ಸಿಪಿಕೆ ಪ್ರತಿ ಕೃತಿಯಲ್ಲೂ ತಮ್ಮ ಛಾಪು : ವಿಶ್ರಾಂತ ಕುಲಪತಿ ಪ್ರೊ.ಕೆ.ಚಿದಾನಂದಗೌಡ ಬಣ್ಣನೆ

8
Published on

ಮೈಸೂರು: ಡಾ.ಸಿ.ಪಿ.ಕೃಷ್ಣಕುಮಾರ್ ಅವರ ಸಣ್ಣಕಥೆ, ಪ್ರಬಂಧ, ಚುಟುಕು, ಕಾವ್ಯದ ಹೂರಣವಿದೆ. ಪ್ರತಿ ಕೃತಿಯಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ ಎಂದು ವಿಶ್ರಾಂತ ಕುಲಪತಿ ಪ್ರೊ.ಕೆ.ಚಿದಾನಂದಗೌಡ ಬಣ್ಣಿಸಿದರು.

ಶ್ರೀ ಶಿವರಾತ್ರೀಶ್ವರ ಮಹಿಳಾ ಸಮಾಜ, ಮೈಸೂರು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನಿಂದ ನಗರದ ಸರಸ್ವತಿಪುರಂ ಜೆಎಸ್‌ಎಸ್ ಮಹಿಳಾ ಕಾಲೇಜಿನ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಪ್ರೊ.ಸಿ.ಪಿ.ಕೃಷ್ಣಕುಮಾರ್ ಅವರ 86ನೇ ಜನ್ಮದಿನ, ಮಹಿಳಾ ದಿನ ಹಾಗೂ ಕಸ್ತೂರಬಾ ಗಾಂಧಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಿಪಿಕೆ ಸಾಹಿತ್ಯವು ಅನೇಕ ಚಿತ್ರಗಳನ್ನು ಸಂಕಲಿಸಿದ ಕೊಲಾಜ್ ಮಾದರಿಯಲ್ಲಿ ಇವೆೆ. ಸಣ್ಣಕಥೆ, ಪ್ರಬಂಧ, ಚುಟುಕು, ಕಾವ್ಯದ ಹೂರಣವಿದೆ. ಪ್ರತಿ ಕೃತಿಯಲ್ಲೂ ತಮ್ಮ ಛಾಪನ್ನು ಮೂಡಿಸಿದ್ದಾರೆ. ಅವರ ಮಾತಿನಲ್ಲಿಯೂ ಸಾಹಿತ್ಯ ವೈಭವ ಕಾಣಹುದಾಗಿದ್ದು, ಎಲ್ಲ ಕೃತಿಗಳನ್ನು ಒಂದುಗೂಡಿಸಿ ಸಮಗ್ರ ಸಾಹಿತ್ಯ ಹೊರತರಬೇಕು ಎಂದು ಸಲಹೆ ನೀಡಿದರು.

ಎಲ್ಲ ಕ್ಷೇತ್ರದಲ್ಲೂ ಮಹಿಳೆಯರು ಛಾಪು ಮೂಡಿಸಿದ್ದು, ಪುರುಷರಿಗೆ ಸಮಾನವಾದ ಸಾಧನೆಯನ್ನು ಮಾಡುತ್ತಿದ್ದಾರೆ. ಸಮಾಜದಲ್ಲಿ ಸ್ತ್ರೀ ಹಾಗೂ ಪುರುಷರು ದೇಹದ ಎರಡು ಭುಜಗಳಿದ್ದಂತೆ. ಮಹಿಳೆಯರಿಗೆ ಈ ಹಿಂದೆ ಹೆಚ್ಚು ಅವಕಾಶ ಇರಲಿಲ್ಲ. ಇದೀಗ ಸಮಾನ ಅವಕಾಶ ಸಿಗುತ್ತಿವೆ ಎಂದರು.

ದಕ್ಷಿಣ ಆಫ್ರಿಕಾಗೆ ತೆರಳಿದ್ದ ರಾಜಸ್ಥಾನದ 60 ವರ್ಷದ ಮಹಿಳೆಯೊಬ್ಬರು ಸೌರಶಕ್ತಿಯ ಬಗ್ಗೆ ತಿಳಿದುಕೊಂಡು ತಮ್ಮ ಊರಿನಲ್ಲೂ ಸೌರಫಲಕಗಳನ್ನು ಅಳವಡಿಸಿ ಎಲ್ಲ ಮನೆಗಳಿಗೆ ವಿದ್ಯುತ್ ನೀಡಿದರು. ರಾಜಸ್ಥಾನ ಸರ್ಕಾರವೂ ಸೌರ ಮಹಿಳೆಯೆಂದು ಆಕೆಗೆ ಬಿರುದು ನೀಡಿದೆ. ಹೀಗೆ, ಸಮಾಜ ಸೇವೆಯಲ್ಲೂ ದೇಶದ ಅನೇಕ ಮಹಿಳೆಯರು ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಮಾತನಾಡಿ, ಹಳೆಗನ್ನಡಕ್ಕೆ ಹೊಸ ವ್ಯಾಖ್ಯಾನ ನೀಡಿರುವ ಸಿಪಿಕೆ ಅವರು, ಸಾಹಿತ್ಯ ಲೋಕದ ಮಾಂತ್ರಿಕರೆಂದು ಪ್ರೊ.ದೇಜಗೌ ಅವರೇ ಹೇಳಿದ್ದರು ಎಂದು ಸ್ಮರಿಸಿದರು.

ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕಿ ಪ್ರೊ.ಎನ್.ಕೆ.ಲೋಲಾಕ್ಷಿ, ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಅಧ್ಯಕ್ಷ ತೋಂಟದಾರ್ಯ, ಲೇಖಕಿ ಡಾ.ತಾರಿಣಿ ಚಿದಾನಂದಗೌಡ, ಸಂಸ್ಥಾಪಕ ಡಾ.ಎಂ.ಜಿ.ಆರ್.ಅರಸ್, ಶಿವರಾತ್ರೀಶ್ವರ ಮಹಿಳಾ ಸಮಾಜದ ಅಧ್ಯಕ್ಷೆ ರತ್ನ ಹಾಲಪ್ಪಗೌಡ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಇತರರಿದ್ದರು.

ಲೇಖಕರಾದ ಎಚ್.ಟಿ.ಶೈಲಜಾ, ಜಾಹ್ನವಿ, ಸೀತಾಲಕ್ಷ್ಮಿವರ್ಮಾ, ಕೊಪ್ಪರಂ ಅನ್ನಪೂರ್ಣ, ಶರಣ ಸಾಹಿತ್ಯ ಪರಿಷತ್ ಬೆಳಗಾವಿ ಅಧ್ಯಕ್ಷ ಅಶೋಕ್ ಜಿ.ಮಲಗಲಿ, ಮಂಗಳಾ ಮುದ್ದುಮಾದಪ್ಪ ಅವರಿಗೆ ಕಸ್ತೂರಬಾ ಗಾಂಧಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜಾಹ್ನವಿ ಸೀತಾಲಕ್ಷ್ಮಿ ವರ್ಮ ವಿಟ್ಲ ಅರಮನೆ ರಚಿಸಿದ ಬೊಗಸೆಯೊಳಗಿನ ಚುಟಕು ಸಾಗರ ಕೃತಿ ಬಿಡುಗಡೆಗೊಳಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net