ತಮಿಳುನಾಡು ಶ್ರೀಮಂತ ರೈತರಿಂದ ಮಾನವ ಹಕ್ಕು ಉಲ್ಲಂಘನೆ: ಕಾರಣ ಕೊಟ್ಟ ಇತಿಹಾಸ ಸಂಶೋಧಕ ತಲಕಾಡು ಚಿಕ್ಕರಂಗೇಗೌಡ

Historian Talakadu Chikrangegowda supports Cauvery protest mandya
Published on

ಮಂಡ್ಯ: ಕಾವೇರಿ ನದಿ ನೀರಿನ ವಿಚಾರದಲ್ಲಿ ಕಾನೂನಿನ ಮೂಲಕ ನ್ಯಾಯ ಸಿಗದು. ಆದ್ದರಿಂದ ಪರ್ಯಾಯ ಮಾರ್ಗದ ಮೂಲಕ ಜಲ ಸಂರಕ್ಷಣೆಗೆ ಮುಂದಾಗಬೇಕು ಎಂದು ಇತಿಹಾಸ ಸಂಶೋಧಕ ತಲಕಾಡು ಚಿಕ್ಕರಂಗೇಗೌಡ ಸಲಹೆ ನೀಡಿದರು.

ನಗರದ ಸರ್‌ಎಂವಿ ಪ್ರತಿಮೆ ಎದುರು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ಹೋರಾಟದಲ್ಲಿ ಗುರುವಾರ ಭಾಗವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿನ ಜಲಾಶಯಗಳ ನೀರನ್ನ ಕೆರೆಗಳಿಗೆ ತುಂಬಿಸುವ ಕೆಲಸ ಆಗಬೇಕು. ಆ ಹಿನ್ನೆಲೆಯಲ್ಲಿ ಹೊಸಕೆರೆಗಳ ನಿರ್ಮಾಣದ ಜತೆಗೆ ಕೆರೆಗಳ ಹೂಳೆತ್ತಿಸಬೇಕು. ಒತ್ತುವರಿ ತೆರವು ಮಾಡಿ ಹೆಚ್ಚಿನ ನೀರು ಸಂಗ್ರಹವಾಗುವಂತೆ ಮಾಡುವ ಮೂಲಕ ಕರ್ನಾಟಕದ ಪಾಲಿನ ನೀರು ಸದ್ಭಳಕೆಗೆ ಸರ್ಕಾರ ಯೋಜನೆ ರೂಪಿಸಬೇಕೆಂದು ತಿಳಿ ಹೇಳಿದರು.

ತಮಿಳುನಾಡಿನಲ್ಲಿ ಬೇಸಾಯದ ಭೂಮಿ ಶ್ರೀಮಂತರ ಬಳಿ ಇದೆ, ಅವರು ತಮ್ಮಮನೆಗಳಲ್ಲಿ ಇರುವ ಜೀತಗಾರರನ್ನು ಕಾವೇರಿ ಹೋರಾಟಕ್ಕೆ ಕರೆ ತಂದು ಸತ್ತ ಹೆಗ್ಗಣ ತಿನ್ನಿಸುವ ಚಳವಳಿ ಮಾಡಿದ್ದಾರೆ. ಅಮಾಯಕರನ್ನು ಬಳಕೆ ಮಾಡಿಕೊಳ್ಳಲಾಗಿದ್ದು, ಇದೊಂದು ಮಾನವ ಹಕ್ಕಿನ ಉಲ್ಲಂಘನೆ ಪ್ರಕರಣವಾಗಿದೆ. ಕಾವೇರಿ ನೀರಿನ ವಿಚಾರದಲ್ಲಿ ವಾಸ್ತವಾಂಶ ಮಂಡಿಸಲು ಕನ್ನಡಿಗ ವಕೀಲರು ಇಲ್ಲ. ಅಷ್ಟೇ ಅಲ್ಲದೆ ಅವರಿಗೆ ನೀರಿನ ಮೂಲದ ಬಗ್ಗೆ ಅರಿವು ಇಲ್ಲ. ಕೇವಲ ಅಂಕಿ ಅಂಶದ ಮೂಲಕ ವಾದ ಮಾಡುತ್ತಿದ್ದು, ಇದರಿಂದ ನ್ಯಾಯ ಸಿಗುತ್ತಿಲ್ಲ. ನೀರಾವರಿ ತಜ್ಞರು, ರೈತರು, ಕಾವೇರಿ ಹೋರಾಟಗಾರರ ಜತೆ ಸಮಗ್ರವಾಗಿ ಚರ್ಚಿಸಿ ಮಾಹಿತಿ ಪಡೆದು ನ್ಯಾಯಾಲಯದ ಮುಂದೆ ಸಮರ್ಥವಾದ ಮಂಡನೆಗೆ ಸರ್ಕಾರ ಮುಂದಾಗ ಬೇಕಾಗಿದೆ ಎಂದು ಹೇಳಿದರು.

ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ತಮಿಳುನಾಡು ನಿರಂತರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದು, ಕೇಂದ್ರ ಸರ್ಕಾರ ಮತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿ ಹಸ್ತಕ್ಷೇಪ ಮಾಡುತ್ತಿದೆ. ತಮಿಳುನಾಡಿಗೆ ಕರ್ನಾಟಕದ ಹಳೆ ಮೈಸೂರು, ಆಂಧ್ರಪ್ರದೇಶ, ಕೇರಳ ಸೇರಿ ಐದು ಜಲಮೂಲಗಳಿವೆ. ಇದನ್ನು ಮರೆಮಾಚಿ ಪ್ರಾಧಿಕಾರದ ಎದುರು ಕರ್ನಾಟಕದ ಬಿಡಬೇಕಾದ ನೀರಿನ ಹಕ್ಕನ್ನು ಮಾತ್ರ ಪ್ರತಿಪಾದಿಸುತ್ತಿದೆ ಎಂದ ಅವರು, ಮೂರನೇ ಒಂದರಷ್ಟು ಅರಣ್ಯ ಸಂರಕ್ಷಿಸದೆ ಕಾವೇರಿ ಜಲಾನಯನ ವ್ಯಾಪ್ತಿಯಲ್ಲಿ ನೀರಾವರಿ ಪ್ರದೇಶ ವಿಸ್ತರಣೆ ಮಾಡಿಕೊಂಡಿದೆ. ಬೆಂಗಳೂರಿನ ಯಲಹಂಕ ಪ್ರದೇಶಕ್ಕೆ ಕಾವೇರಿ ನೀರು ನೀಡುವ ಯೋಜನೆಗೆ ಕಾವೇರಿ ವ್ಯಾಪ್ತಿಗೆ ಸದರಿ ಪ್ರದೇಶ ಬರುವುದಿಲ್ಲ ಎಂದು ಅಡ್ಡಗಾಲು ಹಾಕಿದ್ದರು. ಆದರೆ ಆಂಧ್ರಪ್ರದೇಶದಿಂದ ಚೆನ್ನೈಗೆ ಕೃಷ್ಣ ನೀರನ್ನು ಪಡೆದಿದ್ದಾರೆ. ಪಶ್ಚಿಮ ಘಟ್ಟ ಅರಣ್ಯ ವ್ಯಾಪ್ತಿ ನಿರ್ವಹಣೆಯನ್ನು ಕರ್ನಾಟಕ, ಕೇರಳ ಮಹಾರಾಷ್ಟ್ರ ರಾಜ್ಯಗಳು ಕೋಟ್ಯಂತರ ರೂ ಮಾಡುತ್ತಿವೆ. ಆದರೆ ಏನು ಕೊಡುಗೆ ನೀಡಿದ ತಮಿಳುನಾಡು ಹೆಚ್ಚಿನ ನೀರನ್ನು ಪಡೆಯುತ್ತದೆ ಎಂದು ಹೇಳಿದರು.

ಕಾವೇರಿ ವಿಚಾರದಲ್ಲಿ ಕರ್ನಾಟಕ ಮತ್ತು ತಮಿಳುನಾಡಿಗೆ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿದ್ದು 1118 ವರ್ಷದ ಹಿಂದೆ ಎಂಬ ಸತ್ಯ ತಿಳಿಯಬೇಕಾಗಿದೆ. 904 ಮತ್ತು 905ನೇ ಇಸವಿಯಲ್ಲಿ ಪಾಂಡವಪುರ ತಾಲೂಕು ಸೀತಾಪುರದ ಬಳಿ ತಲಕಾಡು ಗಂಗರು ಕಾವೇರಿ ನದಿಗೆ ಸಣ್ಣ ಪ್ರಮಾಣದ ಅಣೆಕಟ್ಟು ನಿರ್ಮಾಣ ಮಾಡಿದ್ದರು. ತಮಿಳುನಾಡಿನಲ್ಲಿ ಅದಾಗಲೇ ಕಾವೇರಿ ನದಿಗೆ ಅಣೆಕಟ್ಟು ನಿರ್ಮಾಣ ಮಾಡಿಕೊಂಡಿದ್ದ ಚೋಳರು ಇದಕ್ಕೆ ತಕರಾರು ಮಾಡಿದ್ದರು ಎಂದು ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net