

ಹಿರಿಯೂರು: ಪದವಿ ಹಂತದ ವಿದ್ಯಾರ್ಥಿಗಳಲ್ಲಿ ಬರಹ ಮತ್ತು ಮುದ್ರಣ ಕೌಶಲ ಜ್ಞಾನ ಬೆಳವಣಿಗೆಯಿಂದ ಉಜ್ವಲ ಭವಿಷ್ಯಕ್ಕೆ ದಾರಿದೀಪವಾಗಲಿದೆ ಎಂದು ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪ ಹೇಳಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ನಗರದ ವಾಣಿ ಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಐದು ದಿನಗಳ ಬರಹ ಮತ್ತು ಮುದ್ರಣ ಕೌಶಲ ಅಭಿವೃದ್ಧಿ ಶಿಬಿರದ ಸಮಾರೋಪದಲ್ಲಿ ಮಾತನಾಡಿದರು.
ವಿದ್ಯಾರ್ಥಿ ಸಮುದಾಯದ ಶೈಕ್ಷಣಿಕ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಸಾಹಿತ್ಯ ಅಕಾಡೆಮಿ ಇಂತಹ ವಿಶಿಷ್ಠ ಕೌಶಲ ಶಿಬಿರ ಆಯೋಜನೆ ಮಾಡಿರುವುದು ಶ್ಲಾಘನೀಯ. ಶಿಬಿರಾರ್ಥಿಗಳ ಸೃಜನಶೀಲ ಚಿಂತನೆ ಹಾಗೂ ಸಂಶೋಧನೆಯ ಬರಹಗಳನ್ನು ಬರೆಯುವುದಾದರೆ ಭಾಷೆ ತುಂಬಾ ಮುಖ್ಯವಾಗುತ್ತದೆ ಎಂದರು.
ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಎಸ್.ಎಂ.ಮುತ್ತಯ್ಯ ಮಾತನಾಡಿ, ಬುಡಕಟ್ಟು ಸಮುದಾಯಗಳು ಆದಿಯಿಂದಲೂ ಸ್ಥಿತ್ಯಂತರಕ್ಕೆ ಒಳಗಾಗುತ್ತಲೇ ಬಂದಿವೆ. ಹೀಗೆ ಸ್ಥಿತ್ಯಂತರಗೊಂಡ ಸಮುದಾಯಗಳು ಸಾಕಷ್ಟು ಸಂಕಷ್ಟಗಳನ್ನು ಎದುರಿಸುತ್ತಿವೆ ಎಂದು ತಿಳಿಸಿದರು.
ಜಾಗತೀಕರಣದ ಪ್ರಭಾವದಿಂದಾಗಿ ಬುಡಕಟ್ಟು ಸಮುದಾಯಗಳನ್ನು ಒಕ್ಕಲೆಬ್ಬಿಸುವ ಮೂಲಕ ಉತ್ಪಾದಕ ಶಕ್ತಿಯನ್ನು ಕಳೆದು, ಅವರುಗಳನ್ನು ಶುದ್ಧ ಗ್ರಾಹಕರಾಗಿ ಪರಿವರ್ತನೆಗೊಳಿಸಲಾಗಿದೆ. ಇಂದಿನ ಕಾಲಘಟ್ಟದಲ್ಲಿ ಬುಡಕಟ್ಟುಗಳ ಪುನರ್ ಸಂಘಟನೆ ಮಾಡುವುದು ಇಂದಿನ ಯುವ ಪೀಳಿಗೆಯ ಕೆಲಸವಾಗಬೇಕಿದೆ ಎಂದು ಹೇಳಿದರು.
ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಎನ್.ಕರಿಯಪ್ಪ ಮಾತನಾಡಿ, ಸಾಹಿತ್ಯ ರಚನೆಯ ಜತೆಗೆ ವಿದ್ಯಾರ್ಥಿಗಳ ಕೌಶಲ ಅಭಿವೃದ್ಧಿಗಾಗಿ ಹೊಸ ಹೊಸ ರೀತಿಯ ಶಿಬಿರಗಳನ್ನು ಆಯೋಜನೆ ಮಾಡುವ ಮೂಲಕ ಯುವಕ ಮತ್ತು ಯುವತಿಯರಿಗೆ ಹೊಸ ಬದುಕು ರೂಪಿಸುವುದು ಅಕಾಡೆಮಿಯ ಪ್ರಮುಖ ಗುರಿ ಎಂದರು.
ಡಾ.ಡಿ.ಧರಣೇಂದ್ರಯ್ಯ, ಡಾ.ಮಂಜುನಾಥ ಬೇವಿನಕಟ್ಟೆ, ಡಾ.ಮಹಾಂತೇಶ್ ನಾಯಕ, ಆರ್.ಪುಷ್ಟಲತಾ, ಡಾ.ಎಸ್.ಮಾರುತಿ, ಡಾ.ಎಸ್.ಆರ್.ಗುರುನಾಥ್, ಎಸ್.ಜಿ.ರಂಗಸ್ವಾಮಿ ಸಕ್ಕರ, ಹರೀಶ್ ಕುಮಾರ್, ಜಾವುದ್ ಇತರರು ಉಪಸ್ಥಿತರಿದ್ದರು.