ದೃಢೀಕರಣ ಪತ್ರಕ್ಕೆ ಅನ್ನದಾತರ ಅಲೆದಾಟ

HYR Atal ji 16
Published on

ಖಂಡೇನಹನಹಳ್ಳಿ ಬಸವರಾಜ್ ಹಿರಿಯೂರು: ಕಂದಾಯ ಇಲಾಖೆಯಲ್ಲಿನ ತಾಂತ್ರಿಕ ಸಮಸ್ಯೆಯಿಂದಾಗಿ ಬೆಳೆ ದೃಢೀಕರಣ ಪ್ರಮಾಣ ಪತ್ರ ವಿಳಂಬ ಆಗಿರುವುದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೈತರಿಗೆ ಸಕಾಲಕ್ಕೆ ಬೆಳೆ ದೃಢೀಕರಣ ಪತ್ರ, ವಂಶವೃಕ್ಷ, ಪಹಣಿ, ಮ್ಯುಟೇಷನ್ ಇತರ ಸೇವೆಗಳನ್ನು ಒಂದೇ ಸೂರಿನಡಿ ನೀಡಲು ನಾಡ ಕಚೇರಿಯ ಅಟಲ್ ಜೀ ಜನಸ್ನೇಹಿ ಕೇಂದ್ರದಲ್ಲಿ ಅವಕಾಶ ಕಲ್ಪಿಸಿದ್ದು, ಪ್ರಮಾಣ ಪತ್ರಕ್ಕೆ ದಿನ ನಿತ್ಯ ರೈತರು ಅಲೆಯುವಂತಾಗಿದೆ.

ಕಂದಾಯ ಇಲಾಖೆ ಇತ್ತೀಚೆಗೆ ರೈತರು ಪಹಣಿ ಒಟ್ಟುಗೂಡಿಸುವಿಕೆ ಕಾರ್ಯದಿಂದ ಬೆಳೆ ದೃಢೀಕರಣ ವಿತರಣೆಗೆ ತಾಂತ್ರಿಕ ಸಮಸ್ಯೆ ಇದೆ ಎನ್ನಲಾಗಿದೆ. ರೈತರ ಜಮೀನಿನ ಪಹಣಿ ಕಲಂ 12/2ರಲ್ಲಿ ಖಾತೆದಾರರ ಹೆಸರು ಮುದ್ರಿತವಾಗಿಲ್ಲದೆ ಇರುವುದರಿಂದ ಬೆಳೆ ದೃಢೀಕರಣ ಪ್ರಮಾಣ ಪತ್ರ ಪಡೆಯಲು ಸಾಧ್ಯವಾಗುತ್ತಿಲ್ಲ.

ಕೃಷಿಕರು ನಾಡ ಕಚೇರಿಯ ಅಟಲ್ ಜೀ ಜನಸ್ನೇಹಿ ಕೇಂದ್ರದಲ್ಲಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸುತ್ತಾರೆ. ಆದರೆ, ಪಹಣಿಯಲ್ಲಿನ ಲೋಪ-ದೋಷದಿಂದ ಅರ್ಜಿ ಸ್ವೀಕಾರವಾಗುತ್ತಿಲ್ಲ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಳಲು ತೋಡಿಕೊಳ್ಳುತ್ತಾರೆ ಕಂದಾಯ ಇಲಾಖೆ ಸಿಬ್ಬಂದಿ.

ಇಂಟರ್‌ನೆಟ್ ಸಮಸ್ಯೆ: ಕಂದಾಯ ಇಲಾಖೆಯಲ್ಲಿ ರೈತರಿಗೆ ತ್ವರಿತ ಸೇವೆ ಒದಗಿಸಲು ಅಟಲ್ ಜೀ ಜನಸ್ನೇಹಿ ಕೇಂದ್ರ ತೆರೆಯಲಾಗಿದ್ದು. ಪದೇ ಪದೆ ಸರ್ವರ್, ಇಂಟರ್ ನೆಟ್ ಸಮಸ್ಯೆಯಿಂದ ಸಾರ್ವಜನಿಕರು, ರೈತರು, ವಿದ್ಯಾರ್ಥಿಗಳು ವಿವಿಧ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಲು ದಿನಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲಬೇಕಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net