ಹಳ್ಳೀಲಿ ಕರೊನಾ ಹರಡಿದರೆ ಅಧಿಕಾರಿಗಳ ವಿರುದ್ಧ ಕ್ರಮ

HYR MLA meeting 27
Published on

ಹಿರಿಯೂರು: ಗ್ರಾಮೀಣ ಭಾಗದಲ್ಲಿ ಕರೊನಾ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಲ್ಲಿ ನಿರ್ಲಕ್ಷ್ಯ ವಹಿಸಿದರೆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ತಾಲೂಕು ಮಟ್ಟದ ಅಧಿಕಾರಿಗಳ ಟಾಸ್ಕ್‌ಫೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರಾಜ್ಯ ಮತ್ತು ಕೇಂದ್ರ ಸರ್ಕಾರ ಕರೊನಾ ಸೋಂಕು ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಜನರಲ್ಲಿ ವ್ಯಾಪಕ ಜಾಗೃತಿ ಮೂಡಿಸುವುದು ಅಧಿಕಾರಿಗಳ ಕರ್ತವ್ಯ. ಸಾಮಾಜಿಕ ಅಂತರ ಕಾಪಾಡುವುದರಿಂದ ಮಾತ್ರ ಕರೊನಾ ಯುದ್ಧ ಗೆಲ್ಲಲು ಸಾಧ್ಯ ಎಂದರು.

ತಾಲೂಕಿನ ಅಬ್ಬಿನಹೊಳೆ, ಖಂಡೇನಹಳ್ಳಿ, ದಿಂಡಾವರ, ಯಲ್ಲದಕೆರೆ, ಕರಿಯಾಲ, ಈಶ್ವರಗೆರೆ, ಕಣಜನಹಳ್ಳಿ ಇತರೆಡೆ ಸ್ವಚ್ಛತೆ ಕಾಪಾಡುವಲ್ಲಿ ಗ್ರಾಪಂ ಅಧಿಕಾರಿಗಳು ವಿಫಲವಾಗಿದ್ದಾರೆ ಎಂದು ಗ್ರಾಮಸ್ಥರಿಂದ ದೂರು ಕೇಳಿ ಬಂದಿದೆ. ಸ್ವಚ್ಛತೆ ಜತೆಗೆ ಕ್ಲೋರಿನೇಷನ್ ಸಿಂಪಡಣೆಗೆ ತಕ್ಷಣ ಕ್ರಮ ವಹಿಸಬೇಕು ಎಂದು ತಾಕೀತು ಮಾಡಿದರು.

ನಿರಾಶ್ರಿತರು ಹಾಗೂ ಕೂಲಿ ಕಾರ್ಮಿಕರಿಗೆ ಆಹಾರ ಧಾನ್ಯದ ಕಿಟ್ ವಿತರಣೆ, ನರೆಗಾ ಕ್ರಿಯಾ ಯೋಜನೆ ಸಿದ್ಧತೆ ಹಾಗೂ ಶಾಲಾ ಕಾಂಪೌಂಡ್ ನಿರ್ಮಾಣ, ಮೂಲ ಸೌಕರ್ಯಗಳ ಬಗ್ಗೆ ಅಧಿಕಾರಿಗಳಿಂದ ಸಂಸದ ಎ.ನಾರಾಯಣಸ್ವಾಮಿ ಮಾಹಿತಿ ಪಡೆದರು.

ಬಿಜೆಪಿ ಮುಖಂಡ ಡಿ.ಟಿ.ಶ್ರೀನಿವಾಸ್ ಸಭೆಯಲ್ಲಿ ಭಾಗವಹಿಸಿದ್ದು ಗಮನಸೆಳೆಯಿತು. ಟಿಎಚ್‌ಒ ಡಾ.ವೆಂಕಟೇಶ್, ತಹಸೀಲ್ದಾರ್ ಜಿ.ಎಚ್.ಸತ್ಯನಾರಾಯಣ, ಇಒ ಹನುಮಂತಪ್ಪ, ಬಿಇಒ ಪಿ.ರಾಮಯ್ಯ, ಪೌರಾಯುಕ್ತ ಶಿವಪ್ರಸಾದ್, ಎಇಇ ಶ್ರೀನಿವಾಸಮೂರ್ತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net