

ಹಿರಿಯೂರು: ಸಾಧನೆಗೆ ಬಡತನ ಅಡ್ಡಿಯಲ್ಲ. ಗೆಲ್ಲುವ ಛಲ, ಆತ್ಮವಿಶ್ವಾಸವಿದ್ದರೆ ಎಂತಹ ಕಾರ್ಯವನ್ನು ಸಾಧಿಸಬಹುದು ಎಂಬುದಕ್ಕೆ ತರಕಾರಿ ವ್ಯಾಪಾರಿ ಮಗಳು ನಿದರ್ಶನವಾಗಿದ್ದಾಳೆ.
ನಗರದ ನಿವಾಸಿ ಲಲಿತಾ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದ ಏರೋನಾಟಿಕ್ ಇಂಜಿನಿಯರಿಂಗ್‌ನಲ್ಲಿ 9.7 ಗ್ರೇಡ್ ಗಳಿಸುವ ಮೂಲಕ ಪ್ರಥಮ ರ‌್ಯಾಂಕ್ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾಳೆ.
ತಂದೆ ರಾಜೇಂದ್ರ, ತಾಯಿ ಆರ್.ಚಿತ್ರಾ ನಗರದಲ್ಲಿ ತರಕಾರಿ ಮಾರಾಟದಿಂದ ಬದುಕು ಕಟ್ಟಿಕೊಂಡಿದ್ದಾರೆ. ಇವರಿಗೆ ಮೂವರು ಪುತ್ರಿಯರಿದ್ದು, ಲಲಿತಾ ರ‌್ಯಾಂಕ್ ಗಳಿಸಿರುವುದು ಕುಟುಂಬಸ್ಥರ ಸಂತಸಕ್ಕೆ ಕಾರಣವಾಗಿದೆ.
ಪ್ರಾಥಮಿಕ-ಪ್ರೌಢ ಶಿಕ್ಷಣವನ್ನು ನಗರದ ವಾಗ್ದೇವಿ ಶಾಲೆಯಲ್ಲಿ ಪೂರೈಸಿರುವ ಲಲಿತಾ ಎಸ್ಸೆಸ್ಸೆಲ್ಸಿಯಲ್ಲಿ ಶೇ.94.24, ಪಿಯು ಪರೀಕ್ಷೆಯಲ್ಲಿ ಶೇ.92 ಅಂಕ, ಸಿಇಟಿ ಪರೀಕ್ಷೆಯಲ್ಲಿ ಉತ್ತಮ ರ‌್ಯಾಂಕ್ ಪಡೆದಿದ್ದಳು. ಬೆಂಗಳೂರಿನ ಈಸ್ಟ್ ವೆಸ್ಟ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಏರೋನಾಟಿಕಲ್ ಇಂಜಿನಿಯರಿಂಗ್ ವಿಭಾಗದ ಎಲ್ಲ ಸೆಮಿಸ್ಟರ್‌ನಲ್ಲಿ ಹೆಚ್ಚು ಅಂಕ ಗಳಿಸಿದ್ದಾಳೆ.
ಮಗಳ ಪ್ರತಿಭೆ ಗುರುತಿಸಿದ್ದ ಪಾಲಕರು ಬಡತನದ ನಡುವೆ ಉತ್ತಮ ಶಿಕ್ಷಣ ಕೊಡಿಸಿ ಓದುವ ಆಸೆಗೆ ನೀರೆರೆದು ಪೋಷಿಸಿದ್ದಾರೆ. ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಫೆ.8ರಂದು ನಡೆಯುವ ಘಟಿಕೋತ್ಸವದಲ್ಲಿ ಲಲಿತಾ ಚಿನ್ನದ ಪದಕಕ್ಕೆ ಭಾಜನರಾಗಲಿದ್ದಾರೆ.