ಇತಿಹಾಸ ಎಡ-ಬಲಪಂತೀಯರ ನಡುವೆ ಸಿಕ್ಕಿದೆ: ಡಾ.ರಾಧಿಕಾ

24adarshkdga2
Published on

ಮಡಿಕೇರಿ: ಪ್ರಸ್ತುತ ಕಾಲಘಟ್ಟದಲ್ಲಿ ಇತಿಹಾಸ ಎಡಪಂತೀಯ ಹಾಗೂ ಬಲಪಂತೀಯರ ನಡುವೆ ಸಿಕ್ಕಿ ಸ್ಥಿತ್ಯಂತರಕ್ಕೆ ಒಳಗಾಗುತ್ತಿದೆ ಎಂದು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ಉಪನ್ಯಾಸಕಿ ಡಾ.ರಾಧಿಕಾ ವಿಷಾಧ ವ್ಯಕ್ತಪಡಿಸಿದರು.


ಕಾಲೇಜು ಶಿಕ್ಷಣ ಇಲಾಖೆ, ಇತಿಹಾಸ ವಿಭಾಗ, ಆಂತರಿಕ ಗುಣಮಟ್ಟ ಭರವಸೆ ಕೋಶ ಹಾಗೂ ಸರ್ಕಾರಿ ಪ್ರಾಚ್ಯ ವಸ್ತು ಸಂಗ್ರಹಾಲಯ ಮಡಿಕೇರಿ ಇವರ ಸಂಯುಕ್ತಾಶ್ರಯದಲ್ಲಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಪ್ರಾಚೀನ ನಾಣ್ಯಗಳ ಪ್ರದರ್ಶನ ಮತ್ತು ಇತಿಹಾಸದ ಕುರಿತಂತೆ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.


ಇಂದು ಇತಿಹಾಸ ಎಂಬುದು ಎಡಪಂತೀಯ ಮತ್ತು ಬಲಪಂತೀಯರ ನಡುವೆ ಸಿಕ್ಕಿ ಸ್ಥಿತ್ಯಂತರಕ್ಕೆ ಸಿಲುಕಿದೆ. ಈ ಹಿನ್ನೆಲೆ ವಿದ್ಯಾರ್ಥಿಗಳು ನೈಜ ಇತಿಹಾಸದ ಕುರಿತು ಗಮನ ಹರಿಸಬೇಕು. ಭೋದಕ ವರ್ಗ ನೈಜ ಇತಿಹಾಸವನ್ನು ಬೋಧಿಸಬೇಕು ಎಂದು ಸಲಹೆ ನೀಡಿದರು.


ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪ್ರಾಚೀನ ನಾಣ್ಯಗಳ ಸಂಗ್ರಹಕಾರ ಪಿ.ಕೆ.ಕೇಶವಮೂರ್ತಿ, ವಿದ್ಯಾರ್ಥಿಯಾಗಿರುವಾಗಲೇ ಹವ್ಯಾಸಗಳನ್ನು ರೂಡಿಸಿಕೊಳ್ಳಬೇಕು. ಅಭ್ಯಾಸಗಳು ವಿದ್ಯಾರ್ಥಿಗಳಿಗೆ ಅಂಟಿಕೊಳ್ಳಬಾರದು. ಅಭ್ಯಾಸಗಳು ಎಂದರೆ ದುರ್ವ್ಯಸನಗಳು. ಹವ್ಯಾಸಗಳು ವಿದ್ಯಾರ್ಥಿಯನ್ನು ಸಮಾಜದಲ್ಲಿ ಮಾನ್ಯ ವ್ಯಕ್ತಿಯನ್ನಾಗಿ ಮಾಡುತ್ತದೆ ಎಂದರು.


ಅಧ್ಯಕ್ಷತೆ ವಹಿಸಿಕೊಂಡಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ.ಕೆ.ಡಿ.ನಿರ್ಮಲ ಮಾತನಾಡಿ, ವಿದ್ಯಾರ್ಥಿಗಳು ಕೂಡ ಇಂತಹ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.


ಮಡಿಕೇರಿಯ ಸರ್ಕಾರಿ ಪ್ರಾಚ್ಯ ವಸ್ತು ಸಂಗ್ರಹಾಲಯದ ಕ್ಯುರೇಟರ್ ರೇಖಾರವರು ಪ್ರಾಚೀನ ವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಭೋದಕ ವರ್ಗದವರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.


ಉಪನ್ಯಾಸ ಕಾರ್ಯಕ್ರಮದ ನಂತರ ಕಾಲೇಜು ಸಭಾಂಗಣದಲ್ಲಿ ಪ್ರಾಚೀನ ನಾಣ್ಯಗಳ ಪ್ರದರ್ಶನ ನಡೆಯಿತು. ಕಾರ್ಯಕ್ರಮವನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಡಿ.ನಿರ್ಮಲರವರು ಉದ್ಘಾಟಿಸಿದರು. ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು, ಪ್ರೈಮರಿ ಮತ್ತು ಹೈಸ್ಕೂಲ್ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ನಾಣ್ಯಗಳನ್ನು ವೀಕ್ಷಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net