ತೋಟಗಾರಿಕೆ ಬೆಳೆಗೂ ಕರೊನಾ ಫಜೀತಿ

HYR horticalture 27
Published on

ಹಿರಿಯೂರು: ಕರೊನಾ ವೈರಸ್ ಎಫೆಕ್ಟ್ ತೋಟಗಾರಿಕೆ ಬೆಳೆಗಳಿಗೂ ತಟ್ಟಿದ್ದು, ಫಸಲಿಗೆ ಬಂದಿರುವ ಹಣ್ಣುಗಳು ಗಿಡದಲ್ಲಿಯೇ ಕೊಳೆಯುತ್ತಿವೆ.

ಹಿರಿಯೂರು ಮತ್ತು ಹೊಸದುರ್ಗ ತಾಲೂಕಿನಲ್ಲಿ ಅತಿ ಹೆಚ್ಚು ತೋಟಗಾರಿಕೆ, ಹಣ್ಣಿನ ಬೆಳೆ ಬೆಳೆಯಲಾಗುತ್ತಿದೆ. ಅಂತರ್ಜಲ ವಿಫಲ, ಬೆಳೆ ನಷ್ಟ, ರೋಗ ಬಾಧೆ, ಬೆಲೆ ಕುಸಿತದಿಂದ ಸಂಕಷ್ಟದಲ್ಲಿರುವ ರೈತರಿಗೆ ಗಾಯದ ಮೇಲೆ ಬರೆ ಎಳೆದಂತೆ. ಕರೊನಾ ವೈರಸ್ ಭೀತಿಯಿಂದ ದೇಶದಲ್ಲಿ ಲಾಕ್‌ಡೌನ್ ಘೋಷಿಸಿರುವುದರಿಂದ ಹಣ್ಣುಗಳನ್ನು ಕಟಾವು ಮಾಡಲು ಖರೀದಿದಾರರು ಬರುತ್ತಿಲ್ಲ ಎಂಬುದು ರೈತರ ಅಳಲು.

ಹಿರಿಯೂರು-ಹೊಸದುರ್ಗ ತಾಲೂಕಿನಲ್ಲಿ ಗುಣಮಟ್ಟದ ಹಣ್ಣುಗಳನ್ನು ಬೆಳೆಯಲಾಗುತ್ತದೆ. ಇಲ್ಲಿ ಬೆಳೆದ ಹಣ್ಣುಗಳಿಗೆ ಬೆಂಗಳೂರು ಪ್ರಮುಖ ಮಾರುಕಟ್ಟೆ, ನಿತ್ಯ ಜಿಲ್ಲೆಯಿಂದ ಸಾವಿರಾರು ಲೋಡ್ ಹಣ್ಣುಗಳನ್ನು ಮಾರುಕಟ್ಟೆಗೆ ಸಾಗಿಸಲಾಗುತ್ತಿತ್ತು. ಮಾರ್ಚ್-ಏಪ್ರಿಲ್ ತಿಂಗಳಲ್ಲಿ ಬಹುತೇಕ ಹಣ್ಣಿನ ಬೆಳೆಗಳು ಕಟಾವಿಗೆ ಬರಲಿದ್ದು, ಕರೊನಾ ಕರಿನೆರಳು ಅನ್ನದಾತರನ್ನು ಸಂಕಷ್ಟಕ್ಕೆ ದೂಡಿದೆ.

ಲಾಕ್‌ಡೌನ್ ಪರಿಣಾಮ ಎಲ್ಲೆಡೆ ಚೆಕ್‌ಪೋಸ್ಟ್ ಹಾಕಿ ವಾಹನ ಸಂಚಾರ ನಿರ್ಬಂಧಿಸಿರುವುದು ಹಣ್ಣುಗಳನ್ನು ಕೊಳ್ಳಲು ಖರೀದಿದಾರರು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. ಕರೊನಾ ಎಫೆಕ್ಟ್ ನಿಂದ ಈಗಾಗಲೇ ಹಣ್ಣುಗಳ ಬೆಲೆ ಕುಸಿದಿರುವುದು ರೈತರನ್ನು ಹೈರಾಣಾಗಿಸಿದೆ. ಲಕ್ಷಾಂತರ ರೂ. ಖರ್ಚು ಮಾಡಿ ಉತ್ತಮ ಫಸಲು ಬೆಳೆದಿದ್ದು, ಕೈಗೆ ಬಂದ ತುತ್ತು ಬಾಯಿಗೆ ಇಲ್ಲದಂತಾಗಿದೆ, ಅನ್ನದಾತರ ಪರಿಸ್ಥಿತಿ.

ಗ್ರಾಮಮಟ್ಟದಲ್ಲಿ ಪಾಸ್ ವಿತರಿಸಿ: ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸಲು ಜಿಲ್ಲಾ ಮಟ್ಟದಲ್ಲಿ ಪಾಸ್ ವಿತರಣೆ ಮಾಡುತ್ತಿರುವುದು ಅವೈಜ್ಞಾನಿಕವಾಗಿದೆ. ಜನರ ಸಂಚಾರಕ್ಕೆ ನಿರ್ಬಂಧ ಹಾಕಿರುವುದರಿಂದ ರೈತರು ಜಿಲ್ಲಾ ಕೇಂದ್ರಕ್ಕೆ ಹೋಗಿ ಪಾಸ್ ಪಡೆಯಲು ಸಾಧ್ಯವಾಗುತ್ತಿಲ್ಲ. ಗ್ರಾಮ ಮಟ್ಟದಲ್ಲಿ ಕಂದಾಯ ಇಲಾಖೆ-ಗ್ರಾಮ ಪಂಚಾಯತ್ ವತಿಯಿಂದ ಪಾಸ್ ವಿತರಿಸುವಂತೆ ರೈತರು ಆಗ್ರಹಿಸಿದ್ದಾರೆ.

ಪೊಲೀಸರ ಭಯ: ಹಳ್ಳಿಗಳಲ್ಲಿ ರೈತರು ಬೆಳೆದ ತರಕಾರಿ, ಹಣ್ಣು-ಹಂಪಲು ಇತರ ಕೃಷಿ ಉತ್ಪನ್ನಗಳನ್ನು ಎಪಿಎಂಸಿ ಮಾರುಕಟ್ಟೆ, ಜಿಲ್ಲಾ ಕೇಂದ್ರಕ್ಕೆ ಸಾಗಿಸಲು ಸಾಧ್ಯವಾಗುತ್ತಿಲ್ಲ. ಪೊಲೀಸರ ಲಾಠಿ ಏಟಿನ ಭಯದಿಂದ ಹಣ್ಣು ಮತ್ತು ತರಕಾರಿ ಕಟಾವು ಮಾಡದೆ ಹೊಲದಲ್ಲಿಯೇ ಬಿಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net