

ಹಿರಿಯೂರು: ಮೀಸಲಾತಿ ಶೋಷಿತ ಸಮುದಾಯದ ಮೂಲ ಹಕ್ಕು. ಇದನ್ನು ಆಳುವ ಸರ್ಕಾರಗಳು ಅರಿತುಕೊಳ್ಳಬೇಕು ಎಂದು ಶ್ರೀ ವಾಲ್ಮೀಕಿ ಪ್ರಸನ್ನಾನಂದಪುರಿ ಸ್ವಾಮೀಜಿ ಹೇಳಿದರು.
ವೇದಾವತಿ ನಗರದ ಕೃಷ್ಣಪ್ಪ ಸರ್ಕಲ್‌ನಲ್ಲಿ ಮಂಗಳವಾರ ವಾಲ್ಮೀಕಿ ನಾಯಕ ಸೇನಾ ಸಮಿತಿ ಹಮ್ಮಿಕೊಂಡಿದ್ದ ಪ್ರಗತಿಪರ ರೈತರ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪರಿಶಿಷ್ಟ ಪಂಗಡದ ಶೇ.3.5ರ ಮೀಸಲಾತಿಯನ್ನು ಶೇ.7.5ಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ನಾಯಕ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸಬೇಕೆಂದು ವಿವಿಧ ಹಂತದಲ್ಲಿ ಹೋರಾಟ ನಡೆಸುತ್ತಾ ಬಂದಿದ್ದೇವೆ. ಆದರೂ ಸರ್ಕಾರ ಸ್ಪಂದಿಸಿಲ್ಲ. ಆದ್ದರಿಂದ ಸಂಘಟಿತರಾಗುವ ಮೂಲಕ ಹೋರಾಟ ನಡೆಸಬೇಕು ಎಂದರು.
ಮುಖಂಡ ಹರ್ತಿಕೋಟೆ ವಿರೇಂದ್ರಸಿಂಹ ಮಾತನಾಡಿ, ನಾಯಕ ಸಮುದಾಯ ಅನೇಕ ಸೌಲಭ್ಯಗಳಿಂದ ವಂಚಿತವಾಗಿದ್ದು, ಪ್ರತಿಯೊಬ್ಬರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ರಾಜಕೀಯ, ಸಾಮಾಜಿಕ ಸ್ಥಾನಮಾನ ಗಳಿಸುವುದರ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ತಿಳಿಸಿದರು.
ಪ್ರಾಧ್ಯಾಪಕ ಡಾ.ಗುಡದೇಶಪ್ಪ ಮಾತನಾಡಿದರು. ಜಿಪಂ ಸದಸ್ಯರಾದ ವಿಜಯಲಕ್ಷ್ಮಿ, ಆರ್.ರಾಜೇಶ್ವರಿ, ನಿವೃತ್ತ ಶಿಕ್ಷಣಾಧಿಕಾರಿ ಎಸ್.ಜೋಗಪ್ಪ, ರೈತ ಸಂಘದ ಅಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ, ಹೊರಕೇರಪ್ಪ, ನಗರಸಭೆ ಸದಸ್ಯರಾದ ಜಿ.ಎಸ್.ತಿಪ್ಪೇಸ್ವಾಮಿ, ಶಿವರಂಜನಿ, ಚಿತ್ರಜಿತ್ ಯಾದವ್, ಸಮಿತಿ ಸಂಸ್ಥಾಪಕ ಅಧ್ಯಕ್ಷ ಜೆ.ಓಬಳೇಶ, ಅಧ್ಯಕ್ಷ ಕೆ.ರಾಮಾಂಜನೇಯ, ಉಪಾಧ್ಯಕ್ಷ ದಾಸನಾಯಕ, ಶಿವು, ಚನ್ನಕೇಶವ, ರಮೇಶ್, ಪ್ರತಾಪ್, ಮಂಜುನಾಥ್ ಇತರರಿದ್ದರು. ಶ್ರೀದೇವಿ ಮಹಾತ್ಮೆ ನಾಟಕ ಪ್ರದರ್ಶನ ನೆರವೇರಿತು.