

ಹಿರಿಯೂರು: ಸ್ತ್ರೀಶಕ್ತಿ ಗುಂಪುಗಳು ಮಹಿಳೆಯರಿಗೆ ಹೊಸ ಚೈತನ್ಯ ನೀಡಿ ಆರ್ಥಿಕ, ಸಾಮಾಜಿಕ ಸದೃಢತೆ ತಂದುಕೊಟ್ಟಿರುವುದು ಶ್ಲಾಘನೀಯ ಎಂದು ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ಹೇಳಿದರು.
ನಗರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ತಾಲೂಕು ಮಟ್ಟದ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಹಿಳೆಯರು ಸ್ವಸಹಾಯ ಸಂಘಗಳಲ್ಲಿನ ಸಹಾಯಧನ ಪಡೆದು ಆರ್ಥಿಕವಾಗಿ ಸ್ವಾವಲಂಬಿಗಳಾಗುವ ಜತೆಗೆ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಜಿಲ್ಲಾ ನಿರೂಪಣಾಧಿಕಾರಿ ಭಾರತಿ ಬಣಕಾರ್ ಮಾತನಾಡಿ, ಮಹಿಳಾ ಅಭಿವೃದ್ಧಿ ನಿಗಮದಿಂದ ಸ್ವ ಉದ್ಯೋಗಕ್ಕೆ ಸಹಾಯ ಧನ ನೀಡಲಾಗುತ್ತದೆ. ಉದ್ಯೋಗಿನಿ ಯೋಜನೆಯಡಿ ಸಾಲ ಸೌಲಭ್ಯ, ಸಮೃದ್ಧಿ ಯೋಜನೆಯಡಿ ಬೀದಿಬದಿ ವ್ಯಾಪಾರ ನಡೆಸುವ ಮಹಿಳೆಯರಿಗೆ ಸಹಾಯ ಧನ ನೀಡಲಾಗುತ್ತದೆ ಎಂದು ತಿಳಿಸಿದರು.
ಮಾರಾಟ ಮೇಳದಲ್ಲಿ ಸ್ತ್ರೀಶಕ್ತಿ ಗುಂಪಿನ ಸದಸ್ಯರು ತಯಾರಿಸಿದ ವಸ್ತುಗಳನ್ನು ಮಾರಾಟಕ್ಕಿಟ್ಟಿದ್ದರು.
ಜಿಪಂ ಸದಸ್ಯೆ ರಾಜೇಶ್ವರಿ, ತಾಪಂ ಅಧ್ಯಕ್ಷೆ ಲಕ್ಷ್ಮೀದೇವಿ, ಸಿಡಿಪಿಓ ವೀಣಾ, ನಗರಸಭೆ ಸದಸ್ಯ ಮಹೇಶ್ ಪಲ್ಲವ, ಮಾಜಿ ಸದಸ್ಯ ಚಿರಂಜೀವಿ, ಗೊಲ್ಲ ಸಂಘದ ರಾಜ್ಯಾಧ್ಯಕ್ಷ ಡಿ.ಟಿ. ಶ್ರೀನಿವಾಸ್, ನಿರಂಜನ್, ಕಬಡ್ಡಿ ಶ್ರೀನಿವಾಸ್ ಇತರರಿದ್ದರು.