ಧರ್ಮಪುರ ಕೆರೆಗೆ ಭದ್ರೆ ಹರಿಯುವುದು ಖಚಿತ

HYR poornima 07
Published on

ಹಿರಿಯೂರು: ತಾಲೂಕಿನ ಐತಿಹಾಸಿಕ ಧರ್ಮಪುರ ಕೆರೆಗೆ ಭದ್ರೆ ನೀರು ಹರಿಯುವುದು ಖಚಿತ ಎಂದು ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ಹೇಳಿದರು.

ತಾಲೂಕಿನ ಪಟ್ರೆಹಳ್ಳಿ-ಬಗ್ಗನಡು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮಂಗಳವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಧರ್ಮಪುರ ಕೆರೆಗೆ ಯಾವುದಾದರೂ ಮೂಲದಿಂದ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸುವಂತೆ ಇಲ್ಲಿನ ರೈತರು 1919 ರಿಂದ ಹೋರಾಟ ನಡೆಸುತ್ತಿದ್ದಾರೆ. ಬಿಜೆಪಿ ಸರ್ಕಾರದ ಇಚ್ಛಾಶಕ್ತಿ ಫಲವಾಗಿ ಭದ್ರಾ ಯೋಜನೆಯಡಿ ಧರ್ಮಪುರ ಕೆರೆ ಸೇರ್ಪಡೆಯಾಗಿದ್ದು, ಹೋಬಳಿ ಜನರ ಶತಮಾನದ ಕನಸು ಶೀಘ್ರವೇ ನನಸಾಗಲಿದೆ ಎಂದರು.

ಬಹು ಗ್ರಾಮಕ್ಕೆ ಸೇರ್ಪಡೆ: ತಾಲೂಕಿನ ಜೆ.ಜಿ.ಹಳ್ಳಿ-ಐಮಂಗಲ ಹೋಬಳಿಯ ಎಲ್ಲ ಹಳ್ಳಿಗಳಿಗೆ ವಿವಿ ಸಾಗರ ಮತ್ತು ಗಾಯತ್ರಿ ಜಲಾಶಯದಿಂದ ನೇರ ಪೈಪ್‌ಲೈನ್ ಮೂಲಕ ಶಾಶ್ವತ ಕುಡಿವ ನೀರು ಪೂರೈಕೆ ಮಾಡುವ ಬಹುಗ್ರಾಮ ಕುಡಿವ ನೀರಿನ ಯೋಜನೆ ಕಾಮಗಾರಿ ಮುಕ್ತಾಯವಾಗಿದೆ. ಶೀಘ್ರವೇ ಗ್ರಾಮೀಣರಿಗೆ ಶುದ್ಧ ನೀರು ಸಿಗಲಿದೆ. ಧರ್ಮಪುರ ಸೇರಿದಂತೆ ಹೋಬಳಿಯ ಎಲ್ಲ ಹಳ್ಳಿಗಳನ್ನು ಬಹುಗ್ರಾಮ ಯೋಜನೆಯಡಿ ಸೇರಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದರು.

ಜಿಪಂ ಸದಸ್ಯೆ ರಾಜೇಶ್ವರಿ, ತಾಪಂ ಸದಸ್ಯ ಜಯರಾಮಯ್ಯ, ಗ್ರಾಪಂ ಸದಸ್ಯರಾದ ಈರಣ್ಣ, ಯಲ್ಲಪ್ಪ, ಕೃಷ್ಣಮೂರ್ತಿ, ರಘು, ದಯಾನಂದ, ಕೃಷ್ಣನಾಯ್ಕ, ಶಾಸಕರ ಆಪ್ತ ಸಹಾಯಕ ನಿರಂಜನಮೂರ್ತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net