

ಹಿರಿಯೂರು: ಸಮಾಜದಲ್ಲಿ ಸಂಸ್ಕೃತಿ, ಮಕ್ಕಳಲ್ಲಿ ಸಂಸ್ಕಾರ ಬೆಳೆಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಶಿಕ್ಷಣ ತಜ್ಞ ಡಾ. ಗುರುರಾಜ ಕರ್ಜಗಿ ಹೇಳಿದರು.
ತಾಲೂಕಿನ ಹೊಸಯಳನಾಡು ಕರ್ನಾಟಕ ಪಬ್ಲಿಕ್ ಶಾಲೆ ಸಭಾಂಗಣದಲ್ಲಿ ಮಂಗಳವಾರ ಶಿಕ್ಷಣ ಇಲಾಖೆ ಏರ್ಪಡಿಸಿದ್ದ ಶಿಕ್ಷಕರಿಗೆ ಶೈಕ್ಷಣಿಕ ನಾಯಕತ್ವ ಮತ್ತು ವ್ಯಕ್ತಿತ್ವ ವಿಕಸನ ವಿಶೇಷ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಮಾಜ ಶಿಕ್ಷಕರಲ್ಲಿ ಅಪೇಕ್ಷಿತ ಮೌಲ್ಯಗಳನ್ನು ನಿರೀಕ್ಷಿಸುತ್ತಿದೆ. ಶಿಕ್ಷಕರ ತಮ್ಮ ಜವಾಬ್ದಾರಿ ನಿಭಾಯಿಸಬೇಕು. ಕೋಪ, ತಾಪ, ಅನಸೂಯೆ ಮನಸ್ಸಿನಲ್ಲಿ ಇಟ್ಟುಕೊಂಡರೆ ಮಕ್ಕಳಲ್ಲಿ ಮೌಲ್ಯ ಬೆಳೆಸಲಾಗದು. ಸಂಸ್ಕಾರಕ್ಕೆ ಮತ್ತೊಂದು ಹೆಸರೇ ಶಿಕ್ಷಣ. ಶಿಕ್ಷಕರಾದವರು ನಿಮ್ಮ ವಿಷಯವನ್ನು ಪ್ರೀತಿಸುತ್ತೀರಾ? ವೃತ್ತಿ ಬಗ್ಗೆ ಅಭಿಮಾನ ಇದೆಯೇ? ವಿದ್ಯಾರ್ಥಿಗಳನ್ನು ನಿಮ್ಮ ಮಕ್ಕಳಷ್ಟೇ ಪ್ರೀತಿಸುತ್ತೀರಾ? ಎಂಬ ಪ್ರಶ್ನೆಗಳನ್ನು ಹಾಕಿಕೊಂಡು ಅದರಂತೆ ನಡೆದಲ್ಲಿ ಉತ್ತಮ ಶಿಕ್ಷಕರಾಗಲು ಸಾಧ್ಯ ಎಂದರು.
ಶಾಲೆಯ ಮಹಾ ಪೋಷಕ ನಾ. ತಿಪ್ಪೇಸ್ವಾಮಿ ಮಾತನಾಡಿ, ನಮ್ಮ ಬದುಕಿಗೆ ಬೆಳಕು ಪಡೆದರೆ ಸಾಲದು. ಸಮಾಜಕ್ಕೆ ಬೆಳಕು ಕೊಡುವ ಸಾಮರ್ಥ್ಯವನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು ಎಂದರು.
ಶಿಕ್ಷಕರ ಚೆಕ್ ಬೌನ್ಸ್ ಪ್ರಕರಣ ಹೆಚ್ಚಳ: ನ್ಯಾಯಾಧೀಶೆ ದಮಯಂತಿ ಸೋಮಯ್ಯ ಮಾತನಾಡಿ, ತಾಲೂಕಿನ ಶಿಕ್ಷಕರ ಮೇಲೆ ಚೆಕ್ ಬೌನ್ಸ್ ಪ್ರಕರಣ ಹೆಚ್ಚಾಗುತ್ತಿವೆ.
ಈ ಬಗ್ಗೆ ಎಚ್ಚರ ವಹಿಸಬೇಕು. ಸಮಾಜ ತಮ್ಮ ಮೇಲಿಟ್ಟಿರುವ ನಂಬಿಕೆ ಉಳಿಸಿಕೊಳ್ಳವ ಪ್ರಯತ್ನ ಮಾಡಬೇಕು. ನಕಾರಾತ್ಮಕ ಮನೋಭಾವ ಬಿಡಬೇಕು. ಶಾಲೆಯಲ್ಲಿ ಮೊಬೈಲ್ ಬಳಕೆಯಿಂದ ದೂರವಿದ್ದು ಮಕ್ಕಳಿಗೆ ಮಾದರಿಯಾಗಬೇಕು ಎಂದರು.
ನ್ಯಾ.ಎನ್.ಬಿ. ಶೇಖ್ ಮಾತನಾಡಿ, ಶಿಕ್ಷಕರ ಚೆಕ್ ಬೌನ್ಸ್ ಪ್ರಕರಣಗಳನ್ನು ಜನತಾ ನ್ಯಾಯಾಲಯದಲ್ಲಿ ಬಗೆಹರಿಸಿಕೊಳ್ಳಲು ಮುಂದೆ ಬಂದರೆ, ಬ್ಯಾಂಕ್ ಅಧಿಕಾರಿಗಳ ಸಮ್ಮುಖದಲ್ಲಿ ಪರಿಹರಿಸಲು ಪ್ರಯತ್ನಿಸಲಾಗುವುದು ಎಂದರು.
ಬಿಇಒ ರಾಮಯ್ಯ ಮಾತನಾಡಿ, ಮಕ್ಕಳಿಗೆ ಪಠ್ಯದ ವಿಷಯಗಳನ್ನು ಪ್ರಾಯೋಗಿಕವಾಗಿ ಕಲಿಸಬೇಕು. ನೈತಿಕ-ಮಾನವೀಯ ಮೌಲ್ಯ ಬೆಳೆಸಿ ಫಲಿತಾಂಶ ಸುಧಾರಣೆಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.
ತಾಲೂಕು ಅಕ್ಷರ ದಾಸೋಹ ಅಧಿಕಾರಿ ಎಲ್. ನಾಗರಾಜಾಚಾರ್, ಪ್ರಾಚಾರ್ಯ ಚಂದ್ರಯ್ಯ, ಜಿಲ್ಲಾ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಶಿವಾನಂದ್, ಶಶಿಧರ್, ಡಾ. ವೀರಣ್ಣ ಇತರರಿದ್ದರು. ತಾಲೂಕು ಪ್ರಾಥಮಿಕ-ಪ್ರೌಢಶಾಲೆಗಳ ಮುಖ್ಯಶಿಕ್ಷಕರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.