

ವಿಜಯಪುರ: ಐತಿಹಾಸಿಕ ನಗರಿಯ ವೀರರಾಣಿ ಕಿತ್ತೂರ ಚೆನ್ನಮ್ಮ ಮಂಗಲ ಕಾರ್ಯಾಲಯದಲ್ಲಿ ಸೆ. 29 ರಂದು ಹಿಂದಿ ಶಿಕ್ಷಕರ ರಾಜ್ಯಮಟ್ಟದ ಸಮ್ಮೇಳನ ಹಾಗೂ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಪ್ರೌಢ ಶಾಲೆ ಹಿಂದಿ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಧರ್ಮರಾಜ ಎಂ.ರಾಠೋಡ ತಿಳಿಸಿದರು.
ಈಗಾಗಲೇ ಬೆಂಗಳೂರು, ರಾಯಚೂರ, ಹಾವೇರಿ, ಚಾಮರಾಜ ನಗರ, ದಾವಣಗೆರೆ ಹೀಗೆ ಹಲವು ಕಡೆ ಒಂಬತ್ತು ವರ್ಷಗಳಿಂದ ಸಮ್ಮೇಳನ ಹಮ್ಮಿಕೊಂಡು ಬರಲಾಗಿದ್ದು, ಇದೀಗ 10 ನೇ ಸಮ್ಮೇಳನವನ್ನು ಪ್ರಪ್ರಥಮ ಬಾರಿಗೆ ವಿಜಯಪುರದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ರಾಜ್ಯದ 2500 ಶಿಕ್ಷಕರು ನೋಂದಾಯಿಸಿಕೊಂಡಿದ್ದು, ಸುಮಾರು 3-4 ಸಾವಿರ ಶಿಕ್ಷಕರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಈಗಾಗಲೇ ಸಕಲ ಸಿದ್ಧತೆ ಪೂರ್ಣಗೊಳಿಸಲಾಗಿದೆ. ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿ ಕೇಂದ್ರ, ರಾಣಿ ಚೆನ್ನಮ್ಮ ಮಂಗಲ ಕಾರ್ಯಾಲಯ ಹಾಗೂ ವಿವಿಧ ವಸತಿ ಶಾಲೆಗಳಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ. ಸೆ. 29 ರಂದು ಬೆಳಗ್ಗೆ 9.30ರಿಂದ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಉದ್ಘಾಟನೆ, ಉಪನ್ಯಾಸ ಮತ್ತಿತರ ಗೋಷ್ಠಿಗಳು ನಡೆಯಲಿವೆ. ಗೋಷ್ಠಿಗಳು ‘ಹಿಂದಿಯು ಸಂಪರ್ಕ ಭಾಷೆಯಾಗಿ ಭೂತ, ವರ್ತಮಾನ, ಭವಿಷ್ಯದಲ್ಲಿ ಸ್ಥಾನಮಾನ, ಹಿಂದಿ ಭಾಷೆಯ ಮೇಲೆ ಇತರೆ ಭಾಷೆಗಳ ಪ್ರಭಾವ, ಹಿಂಧಿ ಭಾಷೆಯನ್ನು ಸಶಕ್ತಗೊಳಿಸಲು ಶಿಕ್ಷಕರ ಕೊಡುಗೆ’ ಎಂಬ ವಿಷಯಗಳ ಮೇಲೆ ನಡೆಯಲಿವೆ ಎಂದರು.
ಜಿಲ್ಲಾಧ್ಯಕ್ಷ ವಸಂತ ನಾಯಕ ಮಾತನಾಡಿ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಚಾಲನೆ ನೀಡಲಿದ್ದು, ಜಿಲ್ಲೆ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ‘ವಿಜಯ ಪಥ’ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹಿಂದಿ ಭಾಷೆಯ ರಾಜ್ಯಮಟ್ಟದ ವೆಬ್‌ಸೈಟ್ ಉದ್ಘಾಟಿಸುವರು. ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ 10ನೇ ತರಗತಿಯ ವಾರ್ಷಿಕ ಪರೀಕ್ಷೆಯ ಫಲಿತಾಂಶ ಸುಧಾರಣೆ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ‘ಹಿಂದಿ ರತ್ನ’ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಜಿಲ್ಲೆಯ ಸಂಸದರು, ಶಾಸಕರು ಹಾಗೂ ವಿಪ ಸದಸ್ಯರು ಪಾಲ್ಗೊಳ್ಳುವರೆಂದು ತಿಳಿಸಿದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ವಿಷಯದಲ್ಲಿ ನೂರಕ್ಕೆ ನೂರರಷ್ಟು ಫಲಿತಾಂಶದ ಸದುದ್ದೇಶದೊಂದಿಗೆ ವಾರ್ಷಿಕ ಪರೀಕ್ಷೆ ಸುಧಾರಣೆಗಾಗಿ ಕೈಗೊಳ್ಳುವ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲಾಗುವುದು. ಎಲ್ಲಕ್ಕಿಂತ ಹೆಚ್ಚಾಗಿ ಹಿಂದಿ ಶಿಕ್ಷಕರನ್ನು ವಿಷಯ ಪರಿವೀಕ್ಷಕರ ಹುದ್ದೆಗೆ ನಿಯೋಜನೆಗೊಳಿಸುವುದು, ಬೋಧನೆ ಅವಧಿಗಳ ಸಂಖ್ಯೆ ಹೆಚ್ಚಿಸುವುದು, ಸಿಆರ್‌ಪಿ, ಬಿಆರ್‌ಪಿಯಾಗಿ ನಿಯೋಜಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ನಿರ್ಣಯ ಕೈಗೊಳ್ಳಲಾಗುವುದೆಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎಂ. ತಾವರಖೇಡ, ಆರ್.ಬಿ. ಜಾಧವ, ಬಿ.ಡಿ. ಚವಾಣ್, ಪ್ರೇಮಸಿಂಗ್ ಎಸ್.ನಾಯಕ, ಡಿ.ಎಸ್. ಲಮಾಣಿ, ಎನ್.ಪಿ. ಲಮಾಣಿ, ರವಿ ದೊಡಮನಿ, ರಾಜು ಆರ್.ರಾಠೋಡ, ಭಾವಸಿಂಗ್ ಎಂ.ಬಡಿಗೇರ, ಆರ್.ಎಸ್. ಪೋಳ, ಎ.ಬಿ. ಇರಾಜ, ಎನ್.ಎಂ. ಹರನಾಳ ಮತ್ತಿತರರಿದ್ದರು.