

ಹಿರಿಯೂರು: ತಾಲೂಕಿನ ಧರ್ಮಪುರ ಹೋಬಳಿಯಲ್ಲಿ ಲಾಕ್‌ಡೌನ್ ಉಲ್ಲಂಘಿಸಿ ವಿನಾಕಾರಣ ಮನೆ ಬಿಟ್ಟು ರಸ್ತೆಗೆ ಬರುವ ವಾಹನ ಸವಾರರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.
ಪೊಲೀಸ್-ಆರೋಗ್ಯ ಇಲಾಖೆ, ಸ್ಥಳೀಯ ಗ್ರಾಮ ಪಂಚಾಯತಿ ಸಹಯೋಗದಲ್ಲಿ ಕರೊನಾ ಸೋಂಕಿನ ಬಗ್ಗೆ ವ್ಯಾಪಕ ಜಾಗೃತಿ ಮೂಡಿದರೂ ಜನರ ಓಡಾಟ ನಿಯಂತ್ರಣಕ್ಕೆ ಬಂದಿರಲಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಅಬ್ಬಿನಹೊಳೆ ಪೊಲೀಸರು ಹೋಬಳಿ ಕೇಂದ್ರಕ್ಕೆ ವಿನಾಕಾರಣ ಬರುವ ವಾಹನಗಳನ್ನು ಜಪ್ತಿ ಮಾಡಿದ್ದಾರೆ. ಪಕ್ಕದ ಶಿರಾ ತಾಲೂಕಿನಲ್ಲಿ ಕರೊನಾ ಸೋಂಕಿಗೆ ವ್ಯಕ್ತಿ ಮೃತ ಪಟ್ಟಿರುವುದು ಹಾಗೂ ಆಂಧ್ರದ ಅನಂತಪುರ ಜಿಲ್ಲೆಯಲ್ಲಿ ಕರೊನಾ ಪ್ರಕರಣ ಹೆಚ್ಚಾಗುತ್ತಿದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಈಗಾಗಲೇ ಇಂಟರ್ ಸ್ಟೇಟ್ ಚೆಕ್ ಪೋಸ್ಟ್‌ಗೆ ಹೆಚ್ಚಿನ ಸಿಬ್ಬಂದಿ ನಿಯೋಜಿಸಿ ಆಂಧ್ರ-ಶಿರಾ ತಾಲೂಕಿನಿಂದ ಬರುವವರ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ.
ಧರ್ಮಪುರ ಗ್ರಾಮದ ರಸ್ತೆ ಬದಿಯ ತರಕಾರಿ ಮಾರಾಟಕ್ಕೆ ಕಡಿವಾಣ ಹಾಕಿ, ಸಂತೆ ಮಾರುಕಟ್ಟೆಯಲ್ಲೇ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ತರಕಾರಿ ಮಾರಲು ಅವಕಾಶ ನೀಡಲಾಗಿದೆ. ಶನೈಶ್ಚರ ದೇಗುಲದ ಬಳಿ ವಾಹನಗಳ ಪಾರ್ಕಿಂಗ್‌ಗೆ ವ್ಯವಸ್ಥೆ ಕಲ್ಪಿಸಲಾಗಿದೆ.
ಅಬ್ಬಿನಹೊಳೆ ಪೊಲೀಸ್ ಠಾಣೆ ಪಿಎಸ್‌ಐ ಚಂದ್ರಶೇಖರ್:ರಾಜ್ಯದ ಗಡಿಗೆ ಹೊಂದಿಕೊಂಡಿರುವ ಅನಂತಪುರ ಜಿಲ್ಲೆಯಲ್ಲಿ 15 ಕರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಆಂಧ್ರ ಗಡಿ ಭಾಗದ ಜನರು ರಾಜ್ಯ ಗಡಿ ಪ್ರವೇಶಿಸಿದಂತೆ ನಿರ್ಬಂಧಿಸಲಾಗಿದೆ.