ಇತಿಹಾಸ ಪ್ರಸಿದ್ಧ ಸೋಮೇಶ್ವರ ದೇವಸ್ಥಾನ

6 LXR 2
Published on

ಲಕ್ಷ್ಮೇಶ್ವರ: ಶಿವಭಕ್ತ ಆದಯ್ಯನ ಧಾರ್ವಿುಕ ನೆಲೆವೀಡು ಲಕ್ಷ್ಮೇಶ್ವರ(ಪುಲಿಗೆರೆ)ದ ವಿಶಿಷ್ಟ ಶಿಲ್ಪಕಲೆ ಶ್ರೀ ಸೋಮೇಶ್ವರ ದೇವಸ್ಥಾನ ಇತಿಹಾಸ ಪ್ರಸಿದ್ಧವಾಗಿದೆ. ನಂದಿಯ ಮೇಲೆ ಶಿವಪಾರ್ವತಿ ಕುಳಿತು ಲೋಕ ಸಂಚಾರ ಹೊರಟಂತಿರುವ ಜ್ಯೋತಿ ರ್ಲಿಂಗಗಳಿಗೆ ಸಮನಾದದ್ದೆಂದು ಹೇಳುವ ಸೋಮೇಶ್ವರ ದೇವರ ಮೂರ್ತಿಯು ಅತ್ಯಂತ ವಿಶೇಷತೆ ಹೊಂದಿದೆ.

ಸಾಹಿತ್ಯ, ಶಿಲ್ಪಕಲೆ, ಸಂಗೀತ ಕ್ಷೇತ್ರದಲ್ಲಿ ಸೋಮೇಶ್ವರನಿಗೆ ದೊರೆತ ಮನ್ನಣೆ ಅಪಾರ. ಕ್ರಿ.ಶ. 6ನೇ ಶತಮಾನದಲ್ಲಿ ಕಲ್ಯಾಣ ಚಾಲುಕ್ಯರ ಆಳ್ವಿಕೆಗೆ ಒಳಪಟ್ಟಿದ್ದ ಪುಲಿಗೆರೆ ಮುನ್ನೂರು ಎಂಬುದೊಂದು ಪ್ರಾಂತ್ಯವಾಗಿತ್ತು. 11ನೇ ಶತಮಾನದಲ್ಲಿ ಈ ಪ್ರಾಂತ್ಯವನ್ನಾಳುತ್ತಿದ್ದ ಸರ್ವೆಶ್ವರನೆಂಬ ಮಾಂಡಲಿಕ ದೊರೆ ತನ್ನ ಮಗ ಸೋಮದೇವನ ಜನ್ಮೋತ್ಸವ ಸಂದರ್ಭದಲ್ಲಿ ಈ ದೇವಸ್ಥಾನ ಕಟ್ಟಿಸದನೆಂಬುದು ಇತಿಹಾಸ. ಈ ಕಾಲಾವಧಿಯಲ್ಲಿ ಸೌರಾಷ್ಟ್ರದಿಂದ ಮುತ್ತು-ರತ್ನ ವ್ಯಾಪಾರಕ್ಕಾಗಿ ಪುಲಿಗೆರೆಗೆ ಬರುತ್ತಿದ್ದ ಆದಯ್ಯನೆಂಬ ಶಿವಭಕ್ತ ಸೌರಾಷ್ಟ್ರದಿಂದ ಸ್ವಯಂಭೂ ಸೋಮೇಶ್ವರನ ಮೂರ್ತಿಯನ್ನು ತಂದು ಪ್ರತಿಷ್ಠಾಪಿಸಿದ್ದಾನೆಂಬ ಪ್ರತೀತಿ ಇದೆ.

ದೇವಸ್ಥಾನದ ವೈಶಿಷ್ಟ್ಯ: ದೇವಸ್ಥಾನವು ಹೊಯ್ಸಳ ವಾಸ್ತುಶಿಲ್ಪದಂತೆ ನಕ್ಷತ್ರಾಕಾರದಲ್ಲಿದೆ. ಪೂರ್ವ, ದಕ್ಷಿಣ ಮತ್ತು ಉತ್ತರಕ್ಕೆ ವಿಶೇಷ ಶಿಲ್ಪ ಕಲೆಗಳಿಂದ ಕೂಡಿದ ಮುಖ್ಯ ಪ್ರವೇಶ ದ್ವಾರಗಳಿವೆ. ದೇವಾಲಯದ ಪ್ರಾಂಗಣದಲ್ಲಿ ಲಜ್ಜಾಗೌರಿ ದೇವಸ್ಥಾನ, ಗಣೇಶ, ದಂಡೇಶ್ವರ, ಚಂದ್ರಮೌಳೇಶ್ವರ, ತ್ರಿಕೂಟಾಚಲ, ವೀರಭದ್ರೇಶ್ವರ, ಮಲ್ಲಿಕಾರ್ಜುನ ದೇವಸ್ಥಾನ ಮತ್ತು ದೇವ ಮಂಟಪಗಳನ್ನೊಳಗೊಂಡ ದೇವಾಲಯಗಳ ಸಮುಚ್ಛಯವೇ ಆಗಿದೆ. ದೇವಸ್ಥಾನದ ಪಶ್ಚಿಮಕ್ಕೆ ಗೌರಾಂಭಿಕೆ ಎಂಬ ಮಹಿಳೆಯಿಂದ ನಿರ್ವಿುಸಲ್ಪಟ್ಟ ಸುಂದರವಾದ ಕಲ್ಯಾಣಿ ಇದೆ.

ಸೂರ್ಯನ ಕಿರಣಗಳು ನೇರ ಮೂರ್ತಿಗೆ: ಪ್ರತಿವರ್ಷ ಮೇ ತಿಂಗಳ ಮಾಘಶುದ್ಧ ಬಹುಳ ನಕ್ಷತ್ರದಂದು ಸೂರ್ಯೂದಯದ ಪ್ರಥಮ ಹೊಂಗಿರಣಗಳು ಗರ್ಭಗುಡಿಯಲ್ಲಿರುವ ಶ್ರೀ ಸೋಮೇಶ್ವರ ಮೂರ್ತಿಯ ಮೇಲೆ ಪ್ರಕಾಶಿಸುವಂತೆ ಕಟ್ಟಿರುವುದೇ ಇಲ್ಲಿನ ತಂತ್ರಜ್ಞಾನಕ್ಕೆ ಸಾಕ್ಷಿಯಾಗಿದೆ. ಶಿಥಿಲಾವಸ್ಥೆ ತಲುಪಿದ್ದ ದೇವಸ್ಥಾನವನ್ನು ಇನ್ಪೋಸಿಸ್ ಮುಖ್ಯಸ್ಥೆ ಡಾ. ಸುಧಾ ಮೂರ್ತಿ ಅವರು 5 ಕೋಟಿ ರೂ. ವೆಚ್ಚದಲ್ಲಿ ಜೀಣೋದ್ಧಾರ ಮಾಡಿಸಿದ್ದಾರೆ. ಪ್ರತಿವರ್ಷ ಇನ್ಪೋಸಿಸ್ ಪ್ರತಿಷ್ಠಾನದಿಂದ 3 ದಿನಗಳ ಕಾಲ ಪುಲಿಗೆರೆ ಉತ್ಸವ ಆಚರಿಸುವ ಮೂಲಕ ಇಲ್ಲಿ ಸಾಂಸ್ಕೃತಿಕ, ಧಾರ್ವಿುಕ, ಪಾರಂಪರಿಕ ಹಾಗೂ ಐತಿಹಾಸಿಕ ವೈಭವ ಮರುಕಳಿಸುವಂತೆ ಮಾಡಿದ್ದಾರೆ.

ಪ್ರತಿವರ್ಷ ವೈಶಾಖ ಶುದ್ಧ ದಶಮಿ ತಿಥಿಯಂದು ಶ್ರೀ ಸೋಮೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ಕಾರ್ಯಕ್ರಮಗಳು 4 ದಿನಗಳ ಕಾಲ ನಡೆಯಲಿವೆ. ಏ.7 ರಂದು ಸಂಜೆ 5.30ಕ್ಕೆ ಸಕಲ ವಾದ್ಯವೈಭವದೊಂದಿಗೆ ರಥೋತ್ಸವ ನೆರವೇರಲಿದೆ. ಮೇ 8 ರಂದು ಸಂಜೆ 5.30 ಗಂಟೆಗೆ ಕಡುಬಿನ ಕಾಳಗ ಹಾಗೂ ಮೇ 9 ರಂದು ಓಕುಳಿ ಕಾರ್ಯಕ್ರಮ ಜರುಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net