ಐತಿಹಾಸಿಕ ಸ್ಥಳ ಕೈಲಾಂಚ ಈಗ ಪ್ರಮುಖ ವ್ಯಾಪಾರ ಕೇಂದ್ರ

venkateshwara swamy temple at Kailancha
Published on

> ವೇಗವಾಗ ಬೆಳೆಯುತ್ತಿದೆ ಕೈಲಾಂಚ

> ಚೋಳರ ಕಾಲದ ಸಂಕೇತ ಲಕ್ಷ್ಮೀವೆಂಕಟೇಶ್ವರ ದೇಗುಲ

ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ

ಮಣ್ಣಿನ ಗೋಡೆ, ನಾಡ ಹೆಂಚಿನ ಮನೆ, ಗರಿ ಶೆಡ್‌ಗಳಿದ್ದ ಗ್ರಾಮವಿಂದು ರಾಮನಗರ ತಾಲೂಕಿನ ಹೋಬಳಿ ಹಾಗೂ ಪ್ರಮುಖ ರಾಜಕೀಯ ಕೇಂದ್ರವಾಗಿ, ವ್ಯಾಪಾರ ವಹಿವಾಟಿನ ಕ್ಷೇತ್ರವಾಗಿ ಬೆಳೆದುನಿಂತಿದೆ.

ಹೌದು...ಜಿಲ್ಲಾ ಕೇಂದ್ರದಿಂದ 8 ಕಿ.ಮೀ. ಅಂತರದಲ್ಲಿ ರಾಮನಗರ-ಕನಕಪುರ ಪ್ರಮುಖ ರಸ್ತೆಯ, ಅರ್ಕಾವತಿ ನದಿ ದಂಡೆಯಲ್ಲಿಯೇ ಮೈದಳೆದು ನಿಂತಿದೆ ಕೈಲಾಂಚ ಗ್ರಾಮ. ಸಣ್ಣದಾಗಿದ್ದ ಗ್ರಾಮವನ್ನು ಸರ್ಕಾರ ಹೋಬಳಿ ಕೇಂದ್ರವನ್ನಾಗಿ ಸರ್ಕಾರ ಘೋಷಿಸಿತ್ತು. ನಂತರ ಗ್ರಾಮಕ್ಕೆ ಒಂದೊಂದೇ ಸವಲತ್ತು ಬರಲಾರಂಭಿಸಿದವು. ಪ್ರಾಥಮಿಕ ಆರೋಗ್ಯ ಕೇಂದ್ರ, ಗ್ರಾಪಂ, ಪಶು ಆಸ್ಪತ್ರೆ, ಬ್ಯಾಂಕ್, ಕೃಷಿ ಕೇಂದ್ರ, ಹಾಲಿನ ಡೇರಿ, ಕಂದಾಯ ಇಲಾಖೆ ನಾಡಕಚೇರಿ, ವ್ಯವಸಾಯ ಸೇವಾ ಸಹಕಾರ ಸಂಘ, ವಸತಿ ಶಾಲೆ ಗ್ರಾಮದಲ್ಲಿವೆ.

venkateshwara swamy idol at Kailancha

ಗ್ರಾಮದ ಇತಿಹಾಸ 

ಹಿಂದೆ ಈ ಗ್ರಾಮ ಬಳೆಗಾಜು ಪಟ್ಟಣವಾಗಿತಂತೆ, ಅಂದೇ ಪ್ರಮುಖ ವ್ಯಾಪಾರ ಕೇಂದ್ರವಾಗಿದ್ದ ಪಟ್ಟಣವನ್ನು ತೆಂಗಿನಕಲ್ಲಿನ ಪಾಳೇಗಾರ ಆಳುತ್ತಿದ್ದ ಎನ್ನಲಾಗಿದೆ. ಕೃಷಿ ಪರಿಕರ, ಆಯುಧಗಳು, ವಿಶೇಷವಾಗಿ ಅಂದಿನ ಕಾಲದಲ್ಲಿ ಜನರು ಬಳಸುತ್ತಿದ್ದ ದೀಪದ ಲಾಟಿನ್‌ಗಳು ತಯಾರಾಗುತ್ತಿದ್ದವಂತೆ.

ಸತಿಸಹಗಮನ ಪದ್ಧತಿ ಈ ಪಟ್ಟಣದಲ್ಲಿ ರೂಢಿಯಿದ್ದ ಕಾರಣ ಪತಿ ಮರಣ ಹೊಂದಿದಾಗ ಸತಿಯನ್ನು ಮೆರವಣಿಗೆ ಮಾಡಿ ನಂತರ ಗಂಡನ ಚಿತೆಯಲ್ಲಿ ಹೆಂಡತಿ ಹಾರುತ್ತಿದ್ದಳಂತೆ. ಹೀಗೆ ಸತಿ ಸಹಗಮನವಾದ ಸ್ಥಳದಲ್ಲಿ ಕೈ ಹಾಗೂ ಕೈಲಾಸದ ಲಿಂಗ ಗುರುತು ಕೆತ್ತನೆ ಮಾಡಿ ಆ ಸ್ಥಳದಲ್ಲಿ ಮಹಾಸತಿ ಕಲ್ಲನ್ನು ನೆಡುತ್ತಿದ್ದರಂತೆ, ಅಂದರೆ ಆಕೆ ಕೈಲಾಸ ಸೇರಿದಳು ಎಂಬ ಲೆಕ್ಕದಲ್ಲಿ ಆ ಕಲ್ಲುಗಳನ್ನು ಜ್ಞಾಪಕಾರ್ಥವಾಗಿ ನೆಡುತ್ತಿದ್ದರು ಎನ್ನಲಾಗಿದೆ.

ಅಂತಹ ಕಲ್ಲುಗಳು ಈಗಲೂ ಗ್ರಾಮದ ಆಸು ಪಾಸಿನಲ್ಲಿ ಕಾಣಸಿಗುತ್ತವೆ. ಒಂದು ಕಲ್ಲನ್ನು ಗ್ರಾಮದ ದೇವಾಲಯದ ಬಳಿ ಇಟ್ಟು ಹಬ್ಬ ಹರಿದಿನಗಳಲ್ಲಿ ಗ್ರಾಮಸ್ಥರು ಪೂಜೆ ಸಲ್ಲಿಸುತ್ತಾ ಬರುತ್ತಿದ್ದಾರೆ.

ಕೈಲಾಂಚ ಆದ ಕಥೆ

ಕೈಲಂಚ ಎಂದು ಕರೆಯುತ್ತಿದ್ದ ಗ್ರಾಮಕ್ಕೆ ಇತ್ತೀಚಿನ ಕೆಲವು ವರ್ಷಗಳಿಂದೀಚೆಗೆ ಗ್ರಾಮದಲ್ಲಿ ಶಿಕ್ಷಣ ಪಡೆದವರು ಶಾಲೆ, ಜಮೀನು, ಬರವಣಿಗೆಯಲ್ಲಿ ಮತ್ತಿತರ ದಾಖಲಾತಿಗಳಲ್ಲಿ ಕಚೇರಿ ಕಡತಗಳಲ್ಲಿ ಕೈಲಾಂಚ ಎಂದು ಬರೆಸುತ್ತಾ ಬಂದ ಪರಿಣಾಮದಿಂದ ಕೈಲಂಚ ಕೈಲಾಂಚವಾಗಿದೆ.

Narashima swamy idol at Kailancha

ದೇವಾಲಯಗಳು 

ಗ್ರಾಮದಲ್ಲಿ ಪುರಾತನ ಕಾಲದ ಲಕ್ಷ್ಮೀವೆಂಕಟೇಶ್ವರ ದೇವಾಲಯವಿದೆ. ವೈಕುಂಠ ಏಕಾದಶಿಯಲ್ಲಿ ಸಾವಿರಾರು ಜನರಿಗೆ ಅನ್ನಸಂತರ್ಪಣೆ, ಉತ್ಸವ ಕಾರ್ಯಕ್ರಮಗಳು ನಡೆಯುತ್ತವೆ. ಜತೆಗೆ ಗ್ರಾಮದ ಪಕ್ಕದ ಬೆಟ್ಟದಲ್ಲಿ ಕಂಬದ ಲಕ್ಷ್ಮೀನರಸಿಂಹಸ್ವಾಮಿ ದೇವರಿದೆ.

ಪ್ರತೀ ಶ್ರಾವಣ ಮಾಸದಲ್ಲಿ ಪೂಜೆ ನಡೆಯುತ್ತದೆ. ಲಕ್ಷ್ಮೀವೆಂಕಟೇಶ್ವರ ದೇವಾಲಯದ ಪಕ್ಕದಲ್ಲೇ ಗ್ರಾಮದೇವರ ಬಸವೇಶ್ವರ ದೇವಾಲಯ ಇದೆ. ಗ್ರಾಮದಲ್ಲಿ ಆದಿಶಕ್ತಿ ದೇವಾಲಯ ಕೂಡ ಇದೆ. ಪ್ರತಿ ವರ್ಷ ಅಗ್ನಿಕೊಂಡ ಮಹೋತ್ಸವ ಇಲ್ಲಿ ನಡೆಯುತ್ತವೆ.

ಅಭಿವೃದ್ಧಿ ಪಥ

ನಾಡಹೆಂಚು, ಗರಿ ಶೆಡ್, ನಂತರ ದಿನಗಳಲ್ಲಿ ಮಂಗಳೂರು ಹೆಂಚು ಹೊಂದಿದ ಗ್ರಾಮ ಈಗ ವಾಣಿಜ್ಯ ಕ್ಷೇತ್ರ. ಆರ್‌ಸಿಸಿ ಬಿಲ್ಡಿಂಗ್‌ಗಳು ಎದ್ದಿವೆ. ಜನಸಂಖ್ಯೆ, ಕ್ಷೇತ್ರ ವಿಸ್ತಾರ, ಸರ್ಕಾರ ಮಾರ್ಗಸೂಚಿಗಳು ಬದಲಾದರೆ ಮುಂದೊಂದು ದಿನ ಕೈಲಾಂಚ ತಾಲೂಕು ಕೇಂದ್ರವಾಗಿಯೂ ಹೊರಹೊಮ್ಮುವ ದಿನಗಳು ದೂರವಿಲ್ಲ.

ಕೈಲಾಂಚ ಗ್ರಾಮ ಹೆಸರಿಗೆ ತಕ್ಕ ಹಾಗೆ ಜಿಲ್ಲೆಯಲ್ಲಿಯೇ ಐತಿಹಾಸಿಕವಾಗಿ ಬಹಳ ಪ್ರಾಮುಖ್ಯತೆ ಪಡೆದಿದೆ. ಬಹು ಹಿಂದಿನ ಕಾಲಘಟ್ಟದಿಂದಲೂ ರಾಜಕೀಯ, ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಸದಾ ಮುಂದಿದೆ. ಗ್ರಾಮ ಈಗ ಬಹಳಷ್ಟು ಅಭಿವೃದ್ಧಿ ಕಂಡಿದೆ. ಗೇಟಿನಲ್ಲಿ ನಿರ್ಮಾಣವಾಗಿರುವ ಲಕ್ಷ್ಮೀವೆಂಕಟೇಶ್ವರ ದೇವಾಲಯದ ದ್ವಾರ ಗ್ರಾಮದ ಸೌಂದರ್ಯ ಹೆಚ್ಚಿಸಿದೆ.

ಆರ್.ಪಾಂಡುರಂಗ, ಗ್ರಾಪಂ ಮಾಜಿ ಅಧ್ಯಕ್ಷ, ಕೈಲಾಂಚ

ಕೈಲಾಂಚ ವ್ಯಾಪಾರ ವಾಣಿಜ್ಯ ಕ್ಷೇತ್ರವಾಗಿ ಬೆಳೆಯುತ್ತಿದೆ. ಗ್ರಾಪಂ ಕೂಡ ರಸ್ತೆ, ಚರಂಡಿ, ಸಮರ್ಪಕ ಕುಡಿಯುವ ನೀರು ಒದಗಿಸುತ್ತಿದೆ. ತೆಗೆ ಮುಂದಿನ ದಿನಗಳಲ್ಲಿ ಮತ್ತಷ್ಟು ಸೌಲಭ್ಯ ಮತ್ತಿತರ ಅಭಿವೃದ್ಧಿ ಕೆಲಸ ಮಾಡುವ ಮೂಲಕ ಗ್ರಾಪಂ ವಿಶೇಷ ಒತ್ತು ಗ್ರಾಮಕ್ಕೆ ನೀಡಲಿದೆ.

ದಾಸೇಗೌಡ, ಗ್ರಾಪಂ ಸದಸ್ಯ, ಕೈಲಾಂಚ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net