

ಕುಳಗೇರಿ ಕ್ರಾಸ್: ಭೈರನಹಟ್ಟಿ ಮಠ ಅತ್ಯಂತ ಚಿಕ್ಕದಾಗಿದ್ದರೂ ಅದರ ಸಾಹಿತ್ಯಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಸೇವೆ ಬಹಳ ಅಮೋಘವಾಗಿದೆ. ಶಾಂತಲಿಂಗ ಶ್ರೀಗಳ ಕನ್ನಡದ ಸೇವೆ ಅನನ್ಯವಾದದು ಎಂದು ಗದಗ ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಹೇಳಿದರು.
ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದಲ್ಲಿ ಹಮ್ಮಿಕೊಂಡಿದ್ದ 10ನೇ ಶರಣ ಸಂಗಮ ಹಾಗೂ ಕೋಮು ಸೌಹಾರ್ದತಾ ಜಗದ್ಗುರು ಡಾ.ಸಿದ್ಧಲಿಂಗ ಶ್ರೀಗಳ 76ನೇ ಜಯಂತ್ಯುತ್ಸವದ ಅಂಗವಾಗಿ ಶಾಂತಲಿಂಗ ಶ್ರೀಗಳಿಗೆ ಕನ್ನಡ ಕುಲಗುರು ಗೌರವ ಬಿರುದು ಸಮರ್ಪಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಗೋಕಾಕ್ ಚಳುವಳಿಗೆ ನಾಂದಿ ಹಾಡಿದ ಜಗದ್ಗುರು ಡಾ.ತೋಟದ ಸಿದ್ಧಲಿಂಗ ಶ್ರೀಗಳು ಕನ್ನಡದ ಕುಲುಗುರುಗಳಾಗಿ, ನಡೆದಾಡುವ ವಿಶ್ವಕೋಶವಾಗಿ 700ಕ್ಕೂ ಹೆಚ್ಚು ಸಾಧಕರ ಪುಸ್ತಕಗಳನ್ನು ಪ್ರಕಟಿಸಿದರು. ಅವರ ಕರಕಮಲ ಸಂಜಾತರಾದ ಪೂಜ್ಯ ಶಾಂತಲಿಂಗ ಶ್ರೀಗಳು ತಾಯಿ ಭುವನೇಶ್ವರಿಗಾಗಿ ರಥ ನಿರ್ಮಿಸಿ ಕರ್ನಾಟಕ ರಾಜ್ಯೋತ್ಸವವನ್ನು ಜಾತ್ರೆಯಾಗಿ ಪರಿವರ್ತಿಸಿ ಕನ್ನಡದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಅವರ ಸಾಹಿತ್ಯ ಸೇವೆ ಸರ್ವರಿಗೂ ಮಾದರಿಯಾಗಿದೆ ಎಂದರು.
ಚೆನ್ನಬಸಪ್ಪ ಕಂಠಿ ಮಾತನಾಡಿ, ಕನ್ನಡ ನಾಡು-ನುಡಿಗೆ ತೊಂದರೆಯಾದಾಗ ಈ ಭಾಗದಲ್ಲಿ ಕನ್ನಡದ ಪರವಾಗಿ ಪೂಜ್ಯರು ದ್ವನಿಯೆತ್ತುತ್ತಾರೆ. ಬದುಕಿಗಿಂತ ಭಾಷೆ ದೊಡ್ಡದು, ಕನ್ನಡಿಗರಿಗೆ ಮಾತೃಭಾಷೆಯೇ ಜೀವಾಳವೆಂದು ಬದುಕುತ್ತಿರುವ ಶ್ರೀಗಳ ಸೇವೆಯನ್ನು ಪರಿಗಣಿಸಿ ಸರ್ಕಾರ ಸೂಕ್ತ ಗೌರವ ನೀಡಬೇಕು ಎಂದರು.
ಚಂದ್ರು ದಂಡಿನ, ಅಪ್ಪಣ್ಣ ನಾಯ್ಕರ ಮಾತನಾಡಿದರು. ಪ್ರಕಾಶಗೌಡ ತಿರಕನಗೌಡ್ರ, ಸಿ.ಎಚ್ ಕೋರಿ, ಬಿ.ಬಿ. ಐನಾಪೂರ, ಶಂಕ್ರಣ್ಣ ವಾಳದ, ಚೆನ್ನು ನಂದಿ, ವಿ.ಎನ್. ಕೊಳ್ಳಿಯವರ, ಮಹಾಂತೇಶ ಹಿರೇಮಠ, ಕನ್ನಡಪರ ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು.
ಪ್ರೊ.ಆರ್.ಬಿ. ಚಿನಿವಾಲರ ನಿರೂಪಿಸಿದರು, ಪ್ರೊ.ಬಿ.ಸಿ. ಹನಮಂತಗೌಡ್ರ ಸ್ವಾಗತಿಸಿದರು ಹಾಗೂ ರಮೇಶ ಐನಾಪೂರ ವಂದಿಸಿದರು.