

ಹಿರಿಯೂರು: ವಿವಿ ಸಾಗರದ ಎಡ ಮತ್ತು ಬಲ ದಂಡೆ ನಾಲೆಗಳಿಗೆ ನೀರು ಹಾಯಿಸುವಂತೆ ಒತ್ತಾಯಿಸಿ ರೈತ ಸಂಘದ ನೇತೃತ್ವದಲ್ಲಿ ನೂರಾರು ರೈತರು ಮಂಗಳವಾರ ಪ್ರತಿಭಟನೆ ನಡೆಸಿ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿದರು.
ರೈತ ಸಂಘದ ತಾಲೂಕಾಧ್ಯಕ್ಷ ಕೆ.ಟಿ. ತಿಪ್ಪೇಸ್ವಾಮಿ ಮಾತನಾಡಿ, ಜಿಲ್ಲಾಧಿಕಾರಿಗಳು ತಾಲೂಕಿನ ವಾಸ್ತವ ಅರಿತು ಕುಡಿಯಲು ಮತ್ತು ರೈತರ ಬೆಳೆಗಳಿಗೆ ವಿವಿ ಸಾಗರದ ನೀರು ಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
.
ಅಚ್ಚುಕಟ್ಟು ಪ್ರದೇಶದ ಬೆಳೆಗಳಿಗೆ ಹಾಗೂ ಕುಡಿಯಲು ವಿವಿ ಸಾಗರ ಜಲಾಶಯದಿಂದ ನೀರು ಹರಿಸುವಂತೆ ಜಿಲ್ಲಾಡಳಿತ, ಸ್ಥಳೀಯ ಶಾಸಕರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಅಂತರ್ಜಲ ಕುಸಿತದಿಂದ ತಾಲೂಕಿನಲ್ಲಿ ಹನಿ ನೀರಿಗೂ ಪರದಾಟಶುರುವಾಗಿದೆ. ಮಾನವೀಯ ದೃಷ್ಟಿಯಿಂದ ನಾಲೆಗಳಿಗೆ ನೀರು ಹರಿಸಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿ ಕಚೇರಿ ಬಳಿ ಅಹೋರಾತ್ರಿ ಧರಣಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು
ಜೈಲಿಗೆ ಹಾಕಿದ್ದರು ಹೋರಾಟ ಬಿಡಲ್ಲ: ವಿವಿ ಸಾಗರ ಜಲಾಶಯದಲ್ಲಿ ಪ್ರಸ್ತುತ ನೂರು ಅಡಿ ನೀರು ಸಂಗ್ರಹವಾಗಿದ್ದು, ಮುಂದಿನ ಎರಡು ವರ್ಷದವರೆಗೆ ಕುಡಿವ ನೀರಿಗೆ ಸಮಸ್ಯೆಯಾಗುವುದಿಲ್ಲ. ಜೂನ್ ತಿಂಗಳಿಂದ ನಿರಂತರ ಭದ್ರಾ ನೀರು ಹರಿಸಿದರೆ ಜಲಾಶಯಕ್ಕೆ ಸಾಕಷ್ಟು ಪ್ರಮಾಣದಲ್ಲಿ ನೀರು ಲಭ್ಯವಾಗಲಿದೆ. ನಮ್ಮನ್ನು ಜೈಲಿಗೆ ಹಾಕಿದರೂ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸುವವರೆಗೆ ಹೋರಾಟ ಕೈ ಬಿಡುವುದಿಲ್ಲ ಎಂದು ರೈತರು ಪಟ್ಟುಹಿಡಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ರೈತ ಸಂಘದ ಕಾರ್ಯಾಧ್ಯಕ್ಷ ಕೆ.ಸಿ. ಹೊರಕೇರಪ್ಪ, ಸಿದ್ದರಾಮಣ್ಣ, ಕಸವನಹಳ್ಳಿ ರಮೇಶ್, ಶಿವಕುಮಾರ್, ಕಲ್ಪನಾ, ಅರಳಿಕೆರೆ ತಿಪ್ಪೇಸ್ವಾಮಿ, ಶಿವಣ್ಣ, ರಾಮಣ್ಣ, ಮಂಜುನಾಥ್ ಇತರರಿದ್ದರು.
ಬಂದ್ ಎಚ್ಚರಿಕೆ ನೀರು ಹರಿಸಲು ಆದೇಶಿಸುವರೆಗೆ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲಾಗುವುದು. ಜಿಲ್ಲಾಧಿಕಾರಿಗಳ ವಿಳಂಬ ಧೋರಣೆ ಅನುಸರಿಸಿದರೆ ಶುಕ್ರವಾರ-ಶನಿವಾರ ಹಿರಿಯೂರು ಬಂದ್ ಮಾಡಲಾಗುವುದು ಎಂದು ರೈತ ಸಂಘದ ಅಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ ಹೇಳಿದರು.
ವಿವಿ ಸಾಗರ ಜಲಾಶಯದಲ್ಲಿ ನೀರು ಲಭ್ಯವಿಲ್ಲದಿದ್ದರೂ ಬೇರೆಡೆಗೆ ನೀರು ಕೊಟ್ಟಿದ್ದಕ್ಕೆ..? ಈಗಾಗಲೇ ತಾಲೂಕಿನ ಜನ ತಕ್ಕ ಪಾಠ ಕಲಿಸಿದ್ದಾರೆ. ಪ್ರಸ್ತುತ ಜಲಾಶಯದಲ್ಲಿ ನೂರು ಅಡಿ ನೀರಿದ್ದರೂ ಇದನ್ನು ಅಚ್ಚುಕಟ್ಟು ಪ್ರದೇಶಕ್ಕೆ ಹರಿಸುವಲ್ಲಿ ಶಾಸಕರು ಮೌನವಾಗಿರುವುದು ದುರಂತ.
> ಜಿ. ಪ್ರೇಮ್‌ಕುಮಾರ್, ರೈತ ಮುಖಂಡ