

ಹಿರಿಯೂರು: ಹೆಣ್ಣು ಭ್ರೂಣ ಹತ್ಯೆಯಿಂದ ಲಿಂಗಾನುಪಾತದಲ್ಲಿ ಅಂತರ ಹೆಚ್ಚಿ, ಮಹಿಳೆಯರ ಶೋಷಣೆಗೆ ದಾರಿ ಆಗುತ್ತದೆ ಎಂದು ನ್ಯಾಯಾಧೀಶೆ ದಮಯಂತಿ ಸೋಮಯ್ಯ ಕಳವಳ ವ್ಯಕ್ತಪಡಿಸಿದರು.
ನಗರದ ಯಾಜ್ಞವಲ್ಕ್ಯ ಪಬ್ಲಿಕ್ ಶಾಲೆಯಲ್ಲಿ ಶುಕ್ರವಾರ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಶಿಕ್ಷಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳಿದ್ದರೂ ಹೆಣ್ಣು ಹೊರೆ ಎಂಬ ಧೋರಣೆ ಸಮಾಜದಿಂದ ದೂರವಾಗಿಲ್ಲ. ಲಿಂಗ ತಾರತಮ್ಯ ಕೊನೆಗಾಣಿಸಲು ಪ್ರತಿಯೊಬ್ಬರು ಸಕಾರಾತ್ಮಕವಾಗಿ ಚಿಂತಿಸಬೇಕು ಎಂದರು.
ನ್ಯಾಯಾಧೀಶೆ ಎನ್.ಬಿ.ಶೇಖ್ ಮಾತನಾಡಿ, ಶಾಲಾ ಹಂತದಲ್ಲಿ ವಿದ್ಯಾರ್ಥಿಗಳಿಗೆ ಪಾಠದ ಜತೆ ಕಾನೂನಿನ ಅರಿವು ಮೂಡಿಸಬೇಕಿದೆ. ಮಕ್ಕಳ ಸರಿ-ತಪ್ಪು ತಿದ್ದಿ ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಜವಾಬ್ದಾರಿ ಪಾಲಕರು-ಶಿಕ್ಷಕರ ಮೇಲಿದೆ ಎಂದು ಹೇಳಿದರು.
ಸಂಸ್ಥೆ ಅಧ್ಯಕ್ಷ ಟಿ.ಸುರೇಶ್, ವಕೀಲರಾದ ಟಿ.ಮಂಜಣ್ಣ, ರಾಜಪ್ಪ, ಬಿ.ಟಿ.ಸವಿತಾ, ಶಾಂತಕುಮಾರಿ, ಟಿ.ಧ್ರುವಕುಮಾರ್, ಎಸ್.ಶೇಷಾದ್ರಿ, ಟಿ.ಪಾಂಡುರಂಗಪ್ಪ, ಬಿ.ಕಾಂತರಾಜು, ಕೆ.ವಿ.ರಂಗನಾಥ, ಮುಖ್ಯಶಿಕ್ಷಕ ಶ್ರೀನಿವಾಸ್ ಇತರರಿದ್ದರು.