುಭ ಮತ್ತಿತರ ಕಾರ್ಯ ಮಾಡಲು ರೈತರಿಗೆ ಆರ್ಥಿಕ ಸಂಕಷ್ಟವಿದೆ. ರೈತರಿಗೆ ನೆಮ್ಮದಿಯ ಬದುಕು ಹಾಗೂ ಸಂತಸದಿಂದ ಶುಭಕಾರ್ಯ ಮಾಡಲು ತ್ವರಿತವಾಗಿ ಊರಿಗೊಂದು ಸಾರ್ವಜನಿಕ ಸಮುದಾಯ ಭವನ ಅವಶ್ಯವಿದೆ.

ಮಾರಮ್ಮ ದೇವಿ ಕ್ಷೇತ್ರದ ರಕ್ಷಿಕಿ: ಗ್ರಾಮದ ಮಾರಮ್ಮದೇವಿ ಕ್ಷೇತ್ರ ರಕ್ಷಕಿಯಾಗಿದ್ದು, ಊರ ಹೆಬ್ಬಾಗಿಲಿನಲ್ಲಿ ಗುಡಿ ಇದೆ. ಜತೆಗೊಂದು ರಾಮಮಂದಿರವಿದೆ. ಮುಜರಾಯಿ ಇಲಾಖೆಯ ತಿರುಮಲೇಶ್ವರ ಗುಡಿ ಇದೆ. ಸುಂದರ ದೇಗುಲ ಮಣ್ಣಿನಿಂದ ಮುಚ್ಚಿದ್ದು, ಜೀರ್ಣೋದ್ಧಾರ ಕಾರ್ಯ ತ್ವರಿತವಾಗಿ ಮುಜರಾಯಿ ಇಲಾಖೆಯಿಂದ ಆಗಬೇಕಿದೆ. ಗ್ರಾಮದ ದೇವರಾಗಿ ತಿರುಮಲೇಶ್ವರ ದೇವರನ್ನು ಬಲು ಶ್ರದ್ಧೆಯಿಂದ ಗ್ರಾಮಸ್ಥರು ಪೂಜಿಸುವುದುಂಟು.
ಗ್ರಾಮದಲ್ಲಿ ರಾಮಮಂದರಿ ವೃತ್ತ ಪ್ರಧಾನವಾಗಿದ್ದು, ಚಿಕ್ಕಪುಟ್ಟ ಗಲ್ಲಿಗಳಿವೆ. ಗುಂಡಿ ಬಿದ್ದ ರಸ್ತೆಗಳು ನರೇಗಾದಲ್ಲಿ ದುರಸ್ತಿಯಾಗಿವೆ. ಊರ ಒಗ್ಗಟ್ಟಿಗಾಗಿ ಕನ್ನಂಬಾಡಮ್ಮನ ಹಬ್ಬ, ಮಾರಿಹಬ್ಬ ಸಂಭ್ರಮದಿಂದ ನಡೆಯುವುದುಂಟು. ಮಾರಿಹಬ್ಬದಲ್ಲಿ ಮಾರಿಕಾಂಬದೇವಿಗೆ ಎಣ್ಣೆಮಜ್ಜನ, ಬೇವಿನ ಸೊಪ್ಪಿನಿಂದ ತಂಪು ಮಾಡಿ ಅವರೆಕಾಳು, ತಂಬಿಟ್ಟಿನಿಂದ ನೈವೇದ್ಯವಾಗಿ ಅರ್ಪಿಸಿ ಪ್ರಸಾದ ರೂಪದಲ್ಲಿ ಇಡೀ ಗ್ರಾಮದ ಜನತೆ ಸ್ವೀಕರಿಸುವುದುಂಟು.
ರೈತಾಪಿ ಜನತೆಯ ಅನ್ನದಾತ ಹಬ್ಬವಾಗಿ ಕನ್ನಂಬಾಡಮ್ಮನ ಹಬ್ಬ ವರ್ಷಕ್ಕೊಮ್ಮೆ ವಿಜೃಂಭಣೆಯಿಂದ ನಡೆಯುವುದುಂಟು. ಕನ್ನಂಬಾಡಿ ಗ್ರಾಮಕ್ಕೆ ಹಿರಿಯರು ತೆರಳಿ ಮುಡುಪು ಎತ್ತಿದ ಹಣದಿಂದ ದೇವಿಗೆ ಬಾಗಿನ ಅರ್ಪಿಸಿ, ಮಂಗಳದ್ರವ್ಯದೊಂದಿಗೆ ಮಡಿಲು ತುಂಬಿ ಪೂಜಿಸುತ್ತಾರೆ. ದೇವಿಯ ಪ್ರಸಾದವನ್ನು ಗ್ರಾಮಕ್ಕೆ ಶ್ರದ್ಧೆಯಿಂದ ತಂದು ಗದ್ದುಗೆ ನಿರ್ಮಿಸಿ ಕನ್ನಂಬಾಡಮ್ಮನ ಪೂಜಿಸುತ್ತಾರೆ. ತಂಬಿಟ್ಟಿನ ಆರತಿ ರಾಗಿದೀವಿಗೆ ಮಡೆಯನ್ನು ಹೊತ್ತು ಮಹಿಳೆಯರು ಗ್ರಾಮ ಮೆರವಣಿಗೆ ನಡೆಸುತ್ತಾರೆ. ಮುಖಂಡರು ದೇವಿಗೆ ವಿಶೇಷವಾಗಿ ಪೂಜಿಸಿ ಸಾಮೂಹಿಕ ಅನ್ನಸಂತರ್ಪಣೆ ನಡೆಸುತ್ತಾರೆ. ವರ್ಷಕ್ಕೊಮ್ಮೆ ನಡೆಯುವ ಪೌರಾಣಿಕ ನಾಟಕ ಗ್ರಾಮದಲ್ಲಿರುವ ರಂಗಾಸಕ್ತಿಗೆ ಸಾಕ್ಷಿಯಾಗಿದೆ.
ಗ್ರಾಮದಲ್ಲಿ ಗುಂಡುತೋಪು, ಸ್ಮಶಾನ, ಸೊಪ್ಪಿನ ತೋಟ, ಗೋಮಾಳದ ಸಾಕಷ್ಟು ಜಾಗವಿದೆ. ಎಲ್ಲವೂ ಒತ್ತುವರಿಯಾಗಿದ್ದು ತೆರವು ಆಗಬೇಕಿದೆ. ಸ್ಮಶಾನ ಜಾಗದ ಒತ್ತುವರಿಯಿಂದ ಜಮೀನುಗಳಲ್ಲಿ ಶವಸಂಸ್ಕಾರ ಮಾಡುವ ಸಂದಿಗ್ಧತೆ ಗ್ರಾಮದಲ್ಲಿದ್ದು, ತ್ವರಿತವಾಗಿ ಕಂದಾಯ ಇಲಾಖೆಯಿಂದ ತೆರವು ಆಗಬೇಕಿದೆ.
ಗ್ರಾಮದಲ್ಲಿನ ಗ್ರಾಮವಿಕಾಸ ಕೇಂದ್ರ ಮಕ್ಕಳಿಗೆ ಉಚಿತ ಪಾಠ ಕೇಂದ್ರವಾಗಿದೆ. ಪಾಠದೊಂದಿಗೆ ಸಂಸ್ಕಾರ ಶಿಕ್ಷಣ, ದೇಸಿ ಕ್ರೀಡೆಗಳನ್ನು ಉಳಿಸುವ, ಗೋಸಂರಕ್ಷಣೆ, ಸನಾತನ ಸಂಸ್ಕೃತಿ, ಸಾಮೂಹಿಕ ದೀಪಪೂಜೆ ಕಾರ್ಯಕ್ರಮ ನಡೆಸಿ ಗ್ರಾಮದ ಒಗ್ಗಟ್ಟಿಗೆ ಸಹಕಾರಿಯಾಗಿದೆ.
ಗ್ರಾಮದಲ್ಲಿ ಒಕ್ಕಲಿಗ, ಹಾಲುಮತಸ್ಥ, ವಿಶ್ವಕರ್ಮ, ಪರಿಶಿಷ್ಟ ಸಮುದಾಯದವರಿದ್ದು ಸಾಮಾರಸ್ಯದ ಬದುಕು ಇಲ್ಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net