ಧರ್ಮಪುರ ಯುವಕ ಚೇತರಿಕೆ

Covid hosptail
Published on

ಹಿರಿಯೂರು: ಕರೊನಾ ಸೋಂಕಿತ ಯುವಕ ಚೇತರಿಸಿಕೊಂಡ ಕಾರಣ ತಾಲೂಕಿನ ಧರ್ಮಪುರದ ಕೋವಿಡ್ ಆಸ್ಪತ್ರೆಯಿಂದ ಶುಕ್ರವಾರ ಬಿಡುಗಡೆ ಮಾಡಲಾಯಿತು.

ದೆಹಲಿಗೆ ಐಎಎಸ್ ಕೋಚಿಂಗ್‌ಗೆ ತೆರಳಿ ವಾಪಸಾದ ಧರ್ಮಪುರ ಹೋಬಳಿ ಗ್ರಾಮದ ಯುವಕನನ್ನು ದೇವರಕೊಟ್ಟ ಮುರಾರ್ಜಿ ವಸತಿ ಶಾಲೆ ಹಾಸ್ಟೆಲ್‌ನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಸೋಂಕು ದೃಢಪಟ್ಟ ಬಳಿಕ ಧರ್ಮಪುರದ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.

ಟಿಎಚ್‌ಒ ಹೇಳಿಕೆ: ಕ್ವಾರಂಟೈನ್‌ನಲ್ಲಿದ್ದ ಯುವಕನಿಗೆ ಮೇ 16ರ ವರದಿಯಲ್ಲಿ ನೆಗೆಟಿವ್, ಮೇ 29ರಂದು ಪಾಸಿಟಿವ್ ಎಂದು ವರದಿ ಬಂದಿತ್ತು. ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಆಸ್ಪತ್ರೆಗೆ ದಾಖಲಿಸಿ 7 ದಿನ ಚಿಕಿತ್ಸೆ ನೀಡಲಾಗಿತ್ತು. 2ನೇ ಪರೀಕ್ಷೆಯಲ್ಲಿ ನೆಗೆಟಿವ್ ಬಂದ ಕಾರಣ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಟಿಎಚ್‌ಒ ಡಾ.ವೆಂಕಟೇಶ್ ತಿಳಿಸಿದ್ದಾರೆ.

ಕಟುಂಬಸ್ಥರ ಬೇಸರ: ಮಗ ಕರೊನಾದಿಂದ ಪಾರಾಗಿ ಬಂದಿದ್ದು ಸಂತಸವಾದರೆ, ನೆರೆಹೊರೆಯವರು ನಮ್ಮನ್ನು ನೋಡುವ ದೃಷ್ಟಿ ಬದಲಾಗಿದ್ದು, ಬಹಳ ಬೇಸರ ತರಿಸಿದೆ ಎಂದು ಕುಟುಂಬಸ್ಥರು ಮಾಧ್ಯಮ ಪ್ರತಿನಿಧಿಗಳು, ಅಧಿಕಾರಿಗಳ ಬಳಿ ಕಣ್ಣೀರ ಮೂಲಕ ನೋವು ತೋಡಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net