

ಹಿರಿಯೂರು: ಕರೊನಾ ವೈರಸ್ ಭೀತಿಗೆ ಹಿರಿಯೂರು ನಗರ ಪೂರ್ಣ ಲಾಕ್ ಡೌನ್ ಆಗಿದೆ. ಯುಗಾದಿ ಹಬ್ಬದ ಖರೀದಿಗೆ ಸ್ವಲ್ಪ ರಿಲೀಫ್ ನೀಡಲಾಗಿತ್ತಾದರೂ ಹಬ್ಬ ಮುಗಿಯುತ್ತಿದ್ದಂತೆ ಜನರ ಓಡಾಟಕ್ಕೆ ಪೊಲೀಸ್ ಇಲಾಖೆ ಬ್ರೇಕ್ ಹಾಕಿದೆ.
ವಾಹನಗಳ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ. ಕೆಲವೆಡೆ ಅನಾವಶ್ಯವಾಗಿ ಓಡಾಡುವ ಬೈಕ್ ಸವಾರರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ. ಗ್ರಾಮೀಣ ಭಾಗದಲ್ಲಿ ಜನರ ಓಡಾಟ ಸಾಮಾನ್ಯವಾಗಿತ್ತು.
ಆಂಧ್ರ-ಕರ್ನಾಟಕ ಗಡಿ ಅರೆ-ಬರೆ ಬಂದ್: ಆಂಧ್ರಪ್ರದೇಶ ಸರ್ಕಾರ ತನ್ನ ಗಡಿಗಳನ್ನು ಸಂಪೂರ್ಣ ಬಂದ್ ಮಾಡಿದೆ. ಆದರೆ, ನಮ್ಮ ರಾಜ್ಯದ ಗಡಿಗಳನ್ನು ಅರೆ-ಬರೆ ಬಂದ್ ಮಾಡಿದ್ದ ಪರಿಣಾಮ ಗಡಿ ಗ್ರಾಮದಲ್ಲಿ ಮದ್ಯ, ಗುಟ್ಕಾ, ಸಿಗರೇಟ್ ಖರೀದಿಸಲು ಆಂಧ್ರ ಜನತೆ ಲಗ್ಗೆ ಇಡುತ್ತಿದ್ದಾರೆ.
ಈ ಮಧ್ಯೆ ಕೆಲ ಗ್ರಾಮಗಳ ಗ್ರಾಮಸ್ಥರು ಕರೊನಾ ವೈರಸ್ ಹರಡುವ ಭೀತಿಯಿಂದ ತಮ್ಮ ಗ್ರಾಮಗಳಿಗೆ ಬೇಲಿ ಹಾಕಿಕೊಂಡು ಸ್ವಯಂ ನಿಷೇಧ ವಿಧಿಸಿಕೊಂಡಿದ್ದಾರೆ. ಯಾರಾದರೂ ಅತಿ ಕ್ರಮ ಪ್ರವೇಶ ಮಾಡಿದರೆ ಎರಡು ಏಟು ಹಾಕುತ್ತಿದ್ದಾರೆ.
ಆಂಧ್ರದಲ್ಲಿ ಗುಟ್ಕಾ, ಮದ್ಯ ಮಾರಾಟ ಸ್ಥಗಿತಗೊಂಡಿದೆ. ಇವನ್ನು ಗಡಿ ಗ್ರಾಮಗಳಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ತುಮಕೂರು ಜಿಲ್ಲೆಯ ಇಂಟರ್ ಸ್ಟೇಟ್ ಚೆಕ್ ಪೋಸ್ಟ್ ಮಾದರಿ ನಮ್ಮ ಗಡಿಯಲ್ಲೂ ಚೆಕ್‌ಪೋಸ್ಟ್ ಹಾಕಿ ಜನರ ಓಡಾಟಕ್ಕೆ ಕಡಿವಾಣ ಹಾಕಬೇಕಿದೆ ಎಂದು ಕೆಲವರು ಮನವಿ ಮಾಡಿದ್ದಾರೆ.
ಯಾವುದಕ್ಕೆ ಎಷ್ಟು ಬೆಲೆ: ಒಂದು ಗುಟ್ಕಾ 25-30 ರೂ., ಸಿಗರೇಟ್ 20-30 ರೂ., ಮದ್ಯ ಒಟಿ 1 ಕ್ವಾಟರ್‌ಗೆ 200 ರೂ, ಬಿಯರ್ 250-300 ರೂ, ರಾಜಾವಿಸ್ಕಿ 150 ರೂ. ನಿಗದಿಪಡಿಸಲಾಗಿದೆ.