

ಹಿರಿಯೂರು: ಜನತಾ ಕರ್ಫ್ಯೂಗೆ ತಾಲೂಕಿನ ಜನರಿಂದ ಅಭೂತ ಪೂರ್ವ ಬೆಂಬಲ ವ್ಯಕ್ತವಾಯಿತು.
ಭಾನುವಾರ ಬೆಳಗ್ಗೆಯಿಂದಲೇ ಜನರು ಸ್ವಯಂಪ್ರೇರಿತವಾಗಿ ವ್ಯಾಪಾರ ವಹಿವಾಟು ಸೇರಿ ನಿತ್ಯದ ಎಲ್ಲ ಚಟುವಟಿಕೆಗೆ ವಿರಾಮ ಹಾಕಿ ಮನೆಯಲ್ಲಿ ಉಳಿದು ಕರೊನಾ ವೈರಸ್ ತಡೆಗೆ ದೃಢ ಸಂಕಲ್ಪ ಮಾಡಿದರು.
ಹಿರಿಯೂರಿನಲ್ಲಿ ಎರಡು ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದ್ದು ನಿತ್ಯ ಸಾವಿರಾರು ವಾಹನ, ಪ್ರಯಾಣಿಕರ ಸಂಚರಿಸುತ್ತಿದ್ದರು. ಇಂದು ಸರ್ಕಾರಿ, ಖಾಸಗಿ ಬಸ್, ಲಾರಿ, ಕಾರು, ಆಟೋ ರಿಕ್ಷಾ, ಬೈಕ್ ಇತರ ವಾಹನ ಸಂಚಾರ ಸಂಪೂರ್ಣ ಸ್ಥಗಿತವಾಗಿತ್ತು.
ವಿವಿ ಸಾಗರ, ತೇರುಮಲ್ಲೇಶ್ವರ ದೇಗುಲ, ಹಾರನಕಣಿವೆ ರಂಗನಾಥ ಸ್ವಾಮಿ, ವದ್ದಿಕೆರೆ ಸಿದ್ದೇಶ್ವರ ಸ್ವಾಮಿ, ಕಣಿವೆ ಮಾರಮ್ಮ, ತೋಪಿನ ಗೊಲ್ಲಾಳಮ್ಮ ದೇಗುಲ ಬಂದ್ ಮಾಡಲಾಗಿತ್ತು.
ಗ್ರಾಮೀಣ ರೈತರು, ಕೂಲಿ ಕಾರ್ಮಿಕರು ಕೃಷಿ ಚಟುವಟಿಕೆಗಳನ್ನು ಬದಿಗೊತ್ತಿ, ಪ್ರಧಾನಿ ಮೋದಿ ಕರೆಗೆ ಬೆಂಬಲ ವ್ಯಕ್ತಪಡಿಸಿ, ಗ್ರಾಮೀಣ ಭಾಗಕ್ಕೆ ಕರೊನಾ ವೈರಸ್ ಹರಡದಂತೆ ದೇವರಲ್ಲಿ ಪ್ರಾರ್ಥಿಸಿದರು.
ಗ್ರಾಮೀಣ ಭಾಗ, ಹೋಬಳಿ ಕೇಂದ್ರದಲ್ಲಿ ಜನರ ಓಡಾಟ ವಿರಳವಾಗಿತ್ತು. ದೇಶದಲ್ಲಿ ಜನತಾ ಕರ್ಫ್ಯೂ ಜಾರಿಯಲ್ಲಿದ್ದರೂ ತಾಲೂಕಿನ ವಿವಿ ಸಾಗರ ಜಲಾಶಯ ದ ಎಡ-ಬಲ ದಂಡೆ ವ್ಯಾಪ್ತಿಯಲ್ಲಿ ಯುವಕರ ದಂಡು ನಾಲೆಯಲ್ಲಿ ಈಜಲು ಜಮಾಯಿಸಿದ್ದ ಸುದ್ದಿ ತಿಳಿದ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಯುವಕರನ್ನು ಮನೆಗೆ ತೆರಳುವಂತೆ ಸೂಚಿಸಿದರು.